ಚಿಕ್ಕಬಾಸೂರಿನಲ್ಲಿ ಎಪಿಎಂಸಿ ಗೋದಾಮು ದುರ್ಬಳಕೆ: ಕ್ರಮಕ್ಕೆ ಆಗ್ರಹ

KannadaprabhaNewsNetwork |  
Published : Jun 01, 2025, 02:26 AM IST
ಎಪಿಎಂಸಿ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರವೇ ಸ್ವಾಭಿಮಾನ ಬಣ ಹಾಗೂ ಜೆಡಿಎಸ್ ಕಾರ್ಯಕರ್ತರು ಚಿಕ್ಕಬಾಸೂರಿನಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಚಿಕ್ಕಬಾಸೂರಿನ ಎಪಿಎಂಸಿ ಗೋದಾಮು ದುರ್ಬಳಕೆ ಮಾಡಿಕೊಂಡಿರುವ ವ್ಯಕ್ತಿಗಳ ಮತ್ತು ಎಪಿಎಂಸಿ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರವೇ ಸ್ವಾಭಿಮಾನ ಬಣ ಹಾಗೂ ಜೆಡಿಎಸ್ ಕಾರ್ಯಕರ್ತರು ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರಿನಲ್ಲಿ ಪ್ರತಿಭಟನೆ ನಡೆಸಿದರು.

ಬ್ಯಾಡಗಿ: ಕೃಷಿ ಮಾರಾಟ ಇಲಾಖೆಗೆ ಬಿಡಿಗಾಸು ಬಾಡಿಗೆ ಭರಿಸದೇ ಎರಡು ವರ್ಷದಿಂದ ಚಿಕ್ಕಬಾಸೂರಿನ ಎಪಿಎಂಸಿ ಗೋದಾಮು ದುರ್ಬಳಕೆ ಮಾಡಿಕೊಂಡಿರುವ ಖಾಸಗಿ ವ್ಯಕ್ತಿಗಳ ಮತ್ತು ಅದಕ್ಕೆ ಸಹಕರಿಸಿದ ಎಪಿಎಂಸಿ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರವೇ ಸ್ವಾಭಿಮಾನ ಬಣ ಹಾಗೂ ಜೆಡಿಎಸ್ ಕಾರ್ಯಕರ್ತರು ಚಿಕ್ಕಬಾಸೂರಿನಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಸುವರ್ಣಮ್ಮ ಮಾತನಾಡಿ, ಗ್ರಾಮದ ಎಪಿಎಂಸಿ ಆವರಣದಲ್ಲಿ ರೈತರ ಅನುಕೂಲಕ್ಕಾಗಿ ಸಾವಿರ ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯದ ಗೋದಾಮು ಒಂದನ್ನು ಕಳೆದ 2017ರಲ್ಲಿಯೇ ನಿರ್ಮಿಸಿದೆ. ಆದರೆ ನಿಯಮದಂತೆ ದಿನಪತ್ರಿಕೆಗಳಲ್ಲಿ ಟೆಂಡರ್ ಕರೆದು ಸ್ಪರ್ಧಾತ್ಮಕ ದರದಲ್ಲಿ ಅತಿ ಹೆಚ್ಚು ಬಾಡಿಗೆ ನೀಡುವವರಿಗೆ ಮುಂಗಡ ಹಣ ಭರಿಸಿಕೊಂಡು ಕೇಂದ್ರ ಕಚೇರಿಯ ನಿರ್ದೇಶಕರ ಅನುಮೋದನೆ ಪಡೆದು ಬಾಡಿಗೆ ನೀಡಬೇಕು. ಆದರೆ ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಇಲ್ಲಿನ ಎಪಿಎಂಸಿ ಸಿಬ್ಬಂದಿ ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಬಾಡಿಗೆ ನೀಡಿದ್ದು ಗಮನಕ್ಕೆ ಬಂದಿದೆ. ಕೂಡಲೇ ಜಿಲ್ಲಾಧಿಕಾರಿ ಮದ್ಯಪ್ರವೇಶಿಸಿ ಪ್ರಮಾದಕ್ಕೆ ಕಾರಣವಾಗಿರುವ ವ್ಯಕ್ತಿಗಳನ್ನು ಅಮಾನತು ಮಾಡಬೇಕು ಮತ್ತು ಬಾಡಿಗೆ ಪಡೆದ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು. ಜೆಡಿಎಸ್ ತಾಲೂಕಾಧ್ಯಕ್ಷ ಮೋಹನ ಬಿನ್ನಾಳ ಮಾತನಾಡಿ, ವಿಷಯ ತಿಳಿಯುತ್ತಿದ್ದಂತೆ ಗೋದಾಮಿನಲ್ಲಿದ್ದ ಗೋವಿನಜೋಳವನ್ನು ರಾತ್ರೋರಾತ್ರಿ ಸಾಗಾಟ ಮಾಡಲಾಗಿದ್ದು, ಈ ಕುರಿತು ವಿಡಿಯೋಗಳು ನಮ್ಮ ಬಳಿ ಲಭ್ಯವಿದೆ. ಅವುಗಳನ್ನು ಸಾಕ್ಷಿಯಾಗಿ ಪರಿಗಣಿಸಿ ಲಾರಿಗಳನ್ನು ಸೀಸ್ ಮಾಡಬೇಕು ಆಗ್ರಹಿಸಿದರು.ಗೋದಾಮು ನಿರ್ವಹಣೆ ಕುರಿತು ರಜಿಸ್ಟರ್‌ನಲ್ಲಿ ಏನನ್ನೂ ನಮೂದಿಸದೆ ಖಾಲಿ ಉಳಿದಿದೆ ಎಂಬುದಾಗಿ ಮೇಲಧಿಕಾರಿಗಳಿಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಇದು ಮತ್ತೊಂದು ಪ್ರಮಾದ. ಟೆಂಡರ್ ಪ್ರಕ್ರಿಯೆ ನಡೆಯದೇ, ಠರಾವು ಮಾಡದೇ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದರು.

ಜಿಲ್ಲಾ ಉಪಾಧ್ಯಕ್ಷ ಷಣ್ಮುಖಪ್ಪ ಮೆಣಸಿನಕಾಯಿ ಮಾತನಾಡಿ, ಸುಖದ ಜೀವನ ನಡೆಸಲೆಂದೇ ಕೃಷಿ ಮಾರಾಟ ಇಲಾಖೆ ತನ್ನ ಸಿಬ್ಬಂದಿಗೆ ಲಕ್ಷಗಟ್ಟಲೇ ವೇತನ ನೀಡುತ್ತಿದೆ. ಆದರೆ ಕಾಯ್ದೆಯಂತೆ ತಿಂಗಳಿಗೆ ಕನಿಷ್ಠ ₹70 ಸಾವಿರ ಬಾಡಿಗೆ ಬರುವಂತಹ ಕಟ್ಟಡವನ್ನು ಕಳೆದ ಎರಡ್ಮೂರು ವರ್ಷದಿಂದ ಬೇರೊಬ್ಬರಿಗೆ ಬಾಡಿಗೆ ಕೊಟ್ಟು ಶುಲ್ಕದ ಲೆಕ್ಕ ತೋರಿಸದೆ ಅವ್ಯವಹಾರ ನಡೆಸುವ ಮೂಲಕ ಅನ್ನ ನೀಡಿದ ತನ್ನ ಮಾತೃ ಇಲಾಖೆಗೆ ದೋಖಾ ಮಾಡಿದ್ದು ಅಕ್ಷಮ್ಯ ಅಪರಾಧ ಹಾಗೂ ಖಂಡನೀಯ ಎಂದರು.

ಮಹಿಳಾ ಘಟಕದ ಅಧ್ಯಕ್ಷೆ ಸುಮಾ ಪುರದ ಮಾತನಾಡಿ, ಸರ್ಕಾರದ ಕಟ್ಟಡ ದುರ್ಬಳಕೆಗೆ ಕಾರಣರಾದ ಎಪಿಎಂಸಿ ಸಿಬ್ಬಂದಿ ಬಗ್ಗೆ ಸಮಗ್ರ ತನಿಖೆಯಾಗಬೇಕು. ಘಟನೆ ಕುರಿತು ಸಂಪೂರ್ಣ ಮಾಹಿತಿಯಿರುವ ಭದ್ರತಾ ಸಿಬ್ಬಂದಿಯಿಂದ ನೈಜ ಮಾಹಿತಿ ಸಂಗ್ರಹಿಸಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಎಪಿಎಂಸಿ ಹಣ ದುರ್ಬಳಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಲು ಸಂಘಟನೆ ನಿರ್ಧರಿಸಿದೆ ಎಂದರು.

ರೇಣುಕಾ ಹಾವೇರಿ, ಲೋಹಿತ ಓಲೇಕಾರ, ನಾಗರಾಜ ಕಣಸೋಗಿ, ಕೃಷ್ಣಪ್ಪ ಪೂಜಾರ ಇತರರಿದ್ದರು.ತನಿಖೆ ನಡೆಸಿ: ಕೃಷಿ ಮಾರಾಟ ಇಲಾಖೆ ಸಚಿವರು ಹಾವೇರಿ ಜಿಲ್ಲೆಯ ಉಸ್ತುವಾಗಿ ಸಚಿವರಾಗಿದ್ದು, ಅವರಿರುವ ಸ್ಥಳದಲ್ಲಿಯೇ ಗೋದಾಮು ದುರ್ಬಳಕೆ ಪ್ರಕರಣ ಪತ್ತೆಯಾಗಿದೆ. ಕೂಡಲೇ ಸಚಿವರು ಇಲಾಖೆಯ ಕಣ್ಣಿಗೆ ಮಣ್ಣೆರೆಚಿದ ಸ್ಥಳೀಯ ಸಿಬ್ಬಂದಿ ರಾಜ್ಯದ ಇನ್ನಿತರ ಎಪಿಎಂಸಿಗಳಲ್ಲಿ ಇಂತಹ ಪ್ರಕರಣಗಳು ನಡೆದಿರುವ ಶಂಕೆಯಿದ್ದು, ಕೂಡಲೇ ಎಲ್ಲ ಎಪಿಎಂಸಿಗಳಲ್ಲಿಯೂ ತನಿಖೆ ನಡೆಸಬೇಕು ಎಂದು ಪ್ರತಿಭಟನಕಾರರು ಹೇಳುತ್ತಾರೆ.

PREV

Recommended Stories

ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌
ಖರ್ಗೆ ಕುಟುಂಬದ ವಿರುದ್ಧ ಕೋರ್ಟ್‌ಗೆ ಖಾಸಗಿ ದೂರು