ಗದಗ: ಗದಗ-ಬೆಟಗೇರಿ ನಗರದ ಕೊಳಗೇರಿ ಪ್ರದೇಶಗಳಲ್ಲಿ 863 ಮನೆ ನಿರ್ಮಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಚಾಲನೆ ನೀಡಲಾಗಿದೆ ಆದರೆ ಮನೆ ನಿರ್ಮಾಣ ಕಳಪೆ ಕಾಮಗಾರಿ ನಡೆಸುವ ಮೂಲಕ ಅಧಿಕಾರಿಗಳು ಗುತ್ತಿಗೆದಾರರು ಸ್ಲಂ ನಿವಾಸಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸ್ಲಂ ಜನಾಂದೋಲನ ಸಮಿತಿ ಪದಾಧಿಕಾರಿಗಳು ಗುರುವಾರ ಸ್ಲಂ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಪದಾಧಿಕಾರಿಗಳು ಮಾತನಾಡಿ, ಈ ವಿಷಯವಾಗಿ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಸುಳ್ಳು ಭರವಸೆ ನೀಡಿ ಸ್ಲಂ ಜನರಿಗೆ ತಪ್ಪು ಮಾಹಿತಿ ನೀಡಿ, ಗುತ್ತಿಗೆದಾರರೊಂದಿಗೆ ಕೈ ಜೋಡಿಸಿದ್ದಾರೆ. ಭ್ರಷ್ಟಾಚಾರ ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ.ಆರ್, ಮಾನ್ವಿ ಮಾತನಾಡಿ, 7-10-2024 ರಂದು ಗದಗ ಜಿಲ್ಲಾ ಸ್ಲಂ ಸಮಿತಿಯ ನೇತೃತ್ವದಲ್ಲಿ ಗದಗ-ಬೆಟಗೇರಿ ನಗರದ ವಿವಿಧ ಸ್ಲಂ ಪ್ರದೇಶದ ನೂರಾರು ಸ್ಲಂ ನಿವಾಸಿಗಳು ಸ್ಲಂ ಬೋರ್ಡ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವ ಮೂಲಕ ನಗರದ ಸ್ಲಂ ಪ್ರದೇಶದ ಕುಟುಂಬಗಳ ವಸತಿ, ಮೂಲಭೂತ ಸೌಲಭ್ಯ, ಹಕ್ಕುಪತ್ರ, ಕ್ರಯಪತ್ರ, ಅಘೋಷಿತ ಗುಡಿಸಲು ಪ್ರದೇಶಗಳ ಘೋಷಣೆ ಮತ್ತು ಇನ್ನೂ ಹಲವಾರು ಹಕ್ಕೋತ್ತಾಯ ಮಾಡಲಾಗಿತ್ತು. ಆದರೆ ಅಧಿಕಾರಿಗಳು ಪ್ರಾಮಾಣಿಕವಾಗಿ ಸ್ಪಂದಿಸದೇ ನಮ್ಮ ಬೇಡಿಕೆ ನಿರ್ಲಕ್ಷ್ಯ ಮಾಡಿದ್ದಾರೆ. ಗದಗ-ಬೆಟಗೇರಿ ನಗರದ ಅನೇಕ ಅಘೋಷಿತ ಗುಡಿಸಲು ಪ್ರದೇಶಗಳನ್ನು ಸ್ಲಂ ಕಾಯ್ದೆ 1973ರ ಪ್ರಕಾರ ಘೋಷಣೆ ಮಾಡಿ ಸ್ಥಳೀಯ ನಿವಾಸಿಗಳಿಗೆ ನಾಗರಿಕ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಅರ್ಜಿಗಳು ಸಲ್ಲಿಸಿ 3 ವರ್ಷಗಳಾದರೂ ಸಹ ಅಧಿಕಾರಿಗಳು ಸ್ಲಂ ಜನರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸ್ಲಂ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ದುರ್ಗಪ್ಪ ಮಣ್ಣವಡ್ಡರ, ಮೆಹರುನಿಸಾ ಡಂಬಳ, ಮೈಮುನ ಬೈರಕದಾರ, ಆಯೀಷಾ ಉಮಚಗಿ, ಪ್ರೇಮಾ ಮಣವಡ್ಡರ, ಸುಶೀಲಮ್ಮ ಗೊಂದಾರ, ಮೆಹಬೂಬಸಾಬ ಬಳ್ಳಾರಿ, ಸಾಕ್ರುಬಾಯಿ ಗೋಸಾವಿ, ಖಾಜೇಸಾಬ್ ಇಸ್ಮಾಯಿಲನವರ, ಮಕ್ತುಮಸಾಬ್ ಮುಲ್ಲಾನವರ, ಈರಮ್ಮ ಬೇವಿನಮರದ, ನಾಗರಾಜ ಮಣವಡ್ಡರ, ದಾದು ಗೋಸಾವಿ, ಮಲೇಶಪ್ಪ ಕಲಾಲ, ಚಂದ್ರಪ್ಪ ಲಕ್ಕುಂಡಿ, ಶಂಕ್ರಪ್ಪ ಹದ್ಲಿ ಹಾಗೂ ಅವಳಿ ನಗರದ ವಿವಿಧ ಸ್ಲಂ ಪ್ರದೇಶದ ನೂರಾರು ಸ್ಲಂ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.