ಕನ್ನಡಪ್ರಭ ವಾರ್ತೆ ಮೂಡಲಗಿ ರೈತರ ಕೃಷಿಭೂಮಿಯನ್ನು ಕೃಷಿಯೇತರ (ಎನ್.ಎ.) ಭೂಮಿಯಾಗಿ ಪರಿವರ್ತಿಸಬೇಕೆಂಬ ಷರತ್ತನ್ನು ರದ್ದುಪಡಿಸುವಂತೆ ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಮಂಗಳವಾರ ಸಂಸತ್ ಅಧಿವೇಶನದ ಶೂನ್ಯ ವೇಳೆಯಲ್ಲಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು. ಪ್ರಧಾನಮಂತ್ರಿ ರೈತರ ಆದಾಯ ದ್ವಿಗುಣಗೊಳಿಸುವ ಸದುದ್ದೇಶದಿಂದ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣೆ ಘಟಕ (ಪಿಎಂಎಫ್ಎಂಇ) ಯೋಜನೆ ಹಾಗೂ ಕೃಷಿ ಮೂಲಸೌಕರ್ಯಗಳ ನಿಧಿ (ಎಐಎಫ್) ಎಂಬ ಎರಡು ಯೋಜನೆ ಜಾರಿಗೆ ತಂದಿದ್ದಾರೆ.
ಕನ್ನಡಪ್ರಭ ವಾರ್ತೆ ಮೂಡಲಗಿ
ರೈತರ ಕೃಷಿಭೂಮಿಯನ್ನು ಕೃಷಿಯೇತರ (ಎನ್.ಎ.) ಭೂಮಿಯಾಗಿ ಪರಿವರ್ತಿಸಬೇಕೆಂಬ ಷರತ್ತನ್ನು ರದ್ದುಪಡಿಸುವಂತೆ ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಮಂಗಳವಾರ ಸಂಸತ್ ಅಧಿವೇಶನದ ಶೂನ್ಯ ವೇಳೆಯಲ್ಲಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.ಪ್ರಧಾನಮಂತ್ರಿ ರೈತರ ಆದಾಯ ದ್ವಿಗುಣಗೊಳಿಸುವ ಸದುದ್ದೇಶದಿಂದ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣೆ ಘಟಕ (ಪಿಎಂಎಫ್ಎಂಇ) ಯೋಜನೆ ಹಾಗೂ ಕೃಷಿ ಮೂಲಸೌಕರ್ಯಗಳ ನಿಧಿ (ಎಐಎಫ್) ಎಂಬ ಎರಡು ಯೋಜನೆ ಜಾರಿಗೆ ತಂದಿದ್ದಾರೆ. ಈ ಯೋಜನೆಯಡಿ ರೈತರು ತಾವು ಬೆಳೆದ ಆಹಾರ ಧಾನ್ಯಗಳನ್ನು ಕಿರು ಆಹಾರ ಸಂಸ್ಕರಣೆ ಘಟಕಗಳ ಮೂಲಕ ಮೌಲ್ಯವರ್ಧನೆ ಮಾಡಿ ಹೆಚ್ಚು ಆದಾಯ ಪಡೆಯಬೇಕು ಎಂಬ ಉದ್ದೇಶ ಹೊಂದಿದೆ. ಇದರ ಜೊತೆಗೆ ರೈತ ಬೆಳೆದ ಆಹಾರಧಾನ್ಯವನ್ನು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಸಿಗುವವರೆಗೆ ಸಂರಕ್ಷಿಸಿ ಇಟ್ಟುಕೊಳ್ಳಲು ಗೋದಾಮು ನಿರ್ಮಾಣ ಮಾಡುವುದು. ತಮ್ಮ ಧವಸ-ಧಾನ್ಯ ವಿಂಗಡಣೆ ಮತ್ತು ಶ್ರೇಣೀಕರಣ ಮಾಡುವುದು. ಸಣ್ಣ ರೈತರಿಗೆ ಕೃಷಿ ಚಟುವಟಿಕೆ ಮಾಡಲು ಯಂತ್ರೋಪಕರಣ ಒದಗಿಸುವುದು. ಈ ರೀತಿ ಹಲವಾರು ರೀತಿಯ ಸವಲತ್ತು ಕೊಡುವ ಮೂಲಕ ರೈತರ ಬದುಕನ್ನು ಸುಗಮಗೊಳಿಸುವ ಮತ್ತು ಆದಾಯ ದ್ವಿಗುಣಗೊಳಿಸುವ ಕಾರಣದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದರು.ಆದರೆ, ಈ ಯೋಜನೆಗೆ ಬ್ಯಾಂಕ್‌ಗಳು ಹಣಕಾಸಿನ ನೆರವು ನೀಡುವ ಸಂದರ್ಭದಲ್ಲಿ ಕಿರು ಆಹಾರ ಸಂಸ್ಕರಣೆ ಘಟಕ ಮತ್ತು ಕೃಷಿ ಮೂಲಸೌಕರ್ಯ ನಿಧಿ ಈ ಎರಡು ಯೋಜನೆ ಜಾರಿ ಮಾಡುವಾಗ ಇವುಗಳನ್ನು ಬ್ಯಾಂಕ್‌ಗಳು ಕಿರು ಉದ್ಯಮವಾಗಿ ಪರಿಗಣಿಸುತ್ತಿವೆ. ಬ್ಯಾಂಕ್‌ಗಳು ನಿಬಂಧನೆಯಂತೆ ರೈತ ತನ್ನ ಜಮೀನನ್ನು ಕೃಷಿಯೇತರ ಜಮೀನಾಗಿ ಪರಿವರ್ತನೆ ಮಾಡಿದಾಗ ಅದನ್ನು ಸ್ಥಳೀಯ ಪಂಚಾಯತಿಗಳಲ್ಲಿ ದಾಖಲು ಮಾಡಬೇಕಾಗುತ್ತದೆ. ಹೀಗೆ ದಾಖಲಾದ ಜಮೀನಿಗೆ ಸ್ಥಳೀಯ ಪಂಚಾಯತಿ ಆಡಳಿತ ಉದ್ಯಮವಾಗಿ ಪರಿಗಣಿಸಿ ಹೆಚ್ಚಿನ ಕರ (ಟ್ಯಾಕ್ಸ್) ಆಕರಣೆ ಮಾಡುವ ಸಂದರ್ಭವಿದೆ. ಹೀಗಾಗಿ ಪಂಚಾಯತಿ ಆಡಳಿತ ವಿಧಿಸುವ ಕರ (ಟ್ಯಾಕ್ಸ್) ರೈತನಿಗೆ ಹೊರೆಯಾಗಲಿದೆ. ಒಂದು ವೇಳೆ ಕಿರು ಆಹಾರ ಸಂಸ್ಕರಣೆ ಘಟಕ ನಿರ್ವಹಿಸುವಲ್ಲಿ ರೈತ ವಿಫಲನಾದರೆ ಎನ್.ಎ ಆದ ಜಮೀನಿಗೆ ಕಾಯಂ ಆಗಿ ಕರ ತುಂಬಬೇಕಾಗುತ್ತದೆ ಅಥವಾ ಕೃಷಿಯೇತರ ಭೂಮಿಯನ್ನು ಪುನಃ ಕೃಷಿ ಭೂಮಿಯಾಗಿ ಮಾರ್ಪಡಿಸಲು ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಾಗುತ್ತದೆ ಎಂದರುಕೃಷಿ ಸಂಬಂಧಿತ ಈ ಎಲ್ಲ ಚಟುವಟಿಕೆಗಳನ್ನು ಕಿರು ಉದ್ಯಮವಾಗಿ ಪರಿಗಣಿಸದೆ ಇದು ಕೂಡ ಕೃಷಿ ಚಟುವಟಿಕೆಯ ಮುಂದುವರಿದ ಭಾಗವೆಂದು ಪರಿಗಣಿಸಿ ಕೃಷಿ ಜಮೀನಿನಲ್ಲಿ ಇಂತಹ ಚಟುವಟಿಕೆ ಮಾಡಲು ಅವಕಾಶ ನೀಡಬೇಕು. ಯಾವುದೇ ರೈತ ತನ್ನ ಜಮೀನಿನ ಶೇ.10ರಷ್ಟು ಭಾಗದಲ್ಲಿ ದನದ ಕೊಟ್ಟಿಗೆ ನಿರ್ಮಾಣ ಮಾಡುವ, ಬೆಲ್ಲ ತಯಾರಿಸಲು ಅಲೆಮನೆ ನಿರ್ಮಿಸುವ, ಕಿರು ಆಹಾರ ಸಂಸ್ಕರಣೆ ಘಟಕ ನಿರ್ಮಿಸುವ, ಆಹಾರ ಧ್ಯಾನ ಸಂಗ್ರಹಿಸಲು ವೇರ್‌ಹೌಸ್ ನಿರ್ಮಿಸುವ, ಧವಸ ಧಾನ್ಯಗಳ ವಿಂಗಡನೆ ಮತ್ತು ಶ್ರೇಣೀಕರಣ ಮಾಡುವುದರ ಜೊತೆಗೆ ಪ್ಯಾಕಿಂಗ್ ಮಾಡುವುದು ಈ ಎಲ್ಲ ಚಟುವಟಿಕೆಗಳು ಕೃಷಿಗೆ ಸಂಬಂಧಪಟ್ಟ ಮುಂದುವರಿದ ಭಾಗವೆಂದು ಪರಿಗಣಿಸಿ ಕೃಷಿ ಜಮೀನಿನಲ್ಲಿ ಕೂಡ ಇಂತಹ ಘಟಕಗಳಿಗೆ ಅವಕಾಶ ನೀಡಿದಾಗ ಇನ್ನೂ ಅತಿ ಹೆಚ್ಚು ರೈತರು ಸಹಜವಾಗಿ ಇದರ ಲಾಭವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಹೀಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬ್ಯಾಂಕುಗಳಿಗೆ ಸೂಕ್ತ ನಿರ್ದೆಶನ ನೀಡುವ ಮೂಲಕ ಬಹುತೇಕ ರೈತರಿಗೆ ಇದರ ಲಾಭ ದೊರೆಯುವಂತೆ ಮಾಡಬೇಕೆಂದು ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.