ಶಿವಯೋಗಿ ಶ್ರೀಗಳ ತತ್ವ ಸಿದ್ಧಾಂತ ಅಳವಡಿಸಿಕೊಳ್ಳಿ

KannadaprabhaNewsNetwork | Published : Oct 19, 2024 12:30 AM

ಸಾರಾಂಶ

ಕಾಯಕ, ದಾಸೋಹ, ಲಿಂಗಪೂಜೆ ಮೂಲಕ ದೈವತ್ವ ಸಾಧಿಸಬಹುದು ಎನ್ನುವುದಕ್ಕೆ ಲಿಂ. ರುದ್ರಮುನಿ ಶಿವಯೋಗಿಗಳು ನಿದರ್ಶನ. ಅವರ ತತ್ವ ಸಿದ್ಧಾಂತ ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಕಾಯಕ, ದಾಸೋಹ, ಲಿಂಗಪೂಜೆ ಮೂಲಕ ದೈವತ್ವ ಸಾಧಿಸಬಹುದು ಎನ್ನುವುದಕ್ಕೆ ಲಿಂ. ರುದ್ರಮುನಿ ಶಿವಯೋಗಿಗಳು ನಿದರ್ಶನ. ಅವರ ತತ್ವ ಸಿದ್ಧಾಂತ ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.ತಾಲೂಕಿನ ಕಾಳೇನಹಳ್ಳಿ ಶಿವಯೋಗಾಶ್ರಮದಲ್ಲಿ ಗುರುವಾರ ನಡೆದ ಲಿಂ. ರುದ್ರಮುನಿ ಶಿವಯೋಗಿಗಳ 36ನೇ ಪುಣ್ಯಾರಾಧನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಹಾನಗಲ್ಲು ಕುಮಾರ ಸ್ವಾಮಿಗಳು ಸಮಾಜ,ಜನರ ಹಿತಕ್ಕೆ ಆದ್ಯತೆ ನೀಡಿದರು ಅದರ ಪರಿಣಾಮ ನಾಡಿನ ಎಲ್ಲೆಡೆ ಹಲವಾರು ಮಠಗಳನ್ನು ಸ್ಥಾಪಿಸಿ ಅವುಗಳ ಮೂಲಕ ಕಾಯಕ,ದಾಸೋಹ,ಜ್ಞಾನ ಪರಂಪರೆ ಬಿತ್ತಿದರು.ತಾಲೂಕಿನ ಕಾಳೇನಹಳ್ಳಿಯಲ್ಲಿ ಸ್ಥಾಪಿಸಿದ ಶಿವಯೋಗಾಶ್ರಮ ಇಂದಿಗೂ ತನ್ನ ಅಸ್ಮಿತೆ ಉಳಿಸಿಕೊಂಡು ಬಂದಿದೆ.

ಅದಕ್ಕಾಗಿಯೇ ಇಲ್ಲಿ ಪುನಃ ತಪೋನುಷ್ಠಾನ ಮೂರ್ತಿಗಳು ಪಟ್ಟಾಧಿಕಾರ ಆಗಿದ್ದಾರೆ.ಅಲ್ಲಮಪ್ರಭು,ಅಕ್ಕಮಹಾದೇವಿ, ಅಜಗಣ್ಣ, ಮುಕ್ತಾಯಕ್ಕ ಸೇರಿ ಹಲವು ಶರಣರು ಹುಟ್ಟಿದ ನಾಡು ಶಿಕಾರಿಪುರ ಇಲ್ಲಿನ ಭಕ್ತಿ,ಜ್ಞಾನ ಪರಂಪರೆ ರಾಜ್ಯದಲ್ಲಿ ಹೆಸರುವಾಸಿಯಾಗಿದೆ ಎಂದರು.ಶಿವಯೋಗಾಶ್ರಮದ ಡಾ.ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ,ಕಾಳೇನಹಳ್ಳಿ ಶಿವಯೋಗಾಶ್ರಮ ಮಠ ಜನರಿಗೆ ಜ್ಞಾನ, ದಾಸೋಹ ನೀಡುವುದು ಮಾತ್ರವಲ್ಲ.ಈ ಕ್ಷೇತ್ರ ಶಿವಯೋಗ ಸಾಧಕರ ನೆಲೆಯಾಗಬೇಕು ಆಗ ಹಾನಗಲ್ಲು ಕುಮಾರ ಸ್ವಾಮಿಗಳ ಇಚ್ಚೆ ಈಡೇರಿದಂತಾಗುತ್ತದೆ ಅದಕ್ಕೆ ಅಗತ್ಯವಿರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ನಾಡಿನ ಎಲ್ಲ ಮಠಾಧೀಶರೂ ಅದಕ್ಕಾಗಿ ಕೈಜೋಡಿಸಬೇಕು ಎಂದು ಹೇಳಿದರು.ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ,ನಾಡಿನ ಅನೇಕ ಮಠಗಳು ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ, ದಾಸೋಹ ನೀಡುವ ಕೆಲಸ ನೂರಾರು ವರ್ಷದಿಂದ ಮಾಡಿಕೊಂಡು ಬರುತ್ತಿವೆ. ಸರ್ಕಾರದಿಂದ ಅಸಾದ್ಯವಾದ ಕಾರ್ಯವನ್ನು ಮಠ ಮಂದಿಗಳು ಮಾಡುತ್ತಿದ್ದು ಕಾಯಕ,ದಾಸೋಹ,ಶಿಕ್ಷಣ ನೀಡುವ ಜತೆ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಮೂಲಕ ನಾಡು ಕಟ್ಟುವ ಕೆಲಸ ಮಠ ಮಂದಿರದಿಂದ ನಡೆಯುತ್ತಿದೆ.ಆ ಪರಂಪರೆ ಉಳಿದು ಬೆಳೆಯುವ ನಿಟ್ಟಿನಲ್ಲಿ ಸರ್ಕಾರ ಅನುದಾನ ನೀಡಬೇಕು,ಭಕ್ತರೂ ಕೈಜೋಡಿಸುವುದು ಇಂದಿನ ಅಗತ್ಯ ಈ ನಿಟ್ಟಿನಲ್ಲಿ ಎಲ್ಲರೂ ಚಿಂತಿಸೋಣ ಎಂದರು.ಸಭೆಗೂ ಮುನ್ನ ಲಿಂ.ರುದ್ರಮುನಿ ಶಿವಯೋಗಿಗಳ ಕತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶಿವಯೋಗಾಶ್ರಮದಲ್ಲಿ ನಿರ್ಮಿಸಿರುವ ನೂತನ ಅನುಷ್ಠಾನ ಮಂದಿರ ಉದ್ಘಾಟಿಸಲಾಯಿತು.ಸಂಜೆ ಧಾರ್ಮಿಕ ಸಭೆಯಲ್ಲಿ ಶ್ರೀಗಳಿಗೆ ನುಡಿನಮನ ಸಲ್ಲಿಸಲಾಯಿತು.ಅ

ನುಷ್ಠಾನ ಮಂದಿರ ನಿರ್ಮಾಣದ ಸುನಂದ ಲೋನಿ,ತಿಪ್ಪಾಯಿಕೊಪ್ಪದ ಶ್ರೀ ಮಹಾಂತ ಸ್ವಾಮೀಜಿ,ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ,ವೀರಶೈವ ಮಹಾಸಭೆ ರಾಜ್ಯ ಘಟಕದ ನಿರ್ದೇಶಕ ಎನ್.ವಿ.ಈರೇಶ್,ತಾಲೂಕು ಘಟಕದ ಅಧ್ಯಕ್ಷ ಸುಧೀರ್ ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ,ಎಸ್.ಬಿ ಮಠದ್,ರುದ್ರಪ್ಪಯ್ಯ ಮತ್ತಿತರರು ಉಪಸ್ಥಿತರಿದ್ದರು.

Share this article