ಅಜ್ಜಂಪುರ ರಸ್ತೆ ಪಾದಚಾರಿ ಮಾರ್ಗ ತೆರವಿಗೆ ಆಗ್ರಹ

KannadaprabhaNewsNetwork |  
Published : Nov 20, 2024, 12:31 AM IST
19 ಬೀರೂರು 01ಬೀರೂರು- ಅಜ್ಜಂಪುರ ರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ದಲಿತ ಸಂಘಟನೆಗಳ ಪದಾಧಿಕಾರಿಗಳು ಪುರಸಭೆಯ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ತರೀಕೆರೆ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಅವರಿಗೆ ಮನವಿ ಸಲ್ಲಿಸಿದರು. ಪುರಸಭಾಧ್ಯಕ್ಷೆ ವನಿತಾ ಮಧುಬಾವಿಮನೆ, ಮುಖ್ಯಾಧಿಕಾರಿ ಜಿ.ಪ್ರಕಾಶ್, ಪಿಎಸ್‌ಐ ಸಜಿತ್‌ಕುಮಾರ್ ಇದ್ದರು. | Kannada Prabha

ಸಾರಾಂಶ

ಪಟ್ಟಣದ ಅಜ್ಜಂಪುರ ರಸ್ತೆಯನ್ನು ಕೆಶಿಪ್‌ನವರು ವಿಸ್ತರಿಸುವ ಸಮಯದಲ್ಲಿ ಪರಿಹಾರ ನೀಡಿ ಭೂಸ್ವಾಧೀನ ಪಡೆದುಕೊಂಡ ಭೂಮಿಯಲ್ಲಿ ರಸ್ತೆಯ ಎರಡು ಬದಿ ಪಾದಚಾರಿ ರಸ್ತೆ ನಿರ್ಮಾಣವಾಗುವ ಬದಲು ಪರಿಹಾರ ಪಡೆದವರೇ ಅತಿಕ್ರಮಿಸಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ದಲಿತ ಸಂಘಟನೆಗಳ ಸದಸ್ಯರು ಆರೋಪಿಸಿ ಪುರಸಭೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭವಾರ್ತೆ ಬೀರೂರು

ಪಟ್ಟಣದ ಅಜ್ಜಂಪುರ ರಸ್ತೆಯನ್ನು ಕೆಶಿಪ್‌ನವರು ವಿಸ್ತರಿಸುವ ಸಮಯದಲ್ಲಿ ಪರಿಹಾರ ನೀಡಿ ಭೂಸ್ವಾಧೀನ ಪಡೆದುಕೊಂಡ ಭೂಮಿಯಲ್ಲಿ ರಸ್ತೆಯ ಎರಡು ಬದಿ ಪಾದಚಾರಿ ರಸ್ತೆ ನಿರ್ಮಾಣವಾಗುವ ಬದಲು ಪರಿಹಾರ ಪಡೆದವರೇ ಅತಿಕ್ರಮಿಸಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ದಲಿತ ಸಂಘಟನೆಗಳ ಸದಸ್ಯರು ಆರೋಪಿಸಿ ಪುರಸಭೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಕಡೂರು ತಾಲೂಕು ಮಾದಿಗ ಶ್ರೇಯೋಭಿವೃದ್ಧಿ ಟ್ರಸ್ಟ್, ಮಾದಿಗ ಮೀಸಲಾತಿ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ಬ್ಲೂ ಆರ್ಮಿ, ದಲಿತ ಸಂಘರ್ಷ ಸಮಿತಿ ಸದಸ್ಯರು ಮತ್ತು ಮೇಲನಹಳ್ಳಿಯ ಗ್ರಾಮಸ್ಥರು ಮಂಗಳವಾರ ಪುರಸಭೆಯ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಬಿ.ಟಿ. ಚಂದ್ರಶೇಖರ್, ಬೀರೂರು-ಅಜ್ಜಂಪುರ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಕೆಶಿಪ್‌ನವರು ರಸ್ತೆಯನ್ನು ಮೊದಲಿಗಿಂತ ಕಿರಿದಾಗಿ ನಿರ್ಮಿಸಿದ್ದಾರೆ. ಚರಂಡಿಯ ಪಕ್ಕದಲ್ಲಿ ಪಾದಚಾರಿ ರಸ್ತೆ ನಿರ್ಮಿಸಲು ಕ್ರಮ ವಹಿಸಿಲ್ಲ. ಪರಿಣಾಮವಾಗಿ ಸರ್ಕಾರದಿಂದ ಪರಿಹಾರ ಧನ ಪಡೆದವರು ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ಕಟ್ಟಡಗಳನ್ನು ನಿರ್ಮಿಸಿದ್ದಾರೆ ಎಂದು ದೂರಿದರು.

ಕರ್ನಾಟಕ ರಾಜ್ಯ ಬ್ಲೂ ಆರ್ಮಿಯ ರಾಜ್ಯಾಧ್ಯಕ್ಷ ಶೂದ್ರ ಶ್ರೀನಿವಾಸ್ ಮಾತನಾಡಿ, ಇದು ಕೇವಲ ಸಾಂಕೇತಿಕ ಪ್ರತಿಭಟನೆ. ಇನ್ನು 15ದಿನಗಳ ಅವಧಿಯಲ್ಲಿ ಪುರಸಭೆಯು ತೆರವಿಗೆ ಕ್ರಮ ವಹಿಸದಿದ್ದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿ, ಮೂಲ ಕಡತವನ್ನು ಪರಿಶೀಲಿಸಿ ಯಾರಿಂದ ಎಷ್ಟು ಭೂಮಿ ವಶಪಡಿಸಿಕೊಳ್ಳಲಾಗಿದೆ ಎನ್ನುವ ಮಾಹಿತಿ ಪಡೆದು ಮುಖ್ಯಾಧಿಕಾರಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ತರೀಕೆರೆ ಉಪವಿಭಾಗಾಧಿಕಾರಿ ಕೆ.ಜೆ. ಕಾಂತರಾಜ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.

ನಂತರ ಪ್ರತಿಭಟನಾಕಾರು ಕಡೂರು-ಬೀರೂರು ನಡುವಿನ "ಡಿ''''''''ದರ್ಜೆ ನೌಕರರ ಬಡಾವಣೆಗೆ ಪುರಸಭೆ ಮೂಲಸೌಕರ್ಯ ಕಲ್ಪಿಸುವಂತೆ ಸೂಚಿಸಬೇಕು. ಸಮಾಜ ಕಲ್ಯಾಣ ಇಲಾಖೆಯು ಮಾದಿಗ ಜನಾಂಗದವರು ಇಲ್ಲದ ಕಡೆ ಬಾಬು ಜಗಜೀವನರಾಮ್ ಭವನ ನಿರ್ಮಿಸಲು ಮುಂದಾಗಿದ್ದು, ಅದನ್ನು ತಡೆದು ಮಾದಿಗ ಜನಾಂಗದವರು ವಾಸಿಸುವ ಸ್ಥಳದಲ್ಲಿಯೇ ನಿರ್ಮಿಸಬೇಕು. ಬೀರೂರಿನಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ಡಿಡಿ ಮನೆಗಳ ನಿರ್ಮಾಣಕ್ಕೆ ಫಲಾನುಭವಿಗಳಿಂದ ಡಿಡಿ ಮೂಲಕ ಹಣ ಪಡೆದರೂ ಮನೆ ನಿರ್ಮಿಸಿಲ್ಲ, ಇದಕ್ಕೂ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಉಪವಿಭಾಗಾಧಿಕಾರಿ ಕೆ.ಜೆ. ಕಾಂತರಾಜ್ ಮಾತನಾಡಿ, ಫುಟ್‌ಪಾತ್ ತೆರವು ವಿಚಾರವಾಗಿ ಮುಖ್ಯಾಧಿಕಾರಿ ಪತ್ರ ವ್ಯವಹಾರ ನಡೆಸುವ ಬದಲು, ನೇರವಾಗಿ ಕೆಶಿಪ್ ಕಚೇರಿಗೆ ತೆರಳಿ ಮಾಹಿತಿ ಪಡೆದು ಕ್ರಮ ವಹಿಸಲು ಮುಂದಾಗಬೇಕು, "ಡಿ "ದರ್ಜೆ ನೌಕರರ ಬಡಾವಣೆಗೆ ರಸ್ತೆ, ನೀರು, ಚರಂಡಿ, ವಿದ್ಯುದ್ದೀಪ ಮೊದಲಾದ ಮೂಲಸೌಕರ್ಯ ಕಲ್ಪಿಸುವುದು ಪುರಸಭೆಯ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಬಿ.ಎನ್.ಮಲ್ಲಿಕಾರ್ಜುನ, ಕಡೂರು ಕೃಷ್ಣತಂಗಲಿ ರಾಘವೇಂದ್ರ, ಕೆದಿಗೆರೆ ಬಸವರಾಜ್, ಗೋಪಿ, ಆಸಂದಿಗಣೇಶ್, ಸಗುನಪ್ಪ, ಮಾಳಪ್ಪ, ಮಲ್ಲಪ್ಪ, ನಾಗಪ್ಪ, ನಿವೃತ್ತ ಶಿಕ್ಷಕ ಜಯಣ್ಣ, ಪಿಎಸ್‌ಐ ಜಿ.ಆರ್. ಸಜಿತ್‌ಕುಮಾರ್ ಮತ್ತು ಸಿಬ್ಬಂದಿ ಬಂದೋಬಸ್ತ್ ವಹಿಸಿದ್ದರು.

ಪಾದಚಾರಿ ರಸ್ತೆಯ ಅತಿಕ್ರಮಣ ತೆರವುಗೊಳಿಸುವಲ್ಲಿ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರೂ ಸೇರಿ ಎಲ್ಲ ಸದಸ್ಯರ ಬೆಂಬಲವೂ ಇದೆ. ಇದರಲ್ಲಿ ನಮಗೆ ಯಾವ ಆಕ್ಷೇಪಣೆಯೂ ಇಲ್ಲ. ಜಿಲ್ಲಾಧಿಕಾರಿಯೇ ಸಭೆ ನಡೆಸಿ ಒತ್ತುವರಿ ತೆರವಿಗೆ ಈ ಹಿಂದೆಯೇ ಸೂಚಿಸಿದ್ದಾರೆ. ಮುಖ್ಯಾಧಿಕಾರಿ ಶಾಸಕರ ಗಮನಕ್ಕೆ ತಂದು ಕ್ರಮ ವಹಿಸುವುದಾಗಿ ತಿಳಿಸಿದ್ದರು.'''''''' ವನಿತಾ ಮಧುಬಾವಿಮನೆ, ಅಧ್ಯಕ್ಷರು, ಪುರಸಭೆ, ಬೀರೂರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ