ಕನ್ನಡಪ್ರಭ ವಾರ್ತೆ ಶಿಕಾರಿಪುರ
ನೇತೃತ್ವ ವಹಿಸಿದ್ದ ರೈತ ಸಂಘದ ಜಿಲ್ಲಾ ಸಂಚಾಲಕ ಸಂತೋಷ ಈಸೂರು ಮಾತನಾಡಿ, ತಾಲೂಕಿನ ಈಸೂರು ಉಪಕೇಂದ್ರ ವ್ಯಾಪ್ತಿಯ ಹಿತ್ತಲ, ಮಾಡರವಳ್ಳಿ, ಅರಿಷಿಣಗೆರೆ ಸಹಿತ ಹಲವು ಗ್ರಾಮದ ರೈತರ ಜಮೀನಿನ ಬೋರ್‌ವೆಲ್‌ಗಳಿಗೆ ಜನವರಿ ಆರಂಭದಿಂದ ವಿದ್ಯುತ್ ಪೂರೈಕೆ ಬೇಕಾಬಿಟ್ಟಿಯಾಗಿದ್ದು, ನಿತ್ಯ ಕನಿಷ್ಠ 7 ಗಂಟೆ ವಿದ್ಯುತ್ ನೀಡದೆ ರೈತರನ್ನು ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದರು.
ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಬೇಸಿಗೆ ಬೆಳೆ, ತೋಟ ನೀರಿಲ್ಲದೆ ಒಣಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಹಗಲು ವಿದ್ಯುತ್ ನೀಡದೆ ಮದ್ಯರಾತ್ರಿ ಬೇಕಾಬಿಟ್ಟಿಯಾಗಿ ಮುನ್ಸೂಚನೆ ನೀಡದೆ ವಿದ್ಯುತ್ ನೀಡುತ್ತಿದ್ದು, ಈ ಬಗ್ಗೆ ಪ್ರಶ್ನಿಸಿದ ರೈತರ ಸಹಿತ ನಿವೃತ್ತ ಪೊಲೀಸ್ ಅಧಿಕಾರಿಗಳ ಜತೆ ಅತ್ಯಂತ ದರ್ಪ ಉದ್ದಟತನದಿಂದ ಕಿರಿಯ ಎಂಜಿನಿಯರ್ ವರ್ತಿಸುತ್ತಿದ್ದಾರೆ. ಈಸೂರು ಮೂಲಕ ಅಂಜನಾಪುರಕ್ಕೆ ಕೆಪಿಟಿಸಿಎಲ್ ಹೈಟೆನ್ಶನ್ ವಿದ್ಯುತ್ ತಂತಿ ಅಳವಡಿಸುವ ಅವೈಜ್ಞಾನಿಕ ಕಾಮಗಾರಿಗೆ ರೈತರು ಪ್ರತಿರೋಧ ಒಡ್ಡಿರುವುದರಿಂದ ಜನಪ್ರತಿನಿಧಿಗಳು, ಮೇಲಾಧಿಕಾರಿಗಳ ಸೂಚನೆ ಮೇರೆಗೆ ರೈತ ಸಮುದಾಯಕ್ಕೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.ವಾಣಿಜ್ಯ ಬಳಕೆಗೆ 24 ಗಂಟೆ ವಿದ್ಯುತ್ ನೀಡುವ ಮೆಸ್ಕಾಂ, ದೇಶಕ್ಕೆ ಅನ್ನ ನೀಡುವ ರೈತರನ್ನು ಕಡೆಗಣಿಸುತ್ತಿದೆ. ಮೆಸ್ಕಾಂ ಸಹಿತ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಲಂಚಗುಳಿತನ ಗುಲಾಮಗಿರಿ ವ್ಯಾಪಕವಾಗಿದ್ದು, ಅಧಿಕಾರಿಗಳು ವರ್ತನೆಯನ್ನು ತಿದ್ದಿಕೊಳ್ಳದಿದ್ದಲ್ಲಿ ರೈತ ಸಮುದಾಯ ಸೂಕ್ತ ರೀತಿಯಲ್ಲಿ ಉತ್ತರ ನೀಡಲಿದೆ ಎಂದು ಎಚ್ಚರಿಸಿದ ಅವರು, ರೈತರ ಜತೆ ಸಂಯಮದಿಂದ ವರ್ತಿಸಿ ಈ ಕೂಡಲೇ ಕಿರಿಯ ಎಂಜಿನಿಯರ್ ಸ್ಥಳಕ್ಕೆ ಕರೆಯಿಸಿ ಸಮಜಾಯಿಷಿ ನೀಡುವಂತೆ ಆಗ್ರಹಿಸಿದರು.
ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್ ಈಶ್ವರಪ್ಪ ಮಾತನಾಡಿ, ರೈತರ ಜತೆ ಅಸಭ್ಯವಾಗಿ ವರ್ತಿಸುತ್ತಿರುವ ಕಿರಿಯ ಎಂಜಿನಿಯರ್ ಉದ್ದೇಶಪೂರ್ವಕವಾಗಿ ರೈತರನ್ನು ಜನತೆ ವಿರುದ್ದ ಎತ್ತಿಕಟ್ಟುವ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.ಶಿಕಾರಿಪುರ ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಸ್ವಕ್ಷೇತ್ರ ಎಂಬ ಕನಿಷ್ಠ ಪ್ರಜ್ಞೆಯಿಲ್ಲದೆ ರೈತರ ಜತೆ ಅತ್ಯಂತ ಕೀಳಾಗಿ ವರ್ತಿಸುತ್ತಿದ್ದು, ಈ ಕೂಡಲೇ ಕಿರಿಯ ಎಂಜಿನಿಯರ್ ವಜಾಗೊಳಿಸಿ ರೈತರಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿ ಎಇಇ ಮಂಜಪ್ಪ, ಕಿರಿಯ ಎಂಜಿನಿಯರ್ ವಿಜಯಕುಮಾರ್ ರನ್ನು ಸ್ಥಳಕ್ಕೆ ಕರೆಯಿಸಿದರು. ರೈತರ ಜತೆಗಿನ ವರ್ತನೆ ಸರಿಪಡಿಸಿಕೊಳ್ಳುವಂತೆ ಸೂಚಿಸಿದರು. ವಿಜಯಕುಮಾರ್ ವರ್ತನೆ ಬಗ್ಗೆ ಬೇಷರತ್ ಕ್ಷಮೆಯಾಚಿಸಿದರು. 15 ದಿನದಲ್ಲಿ ಸಮರ್ಪಕ ವಿದ್ಯುತ್ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ ನಂತರದಲ್ಲಿ ರೈತರು ಧರಣಿ ಹಿಂಪಡೆದರು.ಈ ಸಂದರ್ಭದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಎ.ಪರಮೇಶ್ವರಪ್ಪ, ನಿವೃತ್ತ ಎಎಸ್ಸೈ ಬಸವರಾಜ ರೋತೆ, ರೈತ ಸಂಘದ ತಾ.ಸಂಚಾಲಕ ಸುಬಾಷಚಂದ್ರ, ವೀರೇಂದ್ರಪಾಟೀಲ್, ಬಡಕಳ್ಳಿ ಶಂಕ್ರಪ್ಪ, ವಿಜಯಕುಮಾರ್, ಬಸವರಾಜ್ ಮುಗುಳಗೇರಿ, ಕೇಶವ, ಸಂದೀಪ ಸಹಿತ ನೂರಾರು ರೈತರು ಹಾಜರಿದ್ದರು.