ಯತಿ ನರಸಿಂಗಾನಂದ ಸರಸ್ವತಿ ಸ್ವಾಮೀಜಿ ಬಂಧನಕ್ಕೆ ಆಗ್ರಹ

KannadaprabhaNewsNetwork | Published : Oct 19, 2024 12:31 AM

ಸಾರಾಂಶ

ಚಿತ್ರದುರ್ಗ: ಪ್ರವಾದಿ ಮಹಮ್ಮದ್ ಪೈಗಂಬರ್‌ರವರ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಉತ್ತರಪ್ರದೇಶದ ಯತಿ ನರಸಿಂಗಾನಂದ ಸರಸ್ವತಿ ಸ್ವಾಮೀಜಿಯ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಮುಸ್ಲಿಂ ಸಮದಾಯದವರು ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಚಿತ್ರದುರ್ಗ: ಪ್ರವಾದಿ ಮಹಮ್ಮದ್ ಪೈಗಂಬರ್‌ರವರ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಉತ್ತರಪ್ರದೇಶದ ಯತಿ ನರಸಿಂಗಾನಂದ ಸರಸ್ವತಿ ಸ್ವಾಮೀಜಿಯ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಮುಸ್ಲಿಂ ಸಮದಾಯದವರು ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಶುಕ್ರವಾರ ಪ್ರಾರ್ಥನೆ ಮುಗಿಸಿಕೊಂಡು ಗಾಂಧಿ ವೃತ್ತದಿಂದ ಮೆರವಣಿಗೆ ಮೂಲಕ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿದ ಸಾವಿರಾರು ಮಂದಿ ಮುಸ್ಮೀಂಮರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಕ್ರೋಶ ಹೊರ ಹಾಕಿದರು. ಯತಿ ಸರಸಿಂಗಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಧಿಕ್ಕಾರ ಕೂಗಿದರು. ಒನಕೆ ಓಬವ್ವ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಸ್ಲಿಂ ಧರ್ಮಗುರು ಸೈಯದ್ ಅರಫಾಯಿ, ಭಾರತ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ಹಿಂದೂ-ಮುಸಲ್ಮಾನರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಶಾಂತಿ ಕದಡುವುದಕ್ಕಾಗಿ ಪ್ರವಾದಿ ಮಹಮ್ಮದ್ ಪೈಗಂಬರ್‌ರವರ ವಿರುದ್ಧ ಕೀಳಾಗಿ ಮಾತನಾಡಿರುವ ಯತಿ ನರಸಿಂಗಾನಂದ ಸರಸ್ವತಿ ಸ್ವಾಮೀಜಿಯನ್ನು ಕೂಡಲೇ ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೇಶಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮತ್ತೊಬ್ಬ ಧರ್ಮಗುರು ಮೌಲಾನ ಗುಲಾಂ ಜಿಲಾನಿ ಮಾತನಾಡಿ, ಸೂಫಿ ಸಂತರ ದೇಶ ಭಾರತದಲ್ಲಿ ಎಲ್ಲಾ ಧರ್ಮ, ಜಾತಿಯವರು ಅನ್ಯೋನ್ಯತೆಯಿಂದ ಬಾಳುತ್ತಿರುವುದನ್ನು ಸಹಿಸದ ಯತಿ ನರಸಿಂಗಾನಂದ ಸರಸ್ವತಿ ಸ್ವಾಮೀಜಿ ಅಖಂಡತೆಯನ್ನು ಹಾಳು ಮಾಡಲು ಹೊರಟಿದ್ದಾರೆ. ಕೋಮು ಸೌಹಾರ್ದತೆಯನ್ನು ಕದಡಲು ನಾವುಗಳು ಬಿಡುವುದಿಲ್ಲ. ಪ್ರವಾದಿ ಮಹಮ್ಮದ್ ಪೈಗಂಬರ್‌ರವರ ಬಗ್ಗೆ ಹಗುರವಾಗಿ ಮಾತನಾಡಿರುವ ನರಸಿಂಗಾನಂದ ಸರಸ್ವತಿ ಸ್ವಾಮಿಯನ್ನು ಬಂಧಿಸಿ ಉಗ್ರ ಶಿಕ್ಷೆ ವಿಧಿಸಿದಾಗ ಮಾತ್ರ ಇಂತಹ ಹೇಳಿಕೆಗಳು ನಿಲ್ಲುತ್ತವೆ ಎಂದು ಹೇಳಿದರು. ಶಾಹಿದ್‌ರಜಾಫಕ್ರೆ ಆಲಂ ಮಾತನಾಡಿ, ಪ್ರವಾದಿರವರ ಬಗ್ಗೆ ಯತಿ ನರಸಿಂಗಾನಂದ ಸರಸ್ವತಿ ಸ್ವಾಮೀಜಿ ಹೀನಾಯವಾಗಿ ಮಾತನಾಡಿರುವುದು ಸಮಸ್ತ ಮಸ್ಲಿಂ ಬಾಂಧವರ ಮನಸ್ಸಿಗೆ ನೋವಾಗಿದೆ. ಹಾಗಾಗಿ ಭಾರತ ಸರ್ಕಾರ ನರಸಿಂಗಾನಂದ ಸರಸ್ವತಿ ಸ್ವಾಮಿಯನ್ನು ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಾಮಿಯಾ ಮಸೀದಿ ಅಧ್ಯಕ್ಷ ಸಾಧಿಕ್‌ಭಾಷ, ಕಾರ್ಯದರ್ಶಿ ಮುಹಿಬುಲ್ಲಾ, ಸುಲ್ತಾನಿ ಜಾಮಿಯಾ ಮಸ್ಜಿದ್ ಮರ್ಕಜ್ ಎ ಅಹ್ಲೆ, ನ್ಯಾಯವಾದಿ ಮಹಮ್ಮದ್ ಸಾಧಿಕ್‌ವುಲ್ಲಾ, ಜಿಲ್ಲಾ ವಕ್ಫ್ ಮಂಡಳಿ ಚೇರ್ಮನ್ ಎಂಸಿಓ ಬಾಬು, ಮುಸ್ಲಿಂ ವಕೀಲರ ಸಂಘದ ಅಧ್ಯಕ್ಷ ಮಹಮದ್ ಸಮೀವುಲ್ಲಾ, ನ್ಯಾಯವಾದಿ ಜುಲ್ಫಿಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್, ಸೈಯದ್ ಮೊಹಿದ್ದಿನ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ಸೈಯದ್ ಇಸ್ಮಾಯಿಲ್, ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಹಮದ್ ಅಹಮದ್‌ಪಾಷ, ನೇಮತ್‌ವುಲ್ಲಾ, ಸೈಯದ್ ಅಫಾಖ್ ಅಹಮದ್ ಸೇರಿದಂತೆ ವಿವಿಧ ಮಸೀದಿಯ ಮುತುವಲ್ಲಿಗಳು, ಧರ್ಮಗುರುಗಳು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಯತಿ ನರಸಿಂಗಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಎಫ್.ಐಆರ್ ದಾಖಲಿಸುವಂತೆ ನಗರ ಠಾಣೆ ಇನ್ಸ್‌ಪೆ ಕ್ಟರ್‌ಗೆ ಪ್ರತಿಭಟನಾಕಾರರು ದೂರು ನೀಡಿದರು.

Share this article