ಕನ್ನಡಪ್ರಭ ವಾರ್ತೆ ವಿಜಯಪುರ
ಕಳ್ಳರ ಹಾವಳಿಯಿಂದ ಗಂಭೀರ ಗಾಯಗೊಂಡಿದ್ದ ವಿಜಯಪುರ ನಗರದ ಜೈನಾಪೂರ ಲೇಔಟ ನಿವಾಸಿ ಸಂತೋಷ ಕನ್ನಾಳ (ದಿಂಡವಾರ) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ನೋವಿನ ಸಂಗತಿ. ಕೂಡಲೇ ಸರ್ಕಾರ ಮೃತ ಸಂತೋಷನ ಕುಟಂಬಕ್ಕೆ ಪರಿಹಾರ ಒದಗಿಸಬೇಕು ಎಂದು ನ್ಯಾಯವಾದಿ ಶ್ರೀಶೈಲ ಮುಳಜಿ ಒತ್ತಾಯಿಸಿದರು.
ನ್ಯಾಯವಾದಿ ದಾನೇಶ ಅವಟಿ ಮಾತನಾಡಿ, ದರೋಡೆ ಪ್ರಕರಣದಲ್ಲಿ ಅನ್ಯಾಯವಾಗಿ ಮೃತ ಪಟ್ಟ ಸಂತೋಷ, ಆತನ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಕೂಡಲೇ ಸರ್ಕಾರದಿಂದ ₹೨೫ ಲಕ್ಷ ಪರಿಹಾರ ಹಾಗೂ ಮೃತನ ಪತ್ನಿಗೆ ಸರ್ಕಾರಿ ನೌಕರಿ, ಮಗುವಿನ ಶೈಕ್ಷಣಿಕ ಖರ್ಚು ವೆಚ್ಚ ನೀಡಿ ಅನುಕೂಲ ಮಾಡಿಕೊಡಬೇಕು. ಇನ್ನುವರೆಗೂ ಮೃತರ ಕುಟುಂಬಕ್ಕೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಭೇಟಿ ನೀಡಿ ಸಾಂತ್ವಾನ ಹೇಳದೇ ಇರುವುದು ದುರ್ದೈವದ ಸಂಗತಿ. ಇಂತಹ ಗಂಭೀರ ಪ್ರಕರಣದಲ್ಲಿ ಜಾಣ ಕುರುಡುತನ ಪ್ರದರ್ಶಿಸುವುದು ನೋವಿನ ಸಂಗತಿಯಾಗಿದೆ ಎಂದು ವಿಷಾಧಿಸಿದರು.ವಿಜಯಪುರ ಜಿಲ್ಲೆಯಲ್ಲಿ ಸಂಭವಿಸಿದ ಈ ಘಟನೆಯಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಜನತೆ ಕಳ್ಳಕಾಕರ ಹಾವಳಿಯಿಂದ ಭಯಭೀತರಾಗಿದ್ದಾರೆ. ಕೂಡಲೇ ಜಿಲ್ಲಾಡಳಿತ ತಪ್ಪಿತಸ್ಥ ಕಳ್ಳರಿಗೆ ಉಗ್ರ ಶಿಕ್ಷೆ ನೀಡಿ, ಜಿಲ್ಲೆಯಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ನ್ಯಾಯವಾದಿಗಳಾದ ಸಿ.ಎಂ.ಅಂಗಡಿ, ಸಿದ್ದನಗೌಡ ಪೊಲೀಸ್‌ಪಾಟೀಲ, ಪ್ರವೀಣ ಹುಡೇದಾಳ, ಶಿವಾನಂದ ಬಗಲಿ, ಜಿಲ್ಲಾ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಸಂಗಮೇಶ ಸಗರ, ತನು ಪೌಂಡೇಶನ್ ಅಧ್ಯಕ್ಷ ವಿಜಯಕುಮಾರ ಕಾಳಶೆಟ್ಟಿ, ಯುವ ಮುಖಂಡ ಷಣ್ಮುಖ ರಾಮತೀರ್ಥ, ಸಿದ್ಧಾರೂಢ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.