ಶೃಂಗೇರಿ: ಇಲ್ಲಿನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ವಿಜಯನಗರ ಕಾಲದ ಗತವೈಭವ ನೆನಪಿಸುವಂತೆ ಪ್ರತಿ ವರ್ಷ ಸಂಪ್ರದಾಯದಂತೆ ನವರಾತ್ರಿ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಗದ್ಗುರುಗಳ ನವರಾತ್ರಿ ದರ್ಬಾರ್ ದಸರೆಗೆ ವಿಶೇಷ ಮೆರಗು ನೀಡುತ್ತಿದೆ.
ನವರಾತ್ರಿಯ ಮೊದಲ ದಿನವಾದ ಸೋಮವಾರ ಶ್ರೀ ಶಾರದಾಂಬೆಗೆ ಹಂಸವಾಹಿನಿಯಲಂಕಾರ ಮಾಡಲಾಗಿತ್ತು. ಸೃಷ್ಟಿಕರ್ತ ಬ್ರಹ್ಮನ ಶಕ್ತಿ ಪಡೆದು ಬ್ರಾಹ್ಮಿಯಾಗಿ ಬ್ರಹ್ಮನ ವಾಹನ ಹಂಸವನ್ನೇರಿ ವಿಜೃಂಬಿಸಿದ ಶಾರದೆಯ ಅಲಂಕಾರ ಭಕ್ತರ ಮನಸೂರೆಗೊಳ್ಳುವಂತಿತ್ತು.
ಹಂಸ ಶೃಂಗೇರಿ ಮಠದ ಅಧಿಕೃತ ಮುದ್ರೆ. ಹಿಂದೆ ಶೃಂಗೇರಿ ಧರ್ಮ ಸಂಸ್ಥಾನವಾಗಿದ್ದಾಗ ಹಂಸಧ್ವಜ ಹೊಂದಿತ್ತು. ಹಸಿರು ವರ್ಣದ ಧ್ವಜದಲ್ಲಿ ಹಂಸಚಿನ್ಹೆ ಇರುವ ಧ್ವಜವನ್ನು ನವರಾತ್ರಿಯ ಮೊದಲ ದಿನ ಆರೋಹಣ ಮಾಡಲಾಗುತ್ತಿತ್ತು. ಹಂಸವಾಹಿನಿಯಾಗಿ ಶಾರದೆ ಕರದಲ್ಲಿ ಕಮಂಡಲ, ಅಕ್ಷರ ಮಾಲೆ, ಪುಸ್ತಕ ಪಾಶ ಮತ್ತು ಚಿನ್ಮುದ್ರೆ ಧರಿಸಿ ಭಕ್ತರನ್ನು ಅನುಗ್ರಹಿಸಿದಳು.ನವರಾತ್ರಿಯ ಅಂಗವಾಗಿ ವೈವಿಧ್ಯಮಯ ಬಣ್ಣದ ಹೂವುಗಳಿಂದ ಸಾಲಂಕೃತಗೊಂಡ ಶಾರದೆಯ ಸನ್ನಿಧಿಯಲ್ಲಿ ವೇದಗಳ ಪಾರಾಯಣ, ಪ್ರಸ್ಥಾನತ್ರಯ ಭಾಷ್ಯ, ದುರ್ಗಾ ಸಪ್ತಶತಿ ಪಾರಾಯಣ, ಲಲಿತೋಪಾಖ್ಯಾನ, ನವಾಹರಣ ಪೂಜೆ, ಸುವಾಸಿನಿ ಪೂಜೆ ಸಹಿತ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿತು.
ನವರಾತ್ರಿಯ ಒಂಬತ್ತು ದಿನಗಳ ಕಾಲ ನಡೆಯಲಿರುವ ರಾಜಬೀದಿ ಉತ್ಸವ ಸೋಮವಾರದಿಂದ ಆರಂಭಗೊಂಡಿತು. ಶ್ರೀ ಶಾರದೆಯ ಉತ್ಸವ ಮೂರ್ತಿಯನ್ನು ಸಾಲಂಕೃತವಾದ ರಥದಲ್ಲಿ ಕುಳ್ಳಿರಿಸಿ ರಾಜಬೀದಿಯಲ್ಲಿ ಮೆರವಣಿಗೆ ಮೂಲಕ ಉತ್ಸವ ಸಾಗಿತು.
ಶ್ರೀಮಠದ ಆವರಣದಲ್ಲಿರುವ ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ನವರಾತ್ರಿಯ 9 ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಮಹೋತ್ಸವದಲ್ಲಿ ಸೋಮವಾರದ ಮೊದಲ ದಿನದ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿಧುಷಿ ಶ್ರೀಮತಿ ಶಿವಪ್ರಿಯ ರಾಮಸ್ವಾಮಿ ಮತ್ತು ತಂಡದವರಿಂದ ಹಾಡುಗಾರಿಕೆ ನಡೆಯಿತು.