ಈರುಳ್ಳಿ ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹ

KannadaprabhaNewsNetwork |  
Published : Sep 23, 2025, 01:03 AM IST
ಚಿತ್ರದುರ್ಗ ಪೋಟೋ ಸುದ್ದಿ11 | Kannada Prabha

ಸಾರಾಂಶ

ಈರುಳ್ಳಿ ನಷ್ಟ ಪರಿಹಾರಕ್ಕೆ ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ರೈತ ಸಂಘದ ಕಾರ್ಯಕರ್ತರು ಈರುಳ್ಳಿ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಈರುಳ್ಳಿ ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಈರುಳ್ಳಿ ಸುರಿದು ಅಕ್ರೋಶ ಹೊರ ಹಾಕಿದರು. ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಂತಾ ಅಶೋಕ್, ಕಳೆದ ತಿಂಗಳು ಸುರಿದ ಮಳೆಯಿಂದಾಗಿ ಈರುಳ್ಳಿ ಬೆಳೆ ಕೊಳೆತು ಹೋಗಿದ್ದು ಸರ್ಕಾರ ಕೂಡಲೆ ಪರಿಹಾರ ಕೊಡಬೇಕು. ಇಲ್ಲವಾದಲ್ಲಿ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಿ ಅಧಿಕಾರಿಗಳನ್ನು ಹೊರಗೆ ಕಳಿಸುತ್ತೇವೆಂದು ಎಚ್ಚರಿಸಿದರು.

ಸಾಲ ಮಾಡಿ ಬೀಜ, ಗೊಬ್ಬರ ಖರೀಧಿಸಿ ಭೂಮಿಗೆ ಸುರಿದಿದ್ದೇವೆ. ಖರ್ಚು ಮಾಡಿರುವ ಕೂಲಿ ಕೈಗೆ ಸಿಕ್ಕಿಲ್ಲ. ಈರುಳ್ಳಿ, ಮೆಕ್ಕೆಜೋಳ, ಶೇಂಗಾ ಒಟ್ಟಾರೆ ಎಲ್ಲಾ ಬೆಳೆಗಳು ಹಾನಿಯಾಗಿವೆ. ತಡಮಾಡದೆ ರೈತರಿಗೆ ಪರಿಹಾರ ನೀಡಬೇಕು ಎಂದರು.

ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ ಮಾತನಾಡಿ, ಒಂದೆಡೆ ಅತಿವೃಷ್ಟಿ ಹಾಗೂ ಮತ್ತೊಂದೆಡೆ ದರ ಕುಸಿತದಿಂದಾಗಿ ಈರುಳ್ಳಿ ಬೆಳೆಗಾರ ಹೈರಾಣವಾಗಿದ್ದಾನೆ. ಜಿಲ್ಲಾಡಳಿತ ತಕ್ಷಣವೇ ರೈತರ ನೆರವಿಗೆ ಧಾವಿಸಿ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಆಗ್ರಹಿಸಿದರು.

ರೈತ ಸಂಘದ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಮಾತನಾಡಿ, ಜಿಲ್ಲೆಯ ಪ್ರಮುಖ ಬೆಳೆ ಈರುಳ್ಳಿ ಪ್ರತಿ ವರ್ಷದಂತೆ ಈ ಬಾರಿಯೂ ನಷ್ಟವಾಗಿದೆ. ಮಳೆ ಹೆಚ್ಚಾಗಿ ಹೊಲದಲ್ಲಿಯೇ ಕೊಳೆಯುತ್ತಿದೆ. ಕೂಲಿ ಕೂಡ ಸಿಗುತ್ತಿಲ್ಲ. ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಸಾಲ ಮನ್ನಾ ಮಾಡಿ ಪರಿಹಾರ ಕೊಡುವುದಾಗಿ ಘೋಷಿಸಿರುವ ಸಿಎಂ ಸಿದ್ದರಾಮಯ್ಯನವರಿಗೆ ಮಧ್ಯ ಕರ್ನಾಟಕದ ಬಯಲು ಸೀಮೆ ಚಿತ್ರದುರ್ಗದ ರೈತರ ಕಷ್ಟ ಏಕೆ ಅರ್ಥವಾಗುತ್ತಿಲ್ಲ? ಎಕರೆಗೆ 30 ರಿಂದ 40 ಸಾವಿರ ರು. ಖರ್ಚು ಮಾಡಿರುವ ರೈತರು ಅತಂತ್ರವಾಗಿದ್ದಾರೆ. ಕೂಡಲೆ ಪರಿಹಾರದ ಹಣ ನೀಡಬೇಕೆಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.

ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಕಳೆದ ತಿಂಗಳು 20 ದಿನಗಳ ಕಾಲ ಮಳೆ ಸುರಿದು ಮೋಡ ಕವಿದ ವಾತಾವರಣವಿದ್ದುದರಿಂದ ಈರುಳ್ಳಿ ನಾಶವಾಗಿದ್ದು, ಅಲ್ಪ ಸ್ವಲ್ಪ ಉಳಿದ ಈರುಳ್ಳಿ ಗುಣಮಟ್ಟವಿಲ್ಲವೆಂದು 1 ಕ್ವಿಂಟಾಲ್‍ಗೆ 150 ರಿಂದ 200 ರು.ಗಳಿಗೆ ಮಾರಾಟವಾಗುತ್ತಿದೆ. ಇದರಿಂದ ರೈತನ ಕಣ್ಣಲ್ಲಿ ನೀರು ಬರುವಂತಾಗಿದೆ. ರಾಜ್ಯ ಸರ್ಕಾರ ಕೂಡಲೆ ನೆರೆಯ ಆಂಧ್ರ ಸರ್ಕಾರದಂತೆ ಬೆಳೆ ಪರಿಹಾರ ಹಣವನ್ನು ತಕ್ಷಣವೇ ಬಿಡುಗಡೆಗೊಳಿಸಿ ಈರುಳ್ಳಿ ಖರೀಧಿ ಕೇಂದ್ರ ತೆರೆಯಬೇಕು. ಕಂದಾಯ ಇಲಾಖೆ ನಿರ್ಲಕ್ಷದಿಂದ ರೈತರಿಗೆ ಬೆಳೆ ಪರಿಹಾರ ಕೈಸೇರಿಲ್ಲ. ಪ್ರತಿ ಎಕರೆಗೆ ಮೂವತ್ತು ಸಾವಿರ ರು. ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.

ಈ ವೇಳೆ ರೈತ ಮುಖಂಡರಾದ ಎಂ.ಬಿ.ತಿಪ್ಪೇಸ್ವಾಮಿ, ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಟಿ.ಮುನಿಸ್ವಾಮಿ, ಕರಿ ಬಸವಯ್ಯ, ಆರ್.ಚೇತನ್ ಯಳನಾಡು, ಓ.ಟಿ.ತಿಪ್ಪೇಸ್ವಾಮಿ, ಎಂ.ಎಸ್.ಪ್ರಭು, ಎನ್.ನಾಗರಾಜ, ಎಸ್.ಕೆ.ಕುಮಾರಸ್ವಾಮಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ