ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಭೂ ಸ್ವಾಧೀನಪಡಿಸಿಕೊಂಡ ದೇವನಹಳ್ಳಿ ತಾಲೂಕಿನ ಬಗರ್ ಹುಕುಂ ಸಾಗುವಳಿ ರೈತರಿಗೆ ಪರಿಹಾರ ಕೊಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎನ್.ವೀರಣ್ಣ ಸರ್ಕಾರವನ್ನು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ವೆಂಕಟರಾಜು ಮಾತನಾಡಿ, ಶಿವಮೊಗ್ಗದಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಪರಿಹಾರ ಕೊಡಲಾಗಿದೆ. ಈ ಆಧಾರದ ಮೇಲೆ ದೇವನಹಳ್ಳಿ ತಾಲೂಕಿನ ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು. ನ್ಯಾಯಾಲಯದಲ್ಲೂ ಸಹ ರೈತರು ಮನವಿ ಮಾಡಿದ್ದೇವೆ. ಸರ್ಕಾರದಿಂದ ರೈತರಿಗೆ ಪರಿಹಾರ ಕೊಡಬೇಕೆಂದು ಶಿಫಾರಸ್ಸು ಮಾಡಿದ್ದು ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ದೇವನಹಳ್ಳಿ ತಹಸೀಲ್ದಾರರು ಭೂಮಿ ಕಳೆದುಕೊಂಡ ರೈತರ ಮಾಹಿತಿಯನ್ನು ತಪ್ಪಾಗಿ ವರದಿ ನೀಡಿರುವುದು ಕಂಡು ಬಂದಿದ್ದು ಮರು ಪರಿಶೀಲಿಸಿ ಸರ್ಕಾರಕ್ಕೆ ವರದಿ ಮಾಡಿ ಬಗರ್ ಹುಕುಂ ಸಾಗುವಳಿ ರೈತರಿಗೆ ಪರಿಹಾರ ಕೊಡಿಸಿಕೊಡಬೇಕು ಎಂದು ಹೇಳಿದರು.
ಭೂಮಿ ಬಗರ್ ಹುಕುಂ ಭೂಸ್ವಾದೀನ ವಿರೋಧಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಆನಂದ್ ಗೌಡ ಮಾತನಾಡಿ, ಬಗರ್ ಹುಕುಂ ಸಾಗುವಳಿ ರೈತರಿಗೆ ಮಹಾನಗರ ಪಾಲಿಕೆ ೧೮ ಕಿಲೋ ಮೀಟರ್, ನಗರ ಪಾಲಿಕೆ ೧೦ ಕಿಲೋ ಮೀಟರ್, ಪಂಚಾಯಿತಿ ಪಟ್ಟಣ ೫ ಕಿಲೋ ಮೀಟರ್‌ನ್ನು ಕೂಡಲೇ ರದ್ದು ಪಡಿಸಬೇಕು. ತಹಸೀಲ್ದಾರರು ಬಗರ್ ಹುಕುಂ ಸಾಗುವಳಿ ಜಮೀನನ್ನು ತೆರವುಗೊಳಿಸುವುದನ್ನು ಕೂಡಲೇ ರದ್ದುಪಡಿಸಬೇಕು. ಬಡ ಕುಟುಂಬಗಳು ವಾಸ ಮಾಡಲು ಮನೆಗಳು ಮತ್ತು ನಿವೇಶನ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಸರ್ಕಾರದಿಂದ ಬಡವರಿಗೆ ನಿವೇಶನ ಕೊಟ್ಟು ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಅವಕಾಶ ಮಾಡಿಕೊಡಬೇಕು ಎಂದರು.ಇದೆ ವೇಳೆ ಕರ್ನಾಟಕ ಪ್ರಾಂತರೈತ ಸಂಘದ ಗೌರವಾಧ್ಯಕ್ಷ ಎಂ.ಕೃಷ್ಣಪ್ಪ, ಉಪಾಧ್ಯಕ್ಷ ಮುನಿರಾಜು, ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಸಹಾಯಕ ಕಾರ್ಯದರ್ಶಿ ಸುಮಿತ್ರಮ್ಮ, ಬಗರ್ ಹುಕುಂ ಸಾಗುವಳಿ ಮತ್ತು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ತಾಲೂಕು ಗೌರವಾಧ್ಯಕ್ಷ ಡಿ.ಎನ್.ಗೋವಿಂದರಾಜು, ಅಧ್ಯಕ್ಷ ವಿ.ಮುನಿರಾಜು, ಉಪಾಧ್ಯಕ್ಷ ನಂಜೇಗೌಡ, ಪ್ರಧಾನ ಕಾರ್ಯದರ್ಶಿ ಆನಂದ್‌ಗೌಡ ಮತ್ತಿತರರು ಉಪಸ್ಥಿತರಿದ್ದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡ ಬಗರ್ ಹುಕುಂ ಸಾಗುವಳಿ ರೈತರು ಪರಿಹಾರ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.