ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ
ರೋಣ: ತಾಲೂಕಿನ ಕುರಡಗಿ ಗ್ರಾಪಂ 2ನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ಜರುಗಿದ ಚುನಾವಣೆಯಲ್ಲಿ ಶಿವನಗೌಡ ಸಿದ್ದನಗೌಡ್ರ ಅವಿರೋಧವಾಗಿ ಆಯ್ಕೆಯಾದರು.
ಗ್ರಾಪಂ ಒಟ್ಟು 12 ಸದಸ್ಯ ಬಲ ಹೊಂದಿದ್ದು. ಅಧ್ಯಕ್ಷ ಸ್ಥಾನಕ್ಕೆ ಶಿವನಗೌಡ ಸಿದ್ದನಗೌಡ್ರ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇದರಿಂದ ಕುರಡಗಿ ಗ್ರಾಪಂ ನೂತನ ಅಧ್ಯಕ್ಷರಾಗಿ ಶಿವನಗೌಡ ಸಿದ್ದನಗೌಡ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ತಾಪಂ ಇಒ ಮಂಜುಳಾ ಹಕಾರಿ ಘೋಷಣೆ ಮಾಡಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಶಿವನಗೌಡ ಸಿದ್ದನಗೌಡ್ರ ಮಾತನಾಡಿ, ನನ್ನ ಮೇಲೆ ವಿಶ್ವಾಸವಿಟ್ಟು ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಅಭಿನಂದನೆ. ಗ್ರಾಪಂ ವ್ಯಾಪ್ತಿಯ ಯರೇಬೇಲೇರಿ, ನಾಗರಾಳ ಮತ್ತು ಕುರಡಗಿ ಗ್ರಾಮಗಳಿಗೆ ರಸ್ತೆ, ಕುಡಿವ ನೀರು, ವಿದ್ಯುತ್, ವಸತಿ ಸೌಲಭ್ಯ, ನರೇಗಾ ಯೋಜನೆಯಲ್ಲಿನ ಕಾಮಗಾರಿಗಳು ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಸರ್ಕಾರದ ಪ್ರತಿಯೊಂದು ಯೋಜನೆ ಜನತೆಗೆ ತಲುಪಿಸುವಲ್ಲಿ ಶ್ರಮಿಸುತ್ತೇನೆ ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಡಾ. ಸಂಗಮೇಶ ಕೊಳ್ಳಿ ಮಾತನಾಡಿ, ರಾಜ್ಯದಲ್ಲಿನ ರಾಜಕಾರಣ ವ್ಯಾಪಾರೀಕರಣವಾಗಿದ್ದು, ಅದನ್ನು ಜನಪ್ರತಿನಿಧಿಗಳು ಆತ್ಮಸಾಕ್ಷಿಯಿಂದ ತೊರೆದು ಜನ ಸೇವೆಯೇ ಜನಾರ್ದನ ಸೇವೆ ಎಂಬ ಮನೋಭಾವನೆಯಿಂದ ಸಾಗಿದಾಗ ಮಾತ್ರ ಅಭಿವೃದ್ಧಿ ಕಾರ್ಯ ನಡೆಯುತ್ತವೆ. ಕುರಡಗಿ ಗ್ರಾಪಂ ಆಡಳಿತ ಮಂಡಳಿ ಗ್ರಾಮದ ಅಭಿವೃದ್ಧಿ ಜತೆಗೆ ಸಾರ್ವಜನಿಕರ ಸಮಸ್ಯೆಗಳಿಗೆ ಸದಾಕಾಲ ಸ್ಪಂದಿಸಬೇಕು ಎಂದರು.
ಗ್ರಾಪಂ ನೂತನ ಅಧ್ಯಕ್ಷ ಶಿವನಗೌಡ ಸಿದ್ದನಗೌಡ್ರ ಅವರಿಗೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಅಭಿಮಾನಿಗಳು, ಮುಖಂಡರು, ಕಾರ್ಯಕರ್ತರು ಸನ್ಮಾನಿಸಿ ಶುಭ ಹಾರೈಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.