ಶ್ರೀರಂಗಪಟ್ಟಣ: ಮತ್ತೊಬ್ಬ ಭಿಕ್ಷುಕಿ ಬಳಿ ಮೂಟೆಗಟ್ಟಲೆ ಹಣ..!

KannadaprabhaNewsNetwork |  
Published : Aug 28, 2026, 01:30 AM IST
27ಕೆಎಂಎನ್‌ಡಿ-10ಅಮೇರಿಕಾ ಡಾಲರ್‌ನ್ನು ತೋರಿಸಿದ ಡಾ. ಭಾನುಪ್ರಕಾಶ್ ಶರ್ಮ | Kannada Prabha

ಸಾರಾಂಶ

ಮಂಡ್ಯದ ಭಿಕ್ಷುಕಿಯೊಬ್ಬಳ ಮನೆಯಲ್ಲಿ 40 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾದ ಬೆನ್ನಲ್ಲೇ, ಶ್ರೀರಂಗಪಟ್ಟಣದ ಮತ್ತೊಬ್ಬ ಭಿಕ್ಷುಕಿ ಮನೆಯಲ್ಲಿ 2.50 ಲಕ್ಷಕ್ಕೂ ಹೆಚ್ಚು ಹಣ ಪತ್ತೆಯಾಗಿರುವುದು ಎಲ್ಲರನ್ನೂ ಹುಬ್ಬೇರಿಸಿದೆ. ಭಿಕ್ಷುಕಿಯೊಬ್ಬರ ಮನೆಯಲ್ಲಿನ ತ್ಯಾಜ್ಯದಲ್ಲಿ ಸೇರಿಕೊಂಡಿದ್ದ ಮೂಟೆಗಟ್ಟಲೆ ಹಣ, ಚಿಲ್ಲರೆ ಕಾಸು ಜೊತೆ ಅಮೆರಿಕ ಡಾಲರ್ ಸಹ ಕಾಣಿಸಿಕೊಂಡಿರುವುದು ಮತ್ತೊಂದು ಅಚ್ಚರಿಯಾಗಿದೆ.

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ಮಂಡ್ಯದ ಭಿಕ್ಷುಕಿಯೊಬ್ಬಳ ಮನೆಯಲ್ಲಿ 40 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾದ ಬೆನ್ನಲ್ಲೇ, ಶ್ರೀರಂಗಪಟ್ಟಣದ ಮತ್ತೊಬ್ಬ ಭಿಕ್ಷುಕಿ ಮನೆಯಲ್ಲಿ 2.50 ಲಕ್ಷಕ್ಕೂ ಹೆಚ್ಚು ಹಣ ಪತ್ತೆಯಾಗಿರುವುದು ಎಲ್ಲರನ್ನೂ ಹುಬ್ಬೇರಿಸಿದೆ. ಭಿಕ್ಷುಕಿಯೊಬ್ಬರ ಮನೆಯಲ್ಲಿನ ತ್ಯಾಜ್ಯದಲ್ಲಿ ಸೇರಿಕೊಂಡಿದ್ದ ಮೂಟೆಗಟ್ಟಲೆ ಹಣ, ಚಿಲ್ಲರೆ ಕಾಸು ಜೊತೆ ಅಮೆರಿಕ ಡಾಲರ್ ಸಹ ಕಾಣಿಸಿಕೊಂಡಿರುವುದು ಮತ್ತೊಂದು ಅಚ್ಚರಿಯಾಗಿದೆ.

ಪಟ್ಟಣದ ಪೂರ್ಣಯ್ಯ ಬೀದಿಯಲ್ಲಿ ವೇದಬ್ರಹ್ಮ ಡಾ.ಭಾನು ಪ್ರಕಾಶ್ ಅವರ ಮನೆಯ ಹಿಂಭಾಗದಲ್ಲಿ ಒಂದು ಪುಟ್ಟ ಮನೆಯಲ್ಲಿ ವಾಸವಿದ್ದ ಭಿಕ್ಷುಕಿ ಪಾರ್ವತಿ (ಅವಳೂ ಭಿಕ್ಷುಕಿಯಾಗಿದ್ದು ಈಚೆಗೆ ನಿಧನ ಹೊಂದಿದ್ದಾರೆ) ಅವರ ಮಗಳು ಸುಮಾರು 60 ವರ್ಷ ವಯಸಿನ ಸಾವಿತ್ರಿ ಎಂಬ ಮಹಿಳೆಯ ಮನೆಯಲ್ಲಿ ಕಸದ ರಾಶಿ ಜೊತೆ ನೋಟು-ಚಿಲ್ಲರೆ ಹಣವನ್ನು ಚೀಲಗಳಲ್ಲಿ ತುಂಬಿಡಲಾಗಿತ್ತು.

ಕಳೆದ 15 ವರ್ಷದಿಂದ ಭಿಕ್ಷೆ ಮಾಡಿಕೊಂಡಿದ್ದ ತಾಯಿ ಹಾಗೂ ಮಗಳು ಚೀಲದಲ್ಲಿ ಹಣವನ್ನು ತುಂಬಿಟ್ಟಿದ್ದರು. 500, 200, 100, 50, 20, 10 ರು. ಮುಖ ಬೆಲೆಯ ನೋಟುಗಳ ಎಣಿಕೆಯಲ್ಲಿ ಇದುವರೆಗೆ 1,85,000 ರು. ಜೊತೆ ಒಂದು ಅಮೆರಿಕನ್‌ ಡಾಲರ್‌ ಹಾಗೂ ಹಳೆಯ 500 ರ ನೋಟ್ ದೊರೆತಿದೆ. ಅಲ್ಲದೇ, ಇನ್ನೂ 6 ಚೀಲ ದೊರೆತಿದ್ದ ಚಿಲ್ಲರೆ ಹಣವನ್ನು ಏಣಿಕೆ ಮಾಡಬೇಕಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಾವಿತ್ರಿ ಅವರ ತಾಯಿ ಪಾರ್ವತಿ ಇತ್ತೀಚೆಗೆ ಮೃತರಾಗಿದ್ದರು. ಅವರಿಗೆ ವೃದ್ಧಾಪ್ಯ ವೇತನಗಳು ಬರುತ್ತಿದ್ದು, ಅಕ್ಕ-ಪಕ್ಕದ ಮನೆಯವರು ಸೇರಿ ಅವರ ಅಂತ್ಯ ಸಂಸ್ಕಾರ ನಡೆಸಿದ್ದರು. ಆಕೆಯ ಮಗಳು ಸಾವಿತ್ರಿ ಕೂಡ ಭಿಕ್ಷುಕಿಯಾಗಿದ್ದರಿಂದ ಒಂಟಿಯಾಗಿ ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯ, ಸ್ನಾನಘಟ್ಟ, ಶ್ರೀಗಂಗಾಧರೇಶ್ವರ ಸ್ವಾಮಿ ದೇವಾಲಯದ ಬಳಿ ಭಿಕ್ಷೆ ಬೇಡಿಕೊಂಡು ಈ ಹಣವನ್ನು ಸಂಗ್ರಹಿಸಿದ್ದರು ಎಂದು ತಿಳಿದು ಬಂದಿದೆ.

ಮನೆಯಲ್ಲಿ ಕಸದ ರಾಶಿ ಜೊತೆ ಪ್ಲಾಸ್ಟಿಕ್ ಪೇಪರ್ ಸೇರಿದಂತೆ ಇತರೆ ತ್ಯಾಜ್ಯಗಳೊಂದಿಗೆ ಈ ಹಣವನ್ನಿಟ್ಟುಕೊಂಡು ಬೆಳಕಿಲ್ಲದ ಮನೆಯಲ್ಲಿ ವಾಸಿಸುತ್ತಿದ್ದರು. ಈಕೆಗೆ ಹುಷಾರಿಲ್ಲದ ಕಾರಣ ಅಕ್ಕ-ಪಕ್ಕದಲ್ಲಿದ್ದ ಶ್ರೀರಂಗನಾಯಕ ಸ್ತ್ರೀಶಕ್ತಿ ಸಮಾಜದ ಅಧ್ಯಕ್ಷೆ ವಿಶಾಲಾಕ್ಷಿ ಹಾಗೂ ಡಾ.ಭಾನುಪ್ರಕಾಶ್ ಅವರು ಅನುಮಾನದಿಂದ ಸ್ಥಳೀಯರು ಜನರ ಜೊತೆ ತೆರಳಿ ನೋಡಿದಾಗ ಸಾವಿತ್ರಿ ಅನಾರೋಗ್ಯದಿಂದ ನರಳುತ್ತಿದ್ದುದ್ದು ಕಂಡು ಬಂದಿದೆ. ತಕ್ಷಣವೇ ಆಕೆಯನ್ನ ಉಪಚರಿಸಿ, ಹೊರ ಕರೆತಂದು ನಂತರ ಮನೆಯಲ್ಲಿದ್ದ ತ್ಯಾಜ್ಯವನ್ನು ತೆಗೆಸಲು ಮುಂದಾಗಿದ್ದರು.

ವಿವಿಧ ಸಂಘ-ಸಂಸ್ಥೆಯವರು ಆಗಮಿಸಿ ಸಾವಿತ್ರಿ ಅವರಿಗೆ ಸ್ನಾನ ಮಾಡಿಸಿ, ಮನೆಯನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಈ ವೇಳೆ ಪ್ಲಾಸ್ಟಿಕ್‌ ಚೀಲದಲ್ಲಿ ನೋಟು ಹಾಗೂ ಚಿಲ್ಲರೆ ಹಣ ತುಂಬಿದ ಚೀಲಗಳು ಸಿಕ್ಕಿವೆ. ಹಣದ ಚೀಲಗಳನ್ನು ಹೊರ ತೆಗೆದ ಸಂಘಟಕರು ಅದರಲ್ಲಿದ್ದ ಹಣವನ್ನು ಸುರಿದು ಎಣಿಸಲು ಮುಂದಾಗಿದ್ದಾರೆ.

ಸಾವಿತ್ರಿ ಹೆಸರಿಗೆ ಹಣ ಜಮೆ: ಡಾ.ಭಾನುಪ್ರಕಾಶ್‌ ಶರ್ಮ

ನಮ್ಮ ಮನೆಯ ಹಿಂಬದಿಯಲ್ಲಿ ಹಲವು ವರ್ಷಗಳಿಂದಲೂ ವಾಸವಿದ್ದ ಪಾರ್ವತಿ ಮತ್ತು ಆಕೆಯ ಮಗಳು ಸಾವಿತ್ರಿ ನಮಗೆ ಚಿರಪರಿಚಿತರು. ಪುಟ್ಟ ಮನೆಯಲ್ಲಿ ವಾಸವಿದ್ದ ಅವರು ಈ ಮೊದಲು ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ 15 ವರ್ಷದಿಂದ ಭಿಕ್ಷೆ ಬೇಡಿ ಬರುತ್ತಿದ್ದರು. ಅಕ್ಕಪಕ್ಕದಲ್ಲಿದ್ದ ನಾವುಗಳು ಅವರಿಗೆ ತಿನ್ನಲು ಆಹಾರವನ್ನು ನೀಡುತ್ತಿದ್ದೆವು. ಆದರೆ, ಭಿಕ್ಷೆ ಬೇಡಿ ಇಷ್ಟು ಹಣ ಚೀಲದಲ್ಲಿ ಇಟ್ಟಿರುವುದು ನಮಗೆ ಗೊತ್ತಿರಲಿಲ್ಲ. ಈಗ ಹಣವನ್ನು ಏಣಿಕೆ ಮಾಡಿ ಆಕೆಯ ಹೆಸರಿಗೆ ಜಮೆ ಮಾಡುವುದಾಗಿ ಭಾನುಪ್ರಕಾಶ್ ಶರ್ಮ ಹಾಗೂ ವಿಶಾಲಾಕ್ಷಿ ತಿಳಿಸಿದರು.

ಮುಖ್ಯಾಂಶ

-ಶ್ರೀರಂಗಪಟ್ಟಣದ ಭಿಕ್ಷುಕಿ ಬಳಿ ಸಿಕ್ಕತು ಅಮೆರಿಕ ಡಾಲರ್

-ಭಿಕ್ಷುಕಿ ಕೂಡಿಟ್ಟಿದ್ದು 2.50 ಲಕ್ಷಕ್ಕೂ ಹೆಚ್ಚು ಹಣ

-ಈವರೆಗೆ 1.85 ಲಕ್ಷ ರು. ಲೆಕ್ಕ ಸಿಕ್ಕಿದೆ, ಇನ್ನೂ 6 ಚೀಲದಲ್ಲಿರುವ ಚಿಲ್ಲರೆ ಎಣಿಕೆ ಬಾಕಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ಯಾವರೆಕೊಪ್ಪಕ್ಕೆ ತೋಳ ಬಂದ್ವು ತೋಳ
ಮಕ್ಕಳ ರಕ್ಷಣೆಗಾಗಿ ನದಿಗೆ ಹಾರಿದ ಮಹಿಳೆ