ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಆಗ್ರಹಿಸಿ ಪಾಲಕರು ಉಪತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ತೇರದಾಳ ಪಟ್ಟಣದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹೊಸ ಕಟ್ಟಡ ಕಾಮಗಾರಿ ಪ್ರಾರಂಭವಾಗಿ ಮೂರು ವರ್ಷಗಳಾಗುತ್ತಾ ಬಂದರೂ ಇನ್ನೂವರೆಗೂ ಕಾಮಗಾರಿ ಮುಗಿದಿಲ್ಲ. ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಬೇಗನೆ ಕಾಮಗಾರಿ ಮುಗಿಸಿ ನಮ್ಮ ಮಕ್ಕಳನ್ನು ಬಾಡಿಗೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ವರ್ಗಾವಣೆ ಮಾಡಬೇಕೆಂದು ಮುಖಂಡರಾದ ಪಿ.ಎಸ್. ಮಾಸ್ತಿ, ನೇಮಣ್ಣ ಸಾವಂತನವರ ಹಾಗೂ ಪಾಲಕರು ಒತ್ತಾಯಿಸಿದ್ದಾರೆ.ತೇರದಾಳ ನಾಡಕಚೇರಿ ಉಪತಹಶೀಲ್ದಾರ್ ಶ್ರೀಕಾಂತ ಮಾಯನ್ನವರಗೆ ಮನವಿ ಸಲ್ಲಿಸಿದ ಅವರು, ಈಗಿರುವ ಬಾಡಿಗೆ ಕಟ್ಟಡದಲ್ಲಿ ಮಕ್ಕಳಿಗೆ ಸುರಕ್ಷತೆ ಇಲ್ಲ. ಸುತ್ತಮುತ್ತ ಜಮೀನುಗಳಿರುವುದರಿಂದ ಕ್ರಿಮಿಕೀಟಗಳು ಸಲೀಸಾಗಿ ಒಳಗೆ ಬರುತ್ತವೆ. ಈಗಾಗಲೇ ಹಲವು ಬಾರಿ ಹಾವು, ಚೇಳುಗಳು ಬಂದಿರುವ ಘಟನೆಗಳು ನಡೆದಿವೆ. ಇದರಿಂದ ಪಾಲಕರಿಗೆ ಆತಂಕವಾಗಿದೆ. ಶಾಲೆಗೆ ಆವರಣ ಗೋಡೆಯೂ ಇಲ್ಲ, ತಂತಿಬೇಲಿ ಹಾಕಲಾಗಿದೆ. ಮಕ್ಕಳ ಸ್ನಾನ ಹಾಗೂ ಶೌಚಗೃಹಗಳು ಶಾಲೆಯ ಹಿಂದೆ ಇರುವುದರಿಂದ ಮಕ್ಕಳು ರಾತ್ರಿ ಶೌಚಕ್ಕೆ ಹೋಗಲು ಭಯಪಡುವ ಪರಿಸ್ಥಿತಿ ಇದೆ.
ಹೋದ ವರ್ಷ ಪಿ.ಯು ಕಾಲೇಜು ಮಂಜೂರಾಗಿದ್ದು, ಆ ಮಕ್ಕಳು ಸಹ ಬಾಡಿಗೆ ಕಟ್ಟಡದಲ್ಲಿ ಶಿಕ್ಷಣ ಕಲಿಯುತ್ತಿದ್ದಾರೆ. ಹೊಸ ಕಟ್ಟಡ ಪೂರ್ಣವಾದಲ್ಲಿ ಈ ವಿದ್ಯಾರ್ಥಿಗಳಿಗೂ ಸಹ ಅನುಕೂಲ ಆಗಲಿದೆ. ಸಂಬಂಧಿಸಿದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪಾಲಕರ ಹಾಗೂ ಮಕ್ಕಳ ಆತಂಕ ದೂರ ಮಾಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಸವರಾಜ ಲಕ್ಕಪ್ಪಗೋಳ, ಪ್ರಕಾಶ ಕೆ, ರಾಜು ಸುಣಗಾರ, ಅಪ್ಪು ಶಿಲೇದಾರ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.