ಕಾರವಾರ: ನಗರದ ಡಿಎಚ್‌ಒ ಕಚೇರಿಯಿಂದ ಕಾಜುಬಾಗ್ ಮುಲ್ಲಾ ಕ್ರಾಸ್‌ವರೆಗಿನ ಮುಖ್ಯ ರಸ್ತೆ ಹದಗೆಟ್ಟು ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು, ಕೂಡಲೇ ಡಾಂಬರೀಕರಣ ಕೈಗೊಳ್ಳುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಸೂರಜ್ ಎಂ. ಕುರುಮಕರ್ ಅವರು ಮಂಗಳವಾರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಯುಜಿಡಿ ಕಾಮಗಾರಿಗಾಗಿ ಕಳೆದ ಮೇ ತಿಂಗಳಲ್ಲಿ ರಸ್ತೆಯ ಒಂದು ಬದಿಯನ್ನು ಅಗೆದು ಪೈಪ್ ಅಳವಡಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ಹೊಂಡಕ್ಕೆ ಮಣ್ಣು ತುಂಬಿ, ಅದರ ಮೇಲೆ ದಪ್ಪ ಜೆಲ್ಲಿ ಕಲ್ಲು ಹಾಕಿ ಹಾಗೆಯೇ ಬಿಡಲಾಗಿದೆ. ಇದರಿಂದ ದ್ವಿಪಥ ರಸ್ತೆ ಏಕಪಥದಂತಾಗಿದ್ದು, ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬೀಳುವ ಘಟನೆಗಳು ನಡೆಯುತ್ತಿವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಮಳೆ ಬಂದಾಗ ಹೊಂಡಗಳಲ್ಲಿ ನೀರು ತುಂಬಿಕೊಳ್ಳುವುದರಿಂದ ಸಂಚಾರ ಮತ್ತಷ್ಟು ದುಸ್ತರವಾಗುತ್ತಿದೆ. ರಾತ್ರಿ ವೇಳೆ ಹೊಂಡಗಳು ಕಾಣಿಸದೆ ಹಲವು ಸವಾರರು ಬಿದ್ದು ಗಾಯಗೊಂಡಿದ್ದಾರೆ. ಕೆಲವರು ಗಂಭೀರವಾಗಿ ಗಾಯಗೊಂಡು ಮಂಗಳೂರು, ಮಣಿಪಾಲ ಹಾಗೂ ಗೋವಾದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.ಈ ಕುರಿತು ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಡಾಂಬರೀಕರಣ ಮಾಡುವ ಭರವಸೆ ಮಾತ್ರ ನೀಡಲಾಗಿದೆ. ಆ. 7ರಂದು ಶಾಸಕ ಸತೀಶ್ ಸೈಲ್ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಂದ ವರದಿಯನ್ನೂ ಕೇಳಲಾಗಿತ್ತು. ಆದರೂ ಇದುವರೆಗೆ ರಸ್ತೆ ದುರಸ್ತಿ ಕೈಗೊಳ್ಳದಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ರಸ್ತೆಯ ಅವ್ಯವಸ್ಥೆ ಹಾಗೂ ಅಪಘಾತಗಳ ಕುರಿತು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ವರದಿಯಾಗುತ್ತಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಈ ಹಿನ್ನೆಲೆ ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರ ರಸ್ತೆ ಡಾಂಬರೀಕರಣ ಕೈಗೊಳ್ಳಲು ಕಾರವಾರ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಸೂರಜ್ ಎಂ. ಕುರುಮಕರ್ ಮನವಿ ಮಾಡಿದ್ದಾರೆ.