ಹಾವೇರಿ: ತಾಲೂಕಿನ ಕಳ್ಳಿಹಾಳ ಗುಡ್ಡದಲ್ಲಿರುವ ಸರ್ಕಾರಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಸತಿಯುತ ಪ್ರಥಮ ದರ್ಜೆ ಕಾಲೇಜಿಗೆ ವಸತಿ ಸೌಲಭ್ಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಶುಕ್ರವಾರ ಎಸ್‌ಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಎಸ್ಸಿ ಎಸ್ಟಿ ವಸತಿಯುತ ಕಾಲೇಜು ಪ್ರಾರಂಭಗೊಂಡು ಏಳು ವರ್ಷಗಳು ಕಳೆದರೂ ಸಹಿತ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಪರಿಣಾಮ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಕಾಯಂ ಪ್ರಾಂಶುಪಾಲರು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗಳ ನೇಮಕಾತಿ ಸೇರಿದಂತೆ ಸ್ವಂತ ಕಟ್ಟಡದಲ್ಲಿಯೇ ವಸತಿ ಸೌಲಭ್ಯವನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.ಈಗಿರುವ ದಾಖಲಾತಿಯ ಮಿತಿಯನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಶೇ.60, ಹಿಂದುಳಿದ ವರ್ಗಗಳ ಶೇ.40ರಷ್ಟು ಆದೇಶವನ್ನು ಸಡಿಲಗೊಳಿಸಿ ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಬೇಕು. ಪ್ರತಿ ಜಿಲ್ಲೆಗೊಂದು ಮಾದರಿ ವಸತಿಯುತ ಪದವಿ ಕಾಲೇಜುಗಳನ್ನು ಮಂಜೂರು ಮಾಡಬೇಕು. ಪ್ರತ್ಯೇಕವಾದ ಸುಸಜ್ಜಿತ ಪ್ರಯೋಗಾಲಯಗಳು, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ನಿರ್ವಹಣೆಗಾಗಿ ಸಿಬ್ಬಂದಿ ನಿಯುಕ್ತಿ ಮಾಡಬೇಕು. ಕ್ಯಾಂಪಸ್‌ಗಳಲ್ಲಿ ಜೆರಾಕ್ಸ್ ಸೆಂಟರ್, ವಿದ್ಯಾರ್ಥಿ ಕ್ಯಾಂಟೀನ ಆರಂಭಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಮಯಕ್ಕೆ ಸರಿಯಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾರ್ಥಿನಿಯರ ಸುರಕ್ಷತೆ ಹಾಗೂ ಭದ್ರತೆಗಾಗಿ ಸಿಸಿ ಕ್ಯಾಮೆರಾ ಅಳವಡಿಕೆ ಸೌಲಭ್ಯವನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.ಈ ವೇಳೆ ಮುಖಂಡರಾದ ಅರುಣ ನಾಗವತ್, ಚೈತ್ರಾ ಕೊರವರ, ಗಂಗಾ ಯಲ್ಲಾಪುರ, ಮಂಜುನಾಥ ಎಸ್., ರಮೇಶ ತೋಟದ, ಮಹೇಶ ಮರೋಳ, ಗುದ್ಲೇಶ ಇಚ್ಚಂಗಿ, ದುರಗಪ್ಪ ಬಿ., ಹುಲಿಗೆಮ್ಮ ಕೊರಗರ, ಪ್ರವೀಣ ಪಿ., ರಮೇಶ ಬಿ.ಟಿ., ಪರಶುರಾಮ, ಯಲ್ಲಮ್ಮ ಕುಮರಿ, ಮಧು ಕಳ್ಳಿಹಾಳ, ಯಶೋಧಾ ಗುಳೇದ, ಭಾಗ್ಯಲಕ್ಷ್ಮಿ ಡಿ.ಹೆಚ್., ಜ್ಯೋತಿ ಕರೆಮಣ್ಣವರ, ಕುಸುಮಾ, ವೀಣಾ ತಳವಾರ, ಭಾಗ್ಯಲಕ್ಷ್ಮಿ ಎಸ್.ಪಿ., ಗಂಗಾ ಆರ್.ಕೆ., ಪ್ರತಿಭಾ ಕೆ., ಲಕ್ಷ್ಮೀ ಎಚ್.ಎಚ್., ಸಂಗೀತಾ, ಚೈತ್ರಾ ಸೇರಿದಂತೆ ಇತರರು ಇದ್ದರು.