ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಬೇಕು.
ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ಉದ್ಘಾಟನೆ
ಕನ್ನಡಪ್ರಭ ವಾರ್ತೆ ರೋಣಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ ಸದೃಢವಾಗುವುದರ ಜೊತೆಗೆ ಜೀವನದಲ್ಲಿ ಶಿಸ್ತು, ನಾಯಕತ್ವ ಗುಣ ವೃದ್ಧಿಯಾಗುವುದು. ಆದ್ದರಿಂದ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಬೇಕು ಎಂದು ಬಿಇಒ ದಯಾನಂದ ಯಾವಗಲ್ಲ ಹೇಳಿದರು.
ಮಂಗಳವಾರ ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ಜಿಪಂ ಗದಗ, ತಾಪಂ ರೋಣ, ಶಾಲಾ ಶಿಕ್ಷಣ ಇಲಾಖೆ ಗದಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ರೋಣ ಹಾಗೂ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ವೀರರಾಣಿ ಚನ್ನಮ್ಮ ಬಾಲಕಿಯರ ಪ್ರೌಢಶಾಲೆಯ ಸಹಯೋಗದಲ್ಲಿ ಜರುಗಿದ 2026-27ನೇ ಸಾಲಿನ ರೋಣ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟವನ್ನು ಗುಂಡು ಎಸೆಯುವದರ ಮೂಲಕ ಉದ್ಘಾಟಿಸಿ ಮಾತನಾಡಿದರು.ಶಿಕ್ಷಣದೊಂದಿಗೆ ಕ್ರೀಡೆಯು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಅತ್ಯಗತ್ಯವಾಗಿದೆ. ಕ್ರೀಡೆಯಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ, ಕ್ರೀಡಾಪಟುಗಳು ಉನ್ನತ ಮಟ್ಟದ ಶಿಸ್ತು ಹಾಗೂ ಕ್ರೀಡಾ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ನಿವೃತ್ತ ಪ್ರಾಚಾರ್ಯ ಬಿ.ಎಫ್. ಚೇಗರಡ್ಡಿ ಮಾತನಾಡಿ, ಕ್ರೀಡೆಗಳು ದೈಹಿಕ ದೃಢತೆಯನ್ನು ಮಾತ್ರವಲ್ಲದೆ ಮಾನಸಿಕ ಉಲ್ಲಾಸ ಬೆಳೆಸುತ್ತವೆ. ಕಾಯಿಲೆಮುಕ್ತ ಜೀವನಕ್ಕೆ ಕ್ರೀಡೆ ಸಹಕಾರಿಯಾಗಿವೆ. ಗ್ರಾಮೀಣ ಭಾಗದ ಪ್ರತಿಭೆಗಳು ಇಂತಹ ವಲಯ ಮಟ್ಟದ ಕ್ರೀಡಾ ವೇದಿಕೆಗಳನ್ನು ಸರಿಯಾಗಿ ಬಳಸಿಕೊಂಡು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕು ಎಂದರು.ವೀರರಾಣಿ ಚನ್ನಮ್ಮ ಬಾಲಕಿಯರ ಪ್ರೌಢಶಾಲೆ ಚೇರಮನ್ ಆರ್.ಬಿ. ಗಿರಡ್ಡಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ. ಕೆ.ಬಿ. ಧನ್ನೂರ, ತಾಲೂಕು ಅಕ್ಷರ ದಾಸೋಹ ಸಹಾಯ ನಿರ್ದೇಶಕ ಆರ್.ಎಲ್. ನಾಯ್ಕರ, ದೈಹಿಕ ಶಿಕ್ಷಣಾಧಿಕಾರಿ ಆರ್.ಎಸ್. ನರೇಗಲ್ಲ, ನಿವೃತ್ತ ದೈಹಿಕ ಶಿಕ್ಷಕ ಜೆ.ಎಸ್. ಪಾಟೀಲ, ಜಗದೀಶ ಬೂದಿಹಾಳ, ದೈಹಿಕ ಶಿಕ್ಷಕಿ ಉಮಾ ಪಾಟೀಲ, ರಾಮನಗೌಡ ಮಲ್ಲಾಪೂರ, ಮಹೇಶ ಅಚ್ಚಿನಗೌಡ್ರ ಮುಂತಾದವರಿದ್ದರು. ಎಸ್.ಬಿ. ಮಾದರ ನಿರೂಪಿಸಿದರು. ಪಿ.ಎಲ್. ಚೊಳಚಗುಡ್ಡ ಸ್ವಾಗತಿಸಿದರು. ಎಸ್.ಎಲ್. ರಾವಳ ವಂದಿಸಿದರು.