ಸವಣೂರು ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚನೆಗೆ ಆಗ್ರಹ

KannadaprabhaNewsNetwork |  
Published : Sep 29, 2026, 04:00 AM IST
ಸವಣೂರ ತಹಸೀಲ್ದಾರ್‌ ಕಾರ್ಯಾಲಯದ ಎದುರಿಗೆ ಬೃಹತ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಸಮೀರ ಪ್ರಕಾಶ ಕೋಡೆ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ಪ್ರತ್ಯೇಕ ಮನವಿಯನ್ನು ಸಲ್ಲಿಸುತ್ತಿರುವುದು. | Kannada Prabha

ಸಾರಾಂಶ

ಸವಣೂರು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ ರಚಿಸಬೇಕೆಂದು ಒತ್ತಾಯಿಸಿ ಸೋಮವಾರ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ಹಾಗೂ ಪ್ರತಿಭಟನೆ ನಡೆಯಿತು.

ಸವಣೂರು: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ ರಚಿಸಬೇಕೆಂದು ಒತ್ತಾಯಿಸಿ ಸೋಮವಾರ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ಹಾಗೂ ಪ್ರತಿಭಟನೆ ನಡೆಯಿತು.ಪಟ್ಟಣದ ದೊಡ್ಡ ಹುಣಸೆ ಕಲ್ಮಠದಿಂದ ಆರಂಭವಾದ ಮೆರವಣಿಗೆಯು ವಿ.ಕೃ. ಗೋಕಾಕ್ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಸಿಂಪಿಗಲ್ಲಿ ರಸ್ತೆ, ಮುಖ್ಯ ಮಾರುಕಟ್ಟೆ ಹಾಗೂ ಅಂಚೆ ಕಚೇರಿ ಮಾರ್ಗವಾಗಿ ಸಾಗಿ ತಹಸೀಲ್ದಾರ್ ಕಚೇರಿಯನ್ನು ತಲುಪಿತು. ಅಲ್ಲಿ ಕೆಲಕಾಲ ಪ್ರತಿಭಟನೆ ಕೈಗೊಂಡ ಪ್ರತಿಭಟನಾಕಾರರು, ಉಪವಿಭಾಗಾಧಿಕಾರಿ ಸಮೀರ ಪ್ರಕಾಶ ಕೋಡೆ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಪತ್ರ ಸಲ್ಲಿಸಿದರು.

ನವಾಬರ ಸಂಸ್ಥಾನ ೧೬೮೦ರಿಂದ ೧೯೪೮ರ ವರೆಗೆ ಅಸ್ತಿತ್ವದಲ್ಲಿ ಇರುವುದು ಜಗಕ್ಕೆಲ್ಲಾ ತಿಳಿದ ವಿಷಯ. ತದ ನಂತರ ಬ್ರಿಟಿಷರ ಆಡಳಿತ ಕಾಲದಲ್ಲಿ ಸವಣೂರ ರಾಜ್ಯವಾಗಿತ್ತು ಎಂಬುವ ಇತಿಹಾಸವಿದೆ. ಪ್ರತಿಭಟನಾ ಮೆರವಣಿಗೆ ಸಾನ್ನಿಧ್ಯ ವಹಿಸಿದ್ದ ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಈ ಬೇಡಿಕೆಯನ್ನು ಹಲವು ವರ್ಷಗಳ ಹಿಂದೆಯೇ ಈಡೇರಿಸಬೇಕಿತ್ತು. ಆದರೆ ರಾಜಕೀಯ ಮುಖಂಡರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸ್ಥಳೀಯ ಜನತೆಗೆ ಮಲತಾಯಿ ಧೋರಣೆ ತೋರಿದಂತಾಗಿದೆ. ಇದು ನಮ್ಮ ಹಕ್ಕು. ಸವಣೂರು ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗುವವರೆಗೂ ಈ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ " ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ನಾವು ಯಾವುದೇ ರೀತಿಯ ಪ್ರತ್ಯೇಕತೆಯ ಘೋಷಣೆ ಕೂಗುತ್ತಿಲ್ಲ. ನಮಗೆ ನ್ಯಾಯಸಮ್ಮತವಾಗಿ ದೊರೆಯಬೇಕಾದ ಸವಣೂರ ವಿಧಾನಸಭಾ ಕ್ಷೇತ್ರವನ್ನು ಪ್ರತ್ಯೇಕಗೊಳಿಸಿ, ಈ ಭಾಗವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವುದೇ ನಮ್ಮ ಗುರಿ. ಆದ್ದರಿಂದ ಉಪವಿಭಾಗಾಧಿಕಾರಿಗಳು ನಾವು ಸಲ್ಲಿಸಿರುವ ಮನವಿಯನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.ಹೋರಾಟ ಸಮಿತಿಯ ಅಧ್ಯಕ್ಷ ಎಸ್.ವಿ. ಪಾಟೀಲ ಮಾತನಾಡಿ, ಸವಣೂರು ಪಟ್ಟಣದಲ್ಲಿ ಸುಮಾರು ೨೭ ವಾರ್ಡ್‌ ಹಾಗೂ ತಾಲೂಕಿನಲ್ಲಿ ಒಟ್ಟು ೬೫ ಗ್ರಾಮಗಳು ಹಾಗೂ ೨೧ ಗ್ರಾಪಂಗಳನ್ನು ಹೊಂದುವ ಮೂಲಕ ಅಂದಾಜು ೧.೮೦ ಲಕ್ಷ ಜನ ಸಂಖ್ಯೆಯನ್ನು ಹೊಂದಿದೆ. ಕಂದಾಯ ಉಪ ವಿಭಾಗವಾಗಿದ್ದು, ಜನಸಂಖ್ಯೆ ಹಾಗೂ ಭೌಗೋಳಿಕವಾಗಿ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಎಂದು ಪರಿಗಣಿಸಲು ಸರ್ವ ಮಾನದಂಡ ಹಾಗೂ ಅರ್ಹತೆಯನ್ನು ಹೊಂದಿದೆ. ಆದ್ದರಿಂದ, ತಾಲೂಕಿನ ಸರ್ವಾಂಗಿಣ ಅಭಿವೃದ್ಧಿಗಾಗಿ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಎಂದು ಘೋಷಣೆಯನ್ನು ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿ ಪ್ರಸ್ತುತ ತಾಲೂಕಿನ ಹಳ್ಳಿಗಳು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಹೋಗಿರುವುದರಿಂದ ಸ್ಥಳೀಯ ಜನರಿಗೆ ದೊಡ್ಡ ಅನ್ಯಾಯವಾಗುತ್ತಿದೆ. ಸವಣೂರ ತಾಲೂಕು ಐತಿಹಾಸಿಕ ಹಿನ್ನೆಲೆಯುಳ್ಳ ಕ್ಷೇತ್ರವಾಗಿದ್ದು, ಬಹುಜನರ ಬೇಡಿಕೆಯಾದ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚನೆಗೆ ತಾಲೂಕಿನ ಎಲ್ಲರ ಸಹಕಾರ ಅಗತ್ಯ ಎಂದರು.ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿ, ಹತ್ತಿಮತ್ತೂರಿನ ನಿಜಗುಣ ಶಿವಯೋಗಿ ಸ್ವಾಮಿ, ದೊಡ್ಡಹುಣೆಸೆಕಲ್ಮಠದ ಚನ್ನಬಸವ ಮಹಾಸ್ವಾಮೀಜಿ

ಪ್ರತಿಭಟನಾ ಮೆರವಣಿಗೆ ಸಾನ್ನಿಧ್ಯ ನೇತೃತ್ವ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸುಭಾಸ ಮಜ್ಜಗಿ, ಧರಿಯಪ್ಪಗೌಡ ಪಾಟೀಲ, ಲಕ್ಷ್ಮಣ್ಣ ಕನವಳ್ಳಿ, ರಾಜೇಶ್ವರ ಬುಶೆಟ್ಟಿ, ಶೋಭಾ ನಿಸ್ಸಿಮಗೌಡ್ರ, ಹುಲಗಪ್ಪ ಅಲ್ಲಿಪೂರ, ಬಿ.ಎಂ. ಪಾಟೀಲ, ರಾಮಣ್ಣ ಅಗಸರ, ಚನ್ನಪ್ಪ ಮರಡೂರ, ಚನ್ನಬಸಪ್ಪ ಅರಗೋಳ, ಆನಂದ ವಡಕ್ಕಮ್ಮನವರ, ಶಿವಾನಂದ ಹುಲ್ಲಮ್ಮನವರ, ಪರಶುರಾಮ ಇಳಗೇರ, ಶಿವಬಸಪ್ಪ ಮತ್ತೂರ, ಮಹಾದೇವ ಹರಿಜನ, ಕಾಂತೇಶ ವಾಲ್ಮೀಕಿ, ಕಾಂಗ್ರೇಸ್, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ಡಿಎಸ್‌ಎಸ್ ಪದಾಧಿಕಾರಿಗಳು, ವಕೀಲರ ಸಂಘದ ಪದಾಧಿಕಾರಿಗಳು, ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಪಟ್ಟಣ ಹಾಗೂ ತಾಲೂಕಿನ ಪ್ರಮುಖರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉದ್ಯಾನ, ರಸ್ತಗೆ ರಕ್ಷಣಾ ಇಲಾಖೆಯ ಜಾಗ ಕೊಡಿ: ಸಿಎಂ
ಆದಾಯದ ಕಡೆ ಗಮನ ಕೊಟ್ಟ ಜಿಬಿಎ: ಜನ ಗರಂ