ಕನ್ನಡಪ್ರಭ ವಾರ್ತೆ ಮಳವಳ್ಳಿ
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ರಾಮಲಿಂಗೇಗೌಡ ಮಾತನಾಡಿ, ಕಳೆದ ಒಂದು ತಿಂಗಳಿಂದ ಕೆಆರ್‌ಎಸ್ ಅಣೆಕಟ್ಟೆಯಿಂದ ಕಾವೇರಿ ಅಚ್ಚುಕಟ್ಟು ಪ್ರದೇಶದ ನಾಲೆಗಳ ಮೂಲಕ ನೀರು ಹರಿಸಲಾಗುತ್ತಿದೆ. ಆದರೆ, ಇಂದಿಗೂ ಕೊನೆ ಭಾಗಕ್ಕೆ ನೀರು ತಲುಪದ ಹಿನ್ನೆಲೆಯಲ್ಲಿ ವ್ಯವಸಾಯಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ ಎಂದರು.
ಕೊನೆ ಭಾಗಕ್ಕೆ ನೀರು ತಲುಪದ ಹಿನ್ನೆಲೆಯಲ್ಲಿ ನಾಟಿ ಮಾಡಲು ಹಾಕಿದ್ದ ಪೈರು ಒಣಗುತ್ತಿವೆ. ಕಬ್ಬು ನಾಟಿ ಮಾಡಲು ರೈತರು ನೀರಿಗಾಗಿ ಕಾದು ಕುಳಿತಿದ್ದಾರೆ. ನೀರು ತಡವಾಗಿ ಬಂದರೇ ಭತ್ತದ ನಾಟಿ ಮಾಡಲು ಸಾಧ್ಯವಾಗಿಲ್ಲ. ಅದ್ದರಿಂದ ಕೂಡಲೇ ಸಮರ್ಪಕ ನೀರು ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು.ರೈತ ಮುಖಂಡ ದೋ.ಸಿ. ಪ್ರಕಾಶ್ ಮಾತನಾಡಿ, ಕಾಲುವೆಗೆ ಹೆಚ್ಚು ನೀರನ್ನು ಹರಿಸಿಕೊಂಡು ಕೊನೆ ಭಾಗಕ್ಕೂ ನೀರು ತಲುಪುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕಡಿಮೆ ಜಮೀನು ಪ್ರದೇಶವಿರುವ ಭಾಗಕ್ಕೆ ನೀರನ್ನು ಕಡಿಮೆ ಮಾಡಿ ಹೆಚ್ಚು ಜಮೀನು ಇರುವ ಪ್ರದೇಶಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಕಾವೇರಿ ನೀರಾವರಿ ನಿಗಮದ ಅಧಿಕಾರಿ ಬಾಬುಕೃಷ್ಣ ಹಾಗೂ ಎಇಇ ಭರತೇಶ್ ಕುಮಾರ್ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ರೈತರಿಗೆ ತೊಂದರೆಯಾಗದಂತೆ ಈಗಾಗಲೇ ಕಾಲುವೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ಕೊನೆ ಭಾಗಕ್ಕೂ ಸಮರ್ಪಕ ನೀರು ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ತೆಗೆದುಕೊಂಡರು.