ಕಳಪೆ ಜೋಳದ ಬೀಜ ವಿತರಿಸಿದ ಕಂಪನಿ ವಿರುದ್ಧ ಕ್ರಮಕ್ಕೆ ಆಗ್ರಹ

KannadaprabhaNewsNetwork |  
Published : Nov 07, 2026, 03:15 AM IST
ಎಮ್ಮಿಗನೂರು ಗ್ರಾಮದ ರೈತರಿಗೆ ವಿತರಿಸಿದ 3201 ತಳಿಯ ಜೋಳದ ಬೀಜ ಕಳಪೆಯಾಗಿದ್ದು, ಬೆಳೆ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಎಐಕೆಕೆಎಎಂಎಸ್ ಸಂಘಟನೆ ಪದಾಧಿಕಾರಿಗಳು ಕೃಷಿ ಅಧಿಕಾರಿ ಟಿ.ಜ್ಯೋತಿ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಎಮ್ಮಿಗನೂರು ಗ್ರಾಮದ ರೈತರಿಗೆ ಖಾಸಗಿ ಕಂಪನಿಯೊಂದು ವಿತರಿಸಿರುವ 3201 ತಳಿಯ ಜೋಳದ ಬೀಜ ಕಳಪೆ ಗುಣಮಟ್ಟದ್ದಾಗಿವೆ

ಕಂಪ್ಲಿ: 3201 ತಳಿಯ ಕಳಪೆ ಗುಣಮಟ್ಟದ ಜೋಳದ ಬೀಜ ವಿತರಿಸಿ ರೈತರಿಗೆ ನಷ್ಟ ಉಂಟು ಮಾಡಿರುವ ಕಂಪನಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಬೆಳೆ ನಷ್ಟಕ್ಕೊಳಗಾದ ರೈತರಿಗೆ ಪ್ರತಿ ಎಕರೆಗೆ ₹1.50 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಎಂಎಸ್) ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಜೂಗಲ್ ಮಂಜುನಾಯಕ ಹಾಗೂ ಕೃಷಿ ಅಧಿಕಾರಿ ಟಿ.ಜ್ಯೋತಿಗೆ ಮನವಿ ಸಲ್ಲಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಗೋವಿಂದ ಮಾತನಾಡಿ, ಎಮ್ಮಿಗನೂರು ಗ್ರಾಮದ ರೈತರಿಗೆ ಖಾಸಗಿ ಕಂಪನಿಯೊಂದು ವಿತರಿಸಿರುವ 3201 ತಳಿಯ ಜೋಳದ ಬೀಜ ಕಳಪೆ ಗುಣಮಟ್ಟದ್ದಾಗಿವೆ. ಇದರಿಂದ ನೂರಾರು ರೈತರು ಬೆಳೆದಿರುವ ಜೋಳದ ಬೆಳೆ ಸಮರ್ಪಕವಾಗಿ ಬೆಳವಣಿಗೆಯಾಗದೆ ಸಂಪೂರ್ಣ ನಾಶವಾಗುವ ಹಂತ ತಲುಪಿದೆ. ಬೀಜಗಳ ಗುಣಮಟ್ಟದ ಬಗ್ಗೆ ರೈತರು ಕಂಪನಿಯ ಡೀಲರ್‌ಗಳ ಮೂಲಕ ಗಮನಕ್ಕೆ ತಂದಿದ್ದರೂ ಕಂಪನಿ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ಈಗಾಗಲೇ ರೈತರು ಬೀಜ, ಗೊಬ್ಬರ ಹಾಗೂ ಕೃಷಿ ಚಟುವಟಿಕೆಗಳಿಗಾಗಿ ಸಾವಿರಾರು ವೆಚ್ಚ ಮಾಡಿದ್ದಾರೆ. ಈ ಬಾರಿ ತುಂಗಭದ್ರಾ ಜಲಾಶಯದಿಂದ ಸಮರ್ಪಕವಾಗಿ ನೀರು ದೊರೆಯುವ ಬಗ್ಗೆ ಅನಿಶ್ಚಿತತೆ ಇದ್ದರೂ ರಸಗೊಬ್ಬರ ಹಾಗೂ ಕೃಷಿ ಪರಿಕರಗಳ ಬೆಲೆ ಏರಿಕೆಯ ನಡುವೆಯೂ ಸಾಲ ಮಾಡಿ ಬೆಳೆ ಬೆಳೆದಿದ್ದಾರೆ. ಇಂತಹ ಸಂದರ್ಭದಲ್ಲಿ ಕಳಪೆ ಬೀಜದಿಂದ ಬೆಳೆ ಹಾಳಾಗುತ್ತಿರುವುದು ರೈತರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ರೈತರು ಮಾಡಿದ ಬಂಡವಾಳವೂ ಕೈಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಕೃಷಿ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಜಮೀನುಗಳ ಪರಿಶೀಲನೆ ನಡೆಸಬೇಕು. ಬೀಜಗಳ ಗುಣಮಟ್ಟ ವೈಜ್ಞಾನಿಕವಾಗಿ ಪರೀಕ್ಷಿಸಿ, ಕಳಪೆ ಬೀಜ ವಿತರಿಸಿರುವ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಎಕರೆಗೆ ₹1.50 ಲಕ್ಷ ಪರಿಹಾರ ಕೊಡಿಸಲು ಸಂಬಂಧಿಸಿದ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಈ. ಹನುಮಂತಪ್ಪ ಮಾತನಾಡಿ, ರೈತರಿಗೆ ಕಳಪೆ ಬೀಜ ವಿತರಿಸಿರುವ ಕಂಪನಿಯ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು. ಕಂಪನಿಯ ಬೀಜ ವಿತರಣಾ ಪರವಾನಗಿ ರದ್ದುಗೊಳಿಸಬೇಕು. ರೈತರ ಹಿತಾಸಕ್ತಿ ಕಾಪಾಡುವಲ್ಲಿ ಕೃಷಿ ಇಲಾಖೆ ನಿರ್ಲಕ್ಷ್ಯ ವಹಿಸಬಾರದು. ರೈತರಿಗೆ ನ್ಯಾಯ ಒದಗಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ಭಾಗದ ರೈತರನ್ನು ಸಂಘಟಿಸಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ಕುರುಗೋಡು ತಾಲೂಕು ಉಪಾಧ್ಯಕ್ಷ ಕಲ್ಲುಕಂಬ ಪಂಪಾಪತಿ, ರೈತರಾದ ಸತ್ಯನಾರಾಯಣ ರೆಡ್ಡಿ, ರಾಮಕೃಷ್ಣ ಗೌಡ, ವೆಂಕೋಬ, ಕಾಸಿಂಸಾಬ್, ಈರಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ