ಉದ್ಯಾನ, ರಸ್ತಗೆ ರಕ್ಷಣಾ ಇಲಾಖೆಯ ಜಾಗ ಕೊಡಿ: ಸಿಎಂ

KannadaprabhaNewsNetwork |  
Published : Sep 29, 2026, 04:00 AM IST
ಚೌಹಾಣ್  | Kannada Prabha

ಸಾರಾಂಶ

‘ಇಬ್ಬಲೂರು ಫೈರಿಂಗ್ ರೇಂಜ್ ಬಳಿ ರಕ್ಷಣಾ ಇಲಾಖೆಯಲ್ಲಿ ಅಧೀನದಲ್ಲಿರುವ ಖಾಲಿ ಜಾಗದಲ್ಲಿ ಉದ್ಯಾನವನ ನಿರ್ಮಾಣ, ಯಲಹಂಕ, ಎಚ್ಎಎಲ್ ವಾಯುಪಡೆ ಸುತ್ತಮುತ್ತಲಿನ ಪ್ರದೇಶದ ಕಟ್ಟಡ ನಿರ್ಮಾಣ ನಿಯಮ ಸಡಿಲಿಕೆ, ಮೇಕ್ರಿ ಸರ್ಕಲ್ ರಸ್ತೆ ಅಗಲೀಕರಣಕ್ಕೆ ಜಮೀನು ಹಸ್ತಾಂತರ, ಸರ್ಜಾಪುರ ರಸ್ತೆ ಅಗಲೀಕರಣ ಸೇರಿದಂತೆ ಬೆಂಗಳೂರಿನ 7 ಅಭಿವೃದ್ಧಿ ಯೋಜನೆಗಳಿಗೆ ರಕ್ಷಣಾ ಇಲಾಖೆಯ ಜಾಗ ಹಾಗೂ ಅನುಮತಿ ನೀಡಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ನವದೆಹಲಿ

‘ಇಬ್ಬಲೂರು ಫೈರಿಂಗ್ ರೇಂಜ್ ಬಳಿ ರಕ್ಷಣಾ ಇಲಾಖೆಯಲ್ಲಿ ಅಧೀನದಲ್ಲಿರುವ ಖಾಲಿ ಜಾಗದಲ್ಲಿ ಉದ್ಯಾನವನ ನಿರ್ಮಾಣ, ಯಲಹಂಕ, ಎಚ್ಎಎಲ್ ವಾಯುಪಡೆ ಸುತ್ತಮುತ್ತಲಿನ ಪ್ರದೇಶದ ಕಟ್ಟಡ ನಿರ್ಮಾಣ ನಿಯಮ ಸಡಿಲಿಕೆ, ಮೇಕ್ರಿ ಸರ್ಕಲ್ ರಸ್ತೆ ಅಗಲೀಕರಣಕ್ಕೆ ಜಮೀನು ಹಸ್ತಾಂತರ, ಸರ್ಜಾಪುರ ರಸ್ತೆ ಅಗಲೀಕರಣ ಸೇರಿದಂತೆ ಬೆಂಗಳೂರಿನ 7 ಅಭಿವೃದ್ಧಿ ಯೋಜನೆಗಳಿಗೆ ರಕ್ಷಣಾ ಇಲಾಖೆಯ ಜಾಗ ಹಾಗೂ ಅನುಮತಿ ನೀಡಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಸಲ್ಲಿಸಿದರು.

ದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರನ್ನು ಶಿವಕುಮಾರ್ ಅವರು ಸೋಮವಾರ ಭೇಟಿಯಾಗಿ ಮನವಿ ಸಲ್ಲಿಸಿದರು.

ಇಬ್ಬಲೂರು ಫೈರಿಂಗ್ ರೇಂಜ್ ಬಳಿ ಸುಮಾರು 730 ಎಕರೆ ರಕ್ಷಣಾ ಇಲಾಖೆಗೆ ಸೇರಿದ ಜಮೀನು ಪ್ರಸ್ತುತ ಬಳಕೆಯಾಗದೆ ಖಾಲಿ ಇದೆ. ಈ ಜಾಗದಲ್ಲಿ ನಮ್ಮ ಸರ್ಕಾರ ಉದ್ಯಾನವನ ಹಾಗೂ ಹಸಿರು ವಲಯವನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದೆ. ಉದ್ಯಾನ ನಿರ್ಮಾಣಕ್ಕೆ ಅನುಮತಿ ನೀಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

ಇನ್ನು ಬೆಂಗಳೂರಿನ ರಕ್ಷಣಾ ಇಲಾಖೆಯ ವಿವಿಧ ಸ್ಥಳಗಳಲ್ಲಿ ಪ್ರಸ್ತುತ ಹತ್ತು ಅಧಿಸೂಚಿತ ಕೊಳಚೆ ಪ್ರದೇಶಗಳಿದ್ದು, ಅವು ಸುಮಾರು 43.838 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ. ಮಳೆಗಾಲದಲ್ಲಿ ಈ ಪ್ರದೇಶಗಳು ಜಲಾವೃತಗೊಂಡು ಕೊಳಚೆ ಪ್ರದೇಶ ನಿವಾಸಿಗಳು ಜೀವನ ದುಸ್ತರವಾಗುತ್ತಿದೆ. ಈ ಪ್ರದೇಶಗಳಲ್ಲಿ ದುರಸ್ತಿ, ತುರ್ತಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಮತಿ ನೀಡಬೇಕು ಎಂದಿದ್ದಾರೆ.

ಪ್ರಸ್ತುತ ಬೆಂಗಳೂರಿನಲ್ಲಿ ನಾಲ್ಕು ವಿಮಾನ ನಿಲ್ದಾಣಗಳು ಕಾರ್ಯಾಚರಿಸುತ್ತಿವೆ. ಅವುಗಳಲ್ಲಿ ಎಚ್ಎಎಲ್ ವಿಮಾನ ನಿಲ್ದಾಣ, ಯಲಹಂಕ ವಾಯುನೆಲೆ ಎರಡು ರಕ್ಷಣಾ ವಾಯುನೆಲೆಗಳಾಗಿವೆ. ಎಚ್ಎಎಲ್ ವಿಮಾನ ನಿಲ್ದಾಣವು ಬೆಂಗಳೂರಿನ ಕೇಂದ್ರ ಭಾಗದಲ್ಲಿದ್ದು, ಅಲ್ಲಿ ಅಭಿವೃದ್ಧಿಗೆ ಭಾರಿ ಬೇಡಿಕೆಯಿದೆ. ಎಚ್ಎಎಲ್ ವಿಮಾನ ನಿಲ್ದಾಣದ ಅಧಿಕಾರಿಗಳು ವಿಧಿಸುತ್ತಿರುವ ಹೆಚ್ಚುವರಿ ನಿರ್ಬಂಧಗಳು ಅದರ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ತೀವ್ರ ಅಡ್ಡಿಯುಂಟುಮಾಡುತ್ತಿವೆ.

ವಿಮಾನ ನಿಲ್ದಾಣಗಳ 20 ಕಿ.ಮೀ ವ್ಯಾಪ್ತಿಯಲ್ಲಿ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಕಡ್ಡಾಯ ಎನ್‌ಒಸಿ ನಿಯಮವನ್ನು 20 ಕಿ.ಮೀ ಬದಲಿಗೆ 15 ಕಿ.ಮೀ ವ್ಯಾಪ್ತಿಗೆ ಸೀಮಿತಗೊಳಿಸಬೇಕು. ಹೆಲಿಕಾಪ್ಟರ್‌ಗಳ ಜೋಡಣೆ ಮಾಡುತ್ತಿರುವ ತುಮಕೂರಿಗೆ ಎಚ್ಎಎಲ್-2ಕ್ಕೆ ಹೆಲಿಕಾಪ್ಟರ್ ಪರೀಕ್ಷಾ ಚಟುವಟಿಕೆಗಳನ್ನು ಸ್ಥಳಾಂತರಿಸುವ ಮನವಿಯನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಗರ- ಸರ್ಜಾಪುರ ರಸ್ತೆ ವಿಸ್ತರಣೆ

ಬೆಂಗಳೂರು ಮಾಸ್ಟರ್ ಪ್ಲಾನ್ 2015ರ ಅನ್ವಯ ಬೆಳ್ಳಂದೂರು ಕೆರೆಯ ಪಕ್ಕದಲ್ಲಿ ಅಗರ ರಸ್ತೆಯಿಂದ ಈಜಿಪುರ ಮಾರ್ಗವಾಗಿ ಸರ್ಜಾಪುರ ರಸ್ತೆ ಸಂಪರ್ಕಿಸುವ 24 ಮೀಟರ್ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಈ ರಸ್ತೆ ನಿರ್ಮಾಣಕ್ಕಾಗಿ, ಅಗತ್ಯವಿರುವ 13.709 ಎಕರೆಯನ್ನು ಹಸ್ತಾಂತರಿಸುವ ಪ್ರಕ್ರಿಯೆಯನ್ನು ವೇಗಗೊಳಿಸಬೇಕು ಎಂದು ಎಂದು ಕೋರಿದ್ದಾರೆ.

ಅವಳಿ ಸುರಂಗ ಯೋಜನೆ:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಉತ್ತರ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿವಾರಿಸಲು, ಈ ಭೂಗತ ಸುರಂಗ ಮಾರ್ಗವು ಬಳ್ಳಾರಿ ರಸ್ತೆಯ ಹೆಬ್ಬಾಳ (ಎಸ್ಟೀಮ್ ಮಾಲ್ ಜಂಕ್ಷನ್) ಅನ್ನು ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಹೆಬ್ಬಾಳ ಡಿಫೆನ್ಸ್ ಡೈರಿ ಫಾರ್ಮ್‌ ಭಾಗವಾಗಿದ್ದ 2.039 ಎಕರೆ ರಕ್ಷಣಾ ಜಮೀನಿನ ಅಗತ್ಯವಿದೆ. ಲೈಸೆನ್ಸ್ ಶುಲ್ಕವಾಗಿ ಜಮೀನು ಬೆಲೆಯ ಶೇ.33ರಷ್ಟು ಭಾಗವಾದ ₹60.72 ಕೋಟಿಗಳನ್ನು ಪಾವತಿಸಲು ಆದೇಶಿಸಿದ್ದು ದುಬಾರಿಯಾಗಿದೆ. ಆದ್ದರಿಂದ ಲೈಸೆನ್ಸ್ ಶುಲ್ಕವನ್ನು ಜಮೀನು ಬೆಲೆಯ ಶೇ.2ಕ್ಕೆ ಇಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಲಿಂಕ್ ರಸ್ತೆ ನಿರ್ಮಾಣಕ್ಕೆ ನೆರವು ನೀಡಿ:

ಏರ್ಪೋರ್ಟ್ ರಸ್ತೆಯಿಂದ (ಬಳ್ಳಾರಿ ರಸ್ತೆ) ಸರೋವರ ಲೇಔಟ್‌ಗೆ ಲಿಂಕ್ ರಸ್ತೆ ನಿರ್ಮಾಣಕ್ಕೆ ಹೆಬ್ಬಾಳ ಡಿಫೆನ್ಸ್ ಡೈರಿ ಫಾರ್ಮ್‌ ಬಳಿಯ 6.837 ಎಕರೆ ರಕ್ಷಣಾ ಜಮೀನು ಹಸ್ತಾಂತರಕ್ಕೆ ಕೋರಿ ರಕ್ಷಣಾ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದೆ. ಇದಕ್ಕೆ ಅನುಮತಿ ನೀಡಬೇಕು ಎಂದು ಕೋರಿದ್ದಾರೆ.

ಮೇಕ್ರಿ ಸರ್ಕಲ್ ರಸ್ತೆ ಅಗಲೀಕರಣ:

ಜಿಬಿಎ ಬಳ್ಳಾರಿ ರಸ್ತೆಯ ಮೇಕ್ರಿ ಸರ್ಕಲ್‌ವರೆಗೆ ರಸ್ತೆ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಅಗತ್ಯವಿರುವ 0.775 ಎಕರೆ ಜಮೀನು ಹಸ್ತಾಂತರ ಕೋರಿ ಅರ್ಜಿ ಸಲ್ಲಿಸಲಾಗಿದೆ. ಇದು ದ್ವಿಪಥದ ರಸ್ತೆಯನ್ನು ಮೂರು ಪಥದ ರಸ್ತೆಯಾಗಿ ಅಗಲೀಕರಣ ಗೊಳಿಸಲು ನೆರವಾಗುತ್ತದೆ. ರಾಜ್ಯ ಸರ್ಕಾರದ ಎಲ್ಲಾ ಈ ಪ್ರಸ್ತಾವನೆಗಳನ್ನು ಪರಿಗಣಿಸಬೇಕು ಎಂದು ರಕ್ಷಣಾ ಸಚಿವರಿಗೆ ಸಿಎಂ ಮನವಿ ಸಲ್ಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸವಣೂರು ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚನೆಗೆ ಆಗ್ರಹ
ಆದಾಯದ ಕಡೆ ಗಮನ ಕೊಟ್ಟ ಜಿಬಿಎ: ಜನ ಗರಂ