ಕನ್ನಡಪ್ರಭ ವಾರ್ತೆ, ಮಂಡ್ಯ
ನಗರದ ಹೊರವಲಯದಲ್ಲಿರುವ ಮೈ ಅಸಿಟೇಟ್ ಪ್ರೌಢಶಾಲೆಯಲ್ಲಿ ನಡೆದ ಪ್ರೇರಣಾ ಮತ್ತು ಪರೀಕ್ಷಾ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಂದೆ-ತಾಯಿ ಹಗಲಿರುಳು ಶ್ರಮ ವಹಿಸಿ ದುಡಿಯುತ್ತಾರೆ. ಅವರ ಶ್ರಮ ವ್ಯರ್ಥವಾಗಲು ಬಿಡಬೇಡಿ. ಉತ್ತಮವಾಗಿ ವ್ಯಾಸಂಗ ಮಾಡುವ ಮೂಲಕ ಉನ್ನತ ಹುದ್ದೇಗೇರಿ ಕಲಿತ ಶಾಲೆ, ಸಾಕಿದ ತಂದೆ-ತಾಯಿಗೆ ಕೀರ್ತಿಯನ್ನು ತಂದುಕೊಡುವಂತೆ ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತು, ಸಮಯಪ್ರಜ್ಞೆ ಬಹಳ ಮುಖ್ಯ. ಅವೆರಡನ್ನೂ ಮೈಗೂಡಿಸಿಕೊಂಡಾಗ ವಿದ್ಯೆ ಮೇಲೆ ಆಸಕ್ತಿ ಹೆಚ್ಚುತ್ತದೆ. ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿದಾಗ ವಿಷಯಗಳು ಮನನವಾಗುತ್ತವೆ. ಪಠ್ಯ ವಿಷಯಗಳ ಕುರಿತಂತೆ ಮಕ್ಕಳು ಗೊಂದಲ, ಒತ್ತಡಗಳಿಗೆ ಒಳಗಾಗಬಾರದು. ಅರ್ಥವಾಗದ ವಿಷಯಗಳಿಗೆ ಒತ್ತು ಕೊಟ್ಟು ಓದಿ. ಸಮಸ್ಯೆಗಳಿದ್ದರೆ ಶಿಕ್ಷಕರನ್ನು ಕೇಳಿ ಬಗೆಹರಿಸಿಕೊಳ್ಳಿ. ಗುಂಪು ಚರ್ಚೆಯಲ್ಲಿ ತೊಡಗಿದಾಗ ಪಠ್ಯ ವಿಷಯಗಳಲ್ಲಿರುವ ಗೊಂದಲ ಪರಿಹಾರವಾಗುತ್ತದೆ ಎಂದು ಸಲಹೆ ನೀಡಿದರು.ಪರೀಕ್ಷೆಗಳು ಸಮೀಪಿಸಿದಾಗ ಓದಿನಲ್ಲಿ ತೊಡಗುವ ಬದಲು ಆಯಾ ದಿನದ ಪಾಠಗಳನ್ನು ಅಂದಂದೇ ಓದಿ ಗ್ರಹಿಸಿಕೊಳ್ಳಬೇಕು. ಪರೀಕ್ಷಾ ಸಮಯದಲ್ಲಿ ಭಯ, ಆತಂಕಕ್ಕೆ ಒಳಗಾಗದೆ ನಿರ್ಭೀತಿಯಿಂದ ಪರೀಕ್ಷೆಯನ್ನು ಎದುರಿಸಬೇಕು. ಆತ್ಮವಿಶ್ವಾಸ ಬೆಳೆಸಿಕೊಂಡು ಪರೀಕ್ಷೆಯನ್ನು ಬರೆದರೆ ನಿರೀಕ್ಷಿತ ಅಂಕಗಳನ್ನು ಗಳಿಸಲು ಸಾಧ್ಯವಾಗಲಿದೆ ಎಂದು ನುಡಿದರು.
ಯೋಗ, ಧ್ಯಾನ, ವ್ಯಾಯಾಮವನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು. ಇದರಿಂದ ಸದೃಢ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ. ಉತ್ತಮ ಆಹಾರವನ್ನು ಸೇವಿಸಿ, ಬುದ್ಧಿಯನ್ನು ಚುರುಕುಗೊಳಿಸುವಂತಹ ಸೊಪ್ಪು-ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಜಂಕ್‌ಫುಡ್, ಫಾಸ್ಟ್‌ಫುಡ್‌ಗಳಿಂದ ದೂರವಿರುವುದು ಒಳ್ಳೆಯದು. ಪಠ್ಯ ವಿಷಯಗಳಿಗೆ ಸಂಬಂಧಿಸಿದಂತೆ ಮೊಬೈಲ್ ಬಳಸಿದೆ ತೊಂದರೆಯಿಲ್ಲ. ಸಾಮಾಜಿಕ ಜಾಲ ತಾಣಗಳಿಂದ ಸಂಪೂರ್ಣ ದೂರವಿರುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ಪ್ರೇರಣಾ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದ ಕೆ.ಪಿ.ಬಾಬು ಅವರನ್ನು ಶಾಲೆಯ ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಲಾಯಿತು. ಮುಖ್ಯ ಶಿಕ್ಷಕ ಸುನಿಲ್‌ಕುಮಾರ್, ಸಹ ಶಿಕ್ಷಕರಾದ ನಾಗರತ್ನಮ್ಮ, ಪುನೀತ್‌ಕುಮಾರ್, ವಿದ್ಯಾರ್ಥಿಗಳು ಭಾಗವಹಿಸಿದ್ದರು.