ಕಾರವಾರದಲ್ಲಿ ಗೋ ಸಮ್ಮಾನ್ ಆಹ್ವಾನ್ ಅಭಿಯಾನದಿಂದ ಮನವಿ
ದೇಶೀಯ ಗೋವಂಶದ ಸಂಪೂರ್ಣ ರಕ್ಷಣೆ, ಗೋಹತ್ಯೆ ತಡೆಗೆ ಕಠಿಣ ಕೇಂದ್ರ ಕಾನೂನು ಜಾರಿ ಹಾಗೂ ಪ್ರತ್ಯೇಕ ಗೋ-ಪಾಲನೆ ಸಚಿವಾಲಯ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಗೋ ಸಮ್ಮಾನ್ ಆಹ್ವಾನ್ ಅಭಿಯಾನದ ಪದಾಧಿಕಾರಿಗಳು ಸೋಮವಾರ ಕಾರವಾರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅಭಿಯಾನದ ಪದಾಧಿಕಾರಿಗಳು, ಗೋವುಗಳ ಸಂರಕ್ಷಣೆ, ಸೇವೆ ಮತ್ತು ರಾಷ್ಟ್ರೀಯ ಗೌರವವನ್ನು ಖಾತ್ರಿಪಡಿಸುವ ಸಮಗ್ರ ಕೇಂದ್ರ ಕಾನೂನನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.ಗೋ ಕಳ್ಳಸಾಗಣೆ ಮತ್ತು ಗೋಹತ್ಯೆಯನ್ನು ಜಾಮೀನುರಹಿತ ಗಂಭೀರ ಅಪರಾಧವೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ಹಾಗೂ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕಠಿಣ ಕಾನೂನು ರೂಪಿಸಬೇಕು. ದೇಶೀಯ ಗೋವಂಶಕ್ಕೆ ರಾಷ್ಟ್ರಮಾತೆ ಅಥವಾ ರಾಷ್ಟ್ರ ಆರಾಧ್ಯ ಎಂಬ ಸಾಂವಿಧಾನಿಕ ಮಾನ್ಯತೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದರ ಜೊತೆಗೆ ಹೆದ್ದಾರಿಗಳಲ್ಲಿ ಗೋ-ಆ್ಯಂಬುಲೆನ್ಸ್ ಹಾಗೂ ಟ್ರಾಮಾ ಸೆಂಟರ್‌ಗಳನ್ನು ಸ್ಥಾಪಿಸುವುದು, ಶಾಲಾ ಪಠ್ಯಕ್ರಮದಲ್ಲಿ ಗೋ ವಿಜ್ಞಾನ ವಿಷಯವನ್ನು ಸೇರಿಸುವುದು, ಗೋಮಾಳ ಭೂಮಿಗಳ ಸಂರಕ್ಷಣೆಗೆ ಪ್ರತ್ಯೇಕ ಮಂಡಳಿ ರಚಿಸುವಂತೆ ಆಗ್ರಹಿಸಲಾಗಿದೆ.ಕರಾವಳಿ ಜಿಲ್ಲೆಯ ಸಂಚಾಲಕ ಗಜೇಂದ್ರ ಎಸ್. ಬೇಲೆಮನೆ, ನಾಗರಾಜ ಪೂಜಾರಿ ಬೈಂದೂರು, ಗುರೂಜಿ ರಘುವೀರ್, ಅಮಿತ್ ಮಾಳ್ಸೇಕರ್, ಧೀರಜ್ ರಾಣೆ, ಸಾಯಿಕಿರಣ ನಾಗೇಕರ, ಪ್ರಶಾಂತ ಪೇಡ್ನೇಕರ್, ವಿನಾಯಕ ಸಾವಂತ, ಓಂಕಾರ್ ಅಂಕೋಲೇಕರ್ ಮತ್ತಿತರರು ಇದ್ದರು.