ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಪುರಭವನದಲ್ಲಿ ಆಗಸ್ಟ್ 24ರಂದು ನಡೆದ ತುಳು ಜಾನಪದ ನೃತ್ಯ- 2024 ಕಾರ್ಯಕ್ರಮದಲ್ಲಿ ದಲಿತ ಸಮುದಾಯಕ್ಕೆ ಅವಮಾನ ಮಾಡುವ ನಿಷೇಧಿತ ಜಾತಿ ನಿಂದನೆ ಪದವನ್ನು ಬಳಕೆ ಮಾಡಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಭಾನುವಾರ ನಡೆದ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದ ಮಾಸಿಕ ಸಭೆಯಲ್ಲಿ ದಲಿತ ಮುಖಂಡರು ಈ ಆರೋಪ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಜಾತಿ ನಿಂದಕ ಕೆಲವೊಂದು ಪದಗಳನ್ನು ಬಳಕೆ ಮಾಡದಂತೆ ಸುಪ್ರೀಂ ಕೋರ್ಟ್ ಹಾಗೂ ಸರ್ಕಾರದ ಆದೇಶವಿದ್ದರೂ ಸಾರ್ವಜನಿಕ ನೃತ್ಯ ಕಾರ್ಯಕ್ರಮದಲ್ಲಿ ಹಿರಿಯ ವ್ಯಕ್ತಿಗಳ ಉಪಸ್ಥಿತಿಯಲ್ಲಿಯೇ ದಲಿತ ಸಮುದಾಯಕ್ಕೆ ಜಾತಿ ನಿಂದನೆಯ ಪದ ಬಳಕೆಯ ಮೂಲಕ ಅವಮಾನ ಮಾಡಲಾಗಿದೆ. ಪಣಂಬೂರಿನಲ್ಲಿ ಸುಮಾರು 10 ವರ್ಷಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿಯೂ ಈ ರೀತಿ ಜಾತಿ ನಿಂದಕ ಪದ ಬಳಕೆ ಮಾಡಿದ ಆರೋಪಿಗಳನ್ನು ಬಂಧಿಸಲಾಗಿತ್ತು. ಹಾಗಿದ್ದರೂ ಮತ್ತೆ ಮತ್ತೆ ಇಂತಹ ಸಾರ್ವಜನಿಕವಾಗಿ ಪದಗಳ ಬಳಕೆ ಮಾಡುತ್ತಿರುವುದು ಬೇಸರದ ಸಂಗತಿ ಎಂದು ಎಸ್.ಪಿ. ಆನಂದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಈ ಬಗ್ಗೆ ವೀಡಿಯೋ ದಾಖಲೆಯೊಂದಿಗೆ ದೂರು ನೀಡುತ್ತಿದ್ದು, ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ದೂರಿನ ಮೇರೆಗೆ ಕಾನೂನು ತಜ್ಞರ ಸಲಹೆ ಪಡೆದು ಕ್ರಮ ವಹಿಸುವುದಾಗಿ ಡಿಸಿಪಿ ಸಿದ್ಧಾರ್ಥ ಗೋಯಲ್ ಹೇಳಿದರು.ಪೊಲೀಸ್ ಹೆಸರಲ್ಲಿ ಬ್ಲ್ಯಾಕ್‌ಮೇಲ್: ಗಂಜಿಮಠ ಮೂಡುಪೆರಾರದ ಗ್ರಾಮದ ವಿಠಲ ಎಂಬ ದಲಿತ ವ್ಯಕ್ತಿಗೆ ಮಹಾಲಕ್ಷ್ಮಿ ಹೆಸರಿನಲ್ಲಿ ಪೊಲೀಸ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ ಘಟನೆ ನಡೆದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.
ಅಕ್ರಮ ಮರಳುಗಾರಿಕೆ: ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿದ್ದು, ಪ್ರಕರಣಗಳು ದಾಖಲಾಗುತ್ತಿದ್ದರೂ, ಪ್ರತಿನಿತ್ಯ ಸುಮಾರು 20 ರಷ್ಟು ಲಾರಿಗಳಲ್ಲಿ ಮರಳು ಸಾಗಾಟ ಮುಂದುವರಿದಿದೆ. ದಲಿತ ಕಾಲನಿಯ ಸಮೀಪವೇ ಇದು ನಡೆಯುತ್ತಿದೆ ಎಂದು ರಾಮಚಂದ್ರ ಎಂಬವರು ದೂರಿದರು.ಇತ್ತೀಚೆಗಷ್ಟೇ ನಾಲ್ಕು ಬೋಟು ಹಾಗೂ ಲಾರಿಗಳನ್ನು ವಶಕ್ಕೆ ಪಡೆದು ಕ್ರಮ ವಹಿಸಲಾಗಿದೆ ಎಂದು ಎಸಿಪಿ ಶ್ರೀಕಾಂತ್ ತಿಳಿಸಿದರು.ಹಾಸ್ಟೆಲ್‌ಗಳ ಕೊರತೆ: ದಲಿತ ಸಮುದಾಯದ ಮಕ್ಕಳ ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ಹಾಸ್ಟೆಲ್‌ಗಳ ಕೊರತೆಯಿಂದ ಸಮಸ್ಯೆಯಾಗುತ್ತಿದೆ. ಕಳೆದ ವರ್ಷವೂ ಹಾಸ್ಟೆಲ್‌ಗಾಗಿ ಅರ್ಜಿ ಸಲ್ಲಿಸಿದ್ದ ದಲಿತ ವಿದ್ಯಾರ್ಥಿ ಹಾಸ್ಟೆಲ್‌ನಿಂದ ವಂಚಿತನಾಗಿ ಈ ವರ್ಷ ಮತ್ತೆ ಅರ್ಜಿ ಸಲ್ಲಿಸಿ ಆಯ್ಕೆಯಾಗಿದ್ದ ಆದರೆ ಹಾಸ್ಟೆಲ್ ಲಭ್ಯವಾಗದೆ ಆತ ಪಿಜಿಯಲ್ಲಿದ್ದು, ತಿಂಗಳಿಗೆ ಸುಮಾರು 6,000 ರು. ಬಾಡಿಗೆ ನೀಡಿ ಶಿಕ್ಷಣ ಪಡೆಯುವಂತಾಗಿದೆ. ಸರ್ಕಾರ ದಲಿತರ ಉನ್ನತ ಶಿಕ್ಷಣಕ್ಕೆ ಸಾಕಷ್ಟು ಖರ್ಚು ಮಾಡುತ್ತಿದ್ದರೂ ಅದು ಅರ್ಹರಿಗೆ ಲಭ್ಯವಾಗದಿದ್ದರೆ ಏನು ಪ್ರಯೋಜನ ಎಂದು ದಲಿತ ಮುಖಂಡ ಎಸ್.ಪಿ. ಆನಂದ ದೂರಿದಾಗ, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಗಮನ ಸೆಳೆಯುವುದಾಗಿ ಡಿಸಿಪಿ ದಿನೇಶ್ ಕುಮಾರ್ ತಿಳಿಸಿದರು.