ಸಿದ್ದರಾಮಯ್ಯ ಅಸಮರ್ಥ ಮುಖ್ಯಮಂತ್ರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪ

KannadaprabhaNewsNetwork |  
Published : Nov 22, 2024, 01:16 AM ISTUpdated : Nov 22, 2024, 10:01 AM IST
Siddaramaiah BY Vijayendra

ಸಾರಾಂಶ

ಕಾಂಗ್ರೆಸ್‌ ಸರ್ಕಾರವು ರಾಜ್ಯದಲ್ಲಿ 25 ಲಕ್ಷ ಕಾರ್ಡ್ ರದ್ದುಪಡಿಸುವ ಉದ್ದೇಶ ಹೊಂದಿದ್ದು ಇದರಿಂದ ಗ್ಯಾರಂಟಿ ಯೋಜನೆ ಮೇಲಿನ ಹೊರೆ ಕಡಿಮೆ ಮಾಡಿ, ಹಣ ಉಳಿಸುವ ಸಂಚು ಮಾಡುತ್ತಿದೆ.

ಹುಬ್ಬಳ್ಳಿ:  ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೇ ಪರದಾಡುತ್ತಿರುವ ಸಿದ್ದರಾಮಯ್ಯ ಓರ್ವ ಅಸಮರ್ಥ ಮುಖ್ಯಮಂತ್ರಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ದಿನದಿಂದ ರಾಜ್ಯದ ಜನರಿಗೆ ನೆಮ್ಮದಿಯೇ ಇಲ್ಲದಾಗಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕ್ಷೇತ್ರಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅನುದಾನ ಸಿಗದ ಪರಿಸ್ಥಿತಿ ಉದ್ಭವ ಆಗಿದೆ ಎಂದು ಆಡಳಿತ ಪಕ್ಷದ ಶಾಸಕರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೆ ನೀಡುತ್ತಿದ್ದಾರೆ. 15 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರ ಈಗಿನ ಪರಿಸ್ಥಿತಿ ನೋಡಿದರೆ ಅಯ್ಯೋ ಪಾಪ ಎನಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ಹಣ ಉಳಿಸುವ ಸಂಚು:

ಕಾಂಗ್ರೆಸ್‌ ಸರ್ಕಾರವು ರಾಜ್ಯದಲ್ಲಿ ಲಕ್ಷಾಂತರ ಬಿಪಿಎಲ್ ಕಾರ್ಡ್‌ ರದ್ದುಪಡಿಸುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಹುನ್ನಾರವನ್ನು ಸರ್ಕಾರ ನಡೆಸಿದೆ. ಸುಮಾರು 25 ಲಕ್ಷ ಕಾರ್ಡ್ ರದ್ದುಪಡಿಸುವ ಉದ್ದೇಶ ಹೊಂದಿದ್ದು ಇದರಿಂದ ಗ್ಯಾರಂಟಿ ಯೋಜನೆ ಮೇಲಿನ ಹೊರೆ ಕಡಿಮೆ ಮಾಡಿ, ಹಣ ಉಳಿಸುವ ಸಂಚು ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ವಿಜಯೇಂದ್ರ ಕಿಡಿಕಾರಿದರು.

ಬಡವರನ್ನು ಬೀದಿಗೆ ತರ್‍ತಿದೆ:

ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯ ಅಡಿ ಶೇ. 92.5ರಷ್ಟು ಸಹಾಯವನ್ನು ಕೇಂದ್ರ ಸರ್ಕಾರವೇ ಮಾಡುತ್ತಿದೆ. ಉಳಿದ ಶೇ. 7.5ರಷ್ಟನ್ನು ಮಾತ್ರ ರಾಜ್ಯ ಸರ್ಕಾರ ನಿರ್ವಹಣೆ ಮಾಡುತ್ತದೆ. ಹೀಗಿದ್ದರೂ ಕಾಂಗ್ರೆಸ್‌ ಸರ್ಕಾರ ಬಡವರ ಬಿಪಿಎಲ್ ಕಾರ್ಡ್‌ ರದ್ದು ಮಾಡಿ ಅವರನ್ನು ಬೀದಿಗೆ ತಂದು ನಿಲ್ಲಿಸುವ ಕಾರ್ಯ ಮಾಡುತ್ತಿದೆ ಎಂದರು.

ಮಾನದಂಡ ತಿಳಿಸಲಿ:

ರಾಜ್ಯ ಸರ್ಕಾರವು ಯಾವ ಮಾನದಂಡದ ಆಧಾರದ ಮೇಲೆ ಬಿಪಿಎಲ್ ಕಾರ್ಡ್‌ ರದ್ದು ಮಾಡುತ್ತಿದೆ ಎಂಬುದನ್ನು ತಿಳಿಸಲಿ. ಬೀದಿಬದಿ ವ್ಯಾಪಾರ ಮಾಡುತ್ತಿರುವವರೂ ಇಂದು ಪ್ಯಾನ್ ಕಾರ್ಡ್ ಹೊಂದಿದ್ದಾರೆ. ಕೆಲವೇ ಕೆಲವು ಅಧಿಕಾರಿಗಳು ಕಂಪ್ಯೂಟರ್ ಮುಂದೆ ಕುಳಿತುಕೊಂಡು ಕಾರ್ಡ್ ರದ್ದತಿಗೆ ಮುಂದಾಗಬಾರದು, ಅಧಿಕಾರಿಗಳು ಪ್ರಾಮಾಣಿಕವಾಗಿ ಸರ್ವೇ ಮಾಡಿ ನಂತರ ಕ್ರಮ ತೆಗೆದುಕೊಳ್ಳಬೇಕು. ಬಿಜೆಪಿ ಅವಧಿಯಲ್ಲೂ ಅನೇಕರ ಬಿಪಿಎಲ್ ಕಾರ್ಡ್ ರದ್ದಾಗಿವೆ. ಆದರೆ, ಯಾರೂ ಆಕ್ಷೇಪಣೆ ಮಾಡದ ರೀತಿಯಲ್ಲಿ ಅಳೆದು, ತೂಗಿ ಕ್ರಮಕೈಗೊಳ್ಳಲಾಗಿತ್ತು. ಹೀಗಾಗಿಯೇ ಆಕ್ಷೇಪಣೆಗಳು ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಗೂಬೆ ಕೂರಿಸುವ ಕಾರ್ಯ ಬಿಡಿ:

ಕರ್ನಾಟಕಕ್ಕೆ ಕೇಂದ್ರದಿಂದ ಅನುದಾನ ಕಡಿತ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಪದೇ ಪದೇ ಆರೋಪ ಮಾಡುತ್ತಿರುವುದು ಸರಿಯಲ್ಲ. ಕರ್ನಾಟಕ ಮಾತ್ರವಲ್ಲ, ದೇಶದ ಎಲ್ಲ ರಾಜ್ಯಗಳಿಗೂ ಅನುದಾನ ಕಡಿತ ಆಗಿದೆ. ಇದು ಯಾಕೆ ಎಂಬುದು ಮುಖ್ಯಮಂತ್ರಿಗಳಿಗೂ ಗೊತ್ತಿದೆ. ರಾಜ್ಯದಲ್ಲಿ ಎದುರಾದ ಹಣಕಾಸಿನ ಮುಗ್ಗಟ್ಟು ಒಪ್ಪಿಕೊಳ್ಳದೇ ತಮ್ಮ ತಪ್ಪನ್ನು ಮರೆಮಾಚಲು ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ. ವಕ್ಫ್ ವಿಚಾರದಲ್ಲಿ ರೈತರಿಗೆ ನೋಟಿಸ್ ಕೊಟ್ಟಿರುವುದು ತಮಗೆ ಗೊತ್ತೇ ಇಲ್ಲ ಎನ್ನುತ್ತಾರೆ. ಇನ್ನೊಂದೆಡೆ ಅಧಿಕಾರಿಗಳು, ಸಚಿವರು ಸಿಎಂ ಸೂಚನೆ ಮೇರೆಗೆ ಮಾಡಿದ್ದೇವೆ ಎನ್ನುತ್ತಾರೆ. ಇಂತಹ ದ್ವಂದ್ವ ಏಕೆ ಎಂದು ಪ್ರಶ್ನಿಸಿದರು.

ಯಾವುದೇ ಭಿನ್ನಾಭಿಪ್ರಾಯವಿಲ್ಲಿ:

ರಾಜ್ಯದಲ್ಲಿ ಕೈಗೊಂಡಿರುವ ವಕ್ಫ್ ಹೋರಾಟ ವಿಚಾರವಾಗಿ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಇದನ್ನು ಯಾರು ಮೊದಲು ಹೋರಾಟ ಆರಂಭಿಸಿದರು ಎಂಬುದು ಮುಖ್ಯವಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ವಕ್ಫ್ ತಿದ್ದುಪಡಿ ತರಲು ಹೊರಟಿದ್ದಾರೆ. ಅದಕ್ಕೆ ಪೂರಕ ಹೋರಾಟ ನಡೆಸಲಾಗುತ್ತಿದೆ. ಪಕ್ಷಕ್ಕೆ ರೈತರ ಹಿತ ಮುಖ್ಯವಾಗಿದೆ. ಅದಕ್ಕಾಗಿ ಮೂರು ತಂಡವಾಗಿ ರಾಜ್ಯ ಪ್ರವಾಸ ಮಾಡಲಿದ್ದೇವೆ. ರೈತರ ಪರ ಹೋರಾಟ ಮಾಡುವುದು ಪಕ್ಷದ ಅಧ್ಯಕ್ಷನಾಗಿ ನನ್ನ ಕರ್ತವ್ಯ. ಬಸನಗೌಡ ಪಾಟೀಲ ಯತ್ನಾಳ ಅವರು ಈ ಹೋರಾಟದಲ್ಲಿ ಇರುತ್ತಾರೆ. ಇದರಲ್ಲಿ ಕ್ರೆಡಿಟ್ ತೆಗೆದುಕೊಳ್ಳುವುದು ನನಗೆ ಮುಖ್ಯವಲ್ಲ ಎಂದರು.

ಸಿಎಂ ಕುರ್ಚಿ ಹರಾಜಿಗೆ:

ಕಾಂಗ್ರೆಸ್ ಶಾಸಕರಿಗೆ ₹ 50 ಕೋಟಿ ನೀಡುವ ಅಗತ್ಯ ನಮಗಿಲ್ಲ. 66 ಶಾಸಕರು ಇರುವ ಬಿಜೆಪಿಗೆ ಸರ್ಕಾರ ಮಾಡುವ ಅಗತ್ಯವೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ವತಃ ಭ್ರಷ್ಟಾಚಾರದಲ್ಲಿ ಮುಳುಗಿ ನಲಗುತ್ತಿದ್ದಾರೆ. ಅದರಿಂದ ಪಾರಾಗಲು ಈ ರೀತಿಯ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ತಮ್ಮ ಕುರ್ಚಿಯನ್ನೇ ಹರಾಜಿಗೆ ಇಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ