ಆದಾಯದ ಕಡೆ ಗಮನ ಕೊಟ್ಟ ಜಿಬಿಎ: ಜನ ಗರಂ

KannadaprabhaNewsNetwork |  
Published : Sep 29, 2026, 04:00 AM IST
ಯುಪಿಐ  | Kannada Prabha

ಸಾರಾಂಶ

ನಗರದ ಒಳಭಾಗದ ರಸ್ತೆ, ಮನೆಗಳ ಮುಂದೆ ನಿಲ್ಲಿಸುವ ಕಾರು, ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ಶುಲ್ಕ ವಿಧಿಸುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಉದ್ದೇಶಿತ ಪಾರ್ಕಿಂಗ್ ನೀತಿಗೆ 800ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಒಳಭಾಗದ ರಸ್ತೆ, ಮನೆಗಳ ಮುಂದೆ ನಿಲ್ಲಿಸುವ ಕಾರು, ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ಶುಲ್ಕ ವಿಧಿಸುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಉದ್ದೇಶಿತ ಪಾರ್ಕಿಂಗ್ ನೀತಿಗೆ 800ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.

ಮುಖ್ಯರಸ್ತೆಗಳಲ್ಲಿ ದ್ವಿಚಕ್ರ ವಾಹನಗಳಿಗೆ ಗಂಟೆಗೆ ₹20 ಪಾರ್ಕಿಂಗ್‌ ಶುಲ್ಕ ವಿಧಿಸುವುದು, ಒಂದು ಕಾರು ಹೊಂದಿರುವವರಿಗೆ ಶುಲ್ಕದಿಂದ ವಿನಾಯಿತಿ ನೀಡುವುದು, ಪಾರ್ಕಿಂಗ್‌ ಶುಲ್ಕದಿಂದ ಸಂಗ್ರಹವಾಗುವ ಹಣವನ್ನು ಪಾರ್ಕಿಂಗ್ ಮತ್ತು ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಉದ್ದೇಶಗಳಿಗೆ ಬಳಸಬೇಕು ಎಂಬುದು ಸೇರಿದಂತೆ ಹಲವಾರು ಸಲಹೆ, ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಇವುಗಳನ್ನು ಕಾನೂನು ಸಂಶೋಧನಾ ಸಂಸ್ಥೆಗೆ ಪರಿಶೀಲನೆಗೆ ಕಳುಹಿಸಲಾಗಿದೆ.

ಪಾರ್ಕಿಂಗ್‌ ನೀತಿಯನ್ನು ಮತ್ತೊಮ್ಮೆ ಪರಿಶೀಲನಗೆ ಒಳಪಡಿಸಲಾಗುತ್ತದೆ. ಈ ಕುರಿತು ಸಲ್ಲಿಕೆಯಾಗಿರುವ ಆಕ್ಷೇಪಣೆಗಳು ಮತ್ತು ಸಲಹೆ ಸೂಚನೆಗಳನ್ನು ಅಧ್ಯಯನ ನಡೆಸಲು ಕೋರಲಾಗಿದೆ. ಇದೇ ವೇಳೆ ನೀತಿಗೆ ಸಾಕಷ್ಟು ಜನರು ಧನಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.

ಪಾರ್ಕಿಂಗ್‌ಗೆ ಶುಲ್ಕ ನಿಗದಿ ಮತ್ತು ಪಾರ್ಕಿಂಗ್ ಪರ್ಮಿಟ್ ಕುರಿತಾಗಿ ಹೆಚ್ಚು ಆಕ್ಷೇಪಣೆಗಳಿವೆ. ಟ್ರಾಫಿಕ್ ನಿರ್ವಹಣೆ, ಪಾರ್ಕಿಂಗ್ ಶಿಸ್ತು ಪಾಲನೆಯ ಮೂಲಕ ಆದಾಯ ಸಂಗ್ರಹಿಸುವುದಕ್ಕೆ ಆದ್ಯತೆ ನೀಡಬೇಕಿತ್ತು. ಅದರ ಬದಲು ಪಾಲಿಕೆಗಳಿಗೆ ಆದಾಯವನ್ನು ಹೆಚ್ಚಿಸಿಕೊಳ್ಳುವುದರ ಕಡೆ ಹಾಗೂ ಮೇಲ್ಮಧ್ಯಮ ವರ್ಗದವರನ್ನು ಕೇಂದ್ರೀಕರಿಸಿದೆ ಎಂದು ನಾಗರಿಕರು ಹಾಗೂ ವಿವಿಧ ನಾಗರಿಕ ಸಂಘಟನೆಗಳು ಆಕ್ಷೇಪಿಸಿವೆ.

ದ್ವಿಚಕ್ರ ವಾಹನಗಳಿಗೆ ಶುಲ್ಕ ಬೇಡ:

ನಗರದ ಆರ್ಟೀರಿಯಲ್ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳಿಗೆ ಗಂಟೆಗೆ 20 ರು. ಪಾರ್ಕಿಂಗ್ ಶುಲ್ಕ ವಿಧಿಸುವುದಕ್ಕೆ ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆಗಳು ವ್ಯಕ್ತವಾಗಿವೆ. ಕಾರುಗಳಿಗೆ ಗಂಟೆಗೆ 40 ರು. ವಿಧಿಸಲು ಉದ್ದೇಶಿಸಲಾಗಿದೆ. ಆದರೆ, ಈ ರೀತಿ ಶುಲ್ಕ ವಿಧಿಸುವುದಕ್ಕೂ ವಿರೋಧ ವ್ಯಕ್ತವಾಗಿದೆ. ಕೆಲವರು ಎಲ್ಲ ಭಾಗಗಳಿಗೂ ಒಂದೇ ರೀತಿಯ ಶುಲ್ಕ ವಿಧಿಸುವ ಬದಲು ಬೇರೆ ಬೇರೆ ಸ್ಲ್ಯಾಬ್‌ಗಳನ್ನು ಮಾಡುವಂತೆ ಸಲಹೆ ನೀಡಿದ್ದಾರೆ.

ಖಾಸಗಿ ಸಂಸ್ಥೆಗಳಿಗೆ ಪಾರ್ಕಿಂಗ್ ನಿರ್ವಹಣೆ ಮಾಡುವ ಅಧಿಕಾರ ನೀಡಲಾಗುತ್ತಿದೆ. ಆದರೆ, ಅದಕ್ಕಾಗಿ ಸೂಕ್ತ ನಿಯಮಗಳನ್ನು ಮತ್ತು ವ್ಯಾಪ್ತಿ ನಿಗದಿಪಡಿಸಬೇಕು. ಸಮೂಹ ಸಾರಿಗೆ ಸೌಲಭ್ಯಗಳು ಲಭ್ಯತೆಯನ್ನು ನೋಡಿಕೊಂಡು ಹಂತ ಹಂತವಾಗಿ ಪಾರ್ಕಿಂಗ್ ನೀತಿ ಜಾರಿ ಮಾಡಬೇಕು. ಪಾರ್ಕಿಂಗ್ ನೀತಿಯಿಂದ ಸಂಗ್ರಹವಾಗುವ ಹಣವನ್ನು ಪಾರ್ಕಿಂಗ್ ಮತ್ತು ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಉದ್ದೇಶಗಳಿಗೆ ಬಳಕೆ ಮಾಡಬೇಕು. ಅನ್ಯ ಉದ್ದೇಶಗಳಿಗೆ ಬಳಕೆ ಮಾಡದಂತೆ ನೀತಿಯಲ್ಲಿ ಸ್ಪಷ್ಟತೆ ಇರಬೇಕು ಎಂಬ ಸಲಹೆಗಳನ್ನು ನೀಡಲಾಗಿದೆ.

ಕ್ಯಾಬ್ ಡ್ರೈವರ್‌ಗಳು ಗಮನದಲ್ಲಿರಲಿ:

ಕಾರುಗಳಿಗೆ ವಿಧಿಸುವ ಪಾರ್ಕಿಂಗ್ ಶುಲ್ಕ ಸಮಾಜದ ಎಲ್ಲಾ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಬೇಕು. ಉಪ ಜೀವನಕ್ಕಾಗಿ ಒಂದೊಂದು ಕಾರು ಇಟ್ಟುಕೊಂಡಿರುವ ಚಾಲಕರನ್ನು ನೋಡಬೇಕಾಗುತ್ತದೆ. ಅದೇ ರೀತಿ ಒಂದು ಸಣ್ಣ ಕಾರನ್ನು ಹೊಂದಬೇಕು ಎನ್ನುವುದು ಮಧ್ಯಮ ವರ್ಗದವರ ಕನಸಾಗಿರುತ್ತದೆ. ಇಂತಹ ವರ್ಗದ ಜನರು ಕಾರುಗಳನ್ನು ಹೊಂದುವುದೇ ತಪ್ಪು ಎಂಬಂತೆ ವಾರ್ಷಿಕ ಪಾರ್ಕಿಂಗ್ ಶುಲ್ಕ ವಿಧಿಸಿದರೆ ಅವರು ಕಾರು ಖರೀದಿ ಬಗ್ಗೆ ಯೋಚಿಸಬೇಕಾಗುತ್ತದೆ ಅಥವಾ ಇರುವ ಕಾರನ್ನು ಮಾರಬೇಕಾಗುತ್ತದೆ. ಹೀಗಾಗಿ, ಹೆಚ್ಚು ಕಾರು ಇರುವವರಿಗೆ ಶುಲ್ಕ ವಿಧಿಸಬಹುದು. ಒಂದು ಕಾರು ಇರುವವರಿಗೆ ಶುಲ್ಕ ವಿಧಿಸುವ ಕುರಿತು ಪರಿಶೀಲನೆ ನಡೆಸಬಹುದು ಎಂದು ಆಕ್ಷೇಪಣೆಗಳು ಬಂದಿವೆ ಎಂದು ಜಿಬಿಎ ಮೂಲಗಳಿಂದ ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸವಣೂರು ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚನೆಗೆ ಆಗ್ರಹ
ಉದ್ಯಾನ, ರಸ್ತಗೆ ರಕ್ಷಣಾ ಇಲಾಖೆಯ ಜಾಗ ಕೊಡಿ: ಸಿಎಂ