ಕಂಪ್ಲಿ: ಎಲ್‌ಎಲ್ಸಿ ಕಾಲುವೆಯ ಸೂಗೂರು ವಿತರಣಾ ನಾಲೆಯ 14ನೇ ಮೈಲಿನ ಇಟಗಿ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಪೂರೈಸುವಂತೆ ಆಗ್ರಹಿಸಿ ರೈತರು ಬುಧವಾರ ಎಮ್ಮಿಗನೂರಿನಿಂದ ಕಂಪ್ಲಿಯ ನೀರಾವರಿ ನಿಗಮದ ಕಚೇರಿವರೆಗೆ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದರು.
ನಂತರ ನೀರಾವರಿ ನಿಗಮದ ಎಇಇ ಎ.ಶ್ರೀನಿವಾಸಗೆ ಮನವಿ ಸಲ್ಲಿಸಿದರು.
ರೈತ ಸಂಘದ ತಾಲೂಕಾಧ್ಯಕ್ಷ ವಿ. ವೀರೇಶ್ ಮಾತನಾಡಿ, ಸೂಗೂರು ವಿತರಣಾ ನಾಲೆಯಿಂದ ಕೆಲವರು ಸೈಫಾನ್ ಪೈಪ್ ಮೂಲಕ ಅಕ್ರಮವಾಗಿ ನೀರು ತೆಗೆದುಕೊಂಡು ಹೋಗಿ ಸಂಗ್ರಹಿಸುತ್ತಿದ್ದಾರೆ. ಬಳಿಕ ಆ ನೀರನ್ನು ಬೇರೆಯವರಿಗೆ ಮಾರಾಟ ಮಾಡುತ್ತಿರುವ ಆರೋಪ ಕೇಳಿಬರುತ್ತಿವೆ. ಇದರಿಂದ ಸೂಗೂರು ವಿತರಣಾ ನಾಲೆಯ ಅಚ್ಚುಕಟ್ಟು ಪ್ರದೇಶದಲ್ಲಿರುವ ರೈತರಿಗೆ ಸಮರ್ಪಕವಾಗಿ ನೀರು ತಲುಪದೇ ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಮಾತನಾಡಿ, ರೈತರ ಜಮೀನುಗಳಿಗೆ ಸಮರ್ಪಕ ನೀರು ತಲುಪಿಸುವ ಜವಾಬ್ದಾರಿ ನೀರಾವರಿ ನಿಗಮದ ಅಧಿಕಾರಿಗಳ ಮೇಲಿದೆ. ಆಂಧ್ರಪ್ರದೇಶದ ನೀರಾವರಿ ಮಂಡಳಿ ಅಧಿಕಾರಿಗಳು ಕಾಲುವೆಯ ಕೊನೆಯ ಅಂಚಿನ ರೈತರಿಗೂ ನೀರು ತಲುಪಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಇಲ್ಲಿನ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.
ಕಾಲುವೆಗಳಲ್ಲಿ ನೀರು ಹರಿಯುತ್ತಿದ್ದರೂ ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪದಿದ್ದರೆ ನೀರಾವರಿ ಯೋಜನೆಯ ಉದ್ದೇಶವೇ ವಿಫಲವಾಗುತ್ತದೆ. ಹೀಗಾಗಿ ನೀರು ಹಂಚಿಕೆಯಲ್ಲಿ ಯಾವುದೇ ತಾರತಮ್ಯವಾಗದಂತೆ ಅಧಿಕಾರಿಗಳು ಕ್ರಮ ಕೈಗೊಂಡು ಕೊನೆಯ ಅಂಚಿನ ರೈತರಿಗೂ ನೀರು ದೊರೆಯುವಂತೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.