ಪಟ್ಟಣದ ಪ್ರಮುಖ ರಸ್ತೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ನಡೆಯುತ್ತಿರುವ ವಾರದ ಸಂತೆ ಹಾಗೂ ನಿತ್ಯದ ಮಾರುಕಟ್ಟೆಯಿಂದಾಗಿ ಸಾರ್ವಜನಿಕರು ಹಾಗೂ ಗ್ರಾಮೀಣ ಭಾಗಗಳಿಂದ ಪಟ್ಟಣಕ್ಕೆ ಆಗಮಿಸುವ ಜನರು ತೀವ್ರ ಸಂಚಾರ ಸಮಸ್ಯೆ ಎದುರಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ಶಿರಹಟ್ಟಿ

ಪಟ್ಟಣದ ಪ್ರಮುಖ ರಸ್ತೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ನಡೆಯುತ್ತಿರುವ ವಾರದ ಸಂತೆ ಹಾಗೂ ನಿತ್ಯದ ಮಾರುಕಟ್ಟೆಯಿಂದಾಗಿ ಸಾರ್ವಜನಿಕರು ಹಾಗೂ ಗ್ರಾಮೀಣ ಭಾಗಗಳಿಂದ ಪಟ್ಟಣಕ್ಕೆ ಆಗಮಿಸುವ ಜನರು ತೀವ್ರ ಸಂಚಾರ ಸಮಸ್ಯೆ ಎದುರಿಸುವಂತಾಗಿದೆ. ಈ ಹಿನ್ನೆಲೆ ಮಾರುಕಟ್ಟೆಯನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ, ಎಪಿಎಂಸಿ ಆವರಣದಲ್ಲಿ ವ್ಯವಸ್ಥಿತವಾಗಿ ನಡೆಸುವಂತೆ ಆಗ್ರಹಿಸಿ ನಾಗರಿಕರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಈ ವೇಳೆ ಹೋರಾಟಗಾರ ಸಂತೋಷ ಕುರಿ ಮಾತನಾಡಿ, ಮಾರುಕಟ್ಟೆ ಸಂದರ್ಭದಲ್ಲಿ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ಅಂಗಡಿಗಳನ್ನು ಹಾಕುವುದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇದರಿಂದ ಸಾರ್ವಜನಿಕರು, ರೈತರು, ಮಹಿಳೆಯರು, ವೃದ್ಧರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಚರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿ ಸಂಚಾರ ನಿಧಾನಗೊಳ್ಳುತ್ತಿದೆ.

ಗ್ರಾಮೀಣ ಪ್ರದೇಶಗಳಿಂದ ತರಕಾರಿ, ಹಣ್ಣು ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಬರುವ ರೈತರು ಹಾಗೂ ಖರೀದಿಗೆ ಆಗಮಿಸುವ ಗ್ರಾಹಕರಿಗೂ ಇದರಿಂದ ತೊಂದರೆಯಾಗುತ್ತಿದೆ. ಮಾರುಕಟ್ಟೆಗೆ ಸೂಕ್ತ ಸ್ಥಳ, ವಾಹನ ನಿಲುಗಡೆ ವ್ಯವಸ್ಥೆ ಹಾಗೂ ಮೂಲಸೌಕರ್ಯ ಕಲ್ಪಿಸಿದರೆ ಸಂಚಾರ ಸಮಸ್ಯೆ ಕಡಿಮೆಯಾಗುವುದರ ಜೊತೆಗೆ ವ್ಯಾಪಾರ ವಹಿವಾಟಿಗೂ ಅನುಕೂಲವಾಗಲಿದೆ ಎಂದು ಹೇಳಿದರು.

ಕೋಟ್ಯಂತರ ರೂಪಾಯಿ ಬೆಲೆಬಾಳುವ ಎಪಿಎಂಸಿ ಬಯಲು ಜಾಗೆ ನಿರುಪಯುಕ್ತವಾಗಿ ಹಂದಿಗಳ ವಾಸಸ್ಥಾನಕ್ಕೆ ಹಾಗೂ ಬಯಲು ಬಹಿರ್ದೆಸೆಗೆ ಮೀಸಲಾಗಿದೆ. ಆವರಣವನ್ನು ಬಳಸಿಕೊಂಡು ಮಾರುಕಟ್ಟೆಯನ್ನು ಬಯಲು ಪ್ರದೇಶಕ್ಕೆ ಸ್ಥಳಾಂತರಿಸಿ, ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮಾರುಕಟ್ಟೆ ಸ್ಥಳಾಂತರದ ಕುರಿತು ಸಂಬಂಧಪಟ್ಟ ಅಧಿಕಾರಿಗಳು, ವ್ಯಾಪಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಿ ಶೀಘ್ರ ನಿರ್ಧಾರ ಕೈಗೊಳ್ಳಬೇಕು. ಅಧಿಕಾರಿಗಳು ವಿಳಂಬ ನೀತಿ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಮುಂದಾಗುವುದಾಗಿ ನಾಗರಿಕರು ಎಚ್ಚರಿಸಿದರು.

ಈ ವೇಳೆ ನಾಗರಾಜ ಲಕ್ಕುಂಡಿ, ಬಸವರಾಜ ತುಳಿ, ರಾಮಣ್ಣ ಕಂಬಳಿ, ಬಸವರಾಜ ವಡವಿ, ವಿಠಲ ಬಿಡವೆ, ಸಂತೋಷ ತೋಡೇಕಾರ, ಬಸವರಾಜ ಕಲ್ಯಾಣಿ, ಚಂದ್ರು ಜೋಗೇರ, ಜಗದೀಶ ತೇಲಿ, ಗಣೇಶ ಬಿಡವೆ, ಪರಶುರಾಮ ಡೊಂಕಬಳ್ಳಿ, ಲಕ್ಷ್ಮಣ ಪವಾರ, ಹನಮಂತ ಕುರಿ, ಶಿವಾನಂದ ಬಟ್ಟೂರ, ಮಾರುತಿ ಕೋಳಿ, ವಿಶ್ವನಾಥ ದಳವೆ, ಶಶಿಕುಮಾರ ಪೂಜಾರ, ಬಸವರಾಜ ಹಲಸೂರ ಇತರರು ಇದ್ದರು.