ಬರ ಹಿನ್ನೆಲೆ ರೈತರ ಬೆಳೆ ಸಾಲ ಮನ್ನಾಗೆ ಒತ್ತಾಯ

KannadaprabhaNewsNetwork | Published : Mar 30, 2024 12:50 AM

ಸಾರಾಂಶ

ದಾವಣಗೆರೆ ತಾಲೂಕು ಬಾಡ ಗ್ರಾಮದಲ್ಲಿ ನಡೆದ ರೈತರೊಂದಿಗೆ ಸಂವಾದದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ರೈತರನ್ನುದ್ದೇಶಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ, ದಾವಣಗೆರೆ

ರಾಜ್ಯಾದ್ಯಂತ ತೀವ್ರ ಬರದ ಹಿನ್ನೆಲೆಯಲ್ಲಿ ರೈತರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಗ್ರಾಮೀಣ ಪ್ರದೇಶದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಹಾಗೂ ಕುಡಿಯುವ ನೀರಿನ ತೀವ್ರ ಸಮಸ್ಯೆ ಕಾಡುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ಬಾಡ ಗ್ರಾಮದಲ್ಲಿ ಶುಕ್ರವಾರ ಒಕ್ಕೂಟದಿಂದ ಹಮ್ಮಿಕೊಂಡಿದ್ದ ರೈತರೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ದಿನದಿನಕ್ಕೂ ವಿದ್ಯುತ್ ಸಮಸ್ಯೆ ಹಾಗೂ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಬಾಧಿಸುತ್ತಿದ್ದು, ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಗ್ರಾಮೀಣರಿಗೆ ಕುಡಿಯುವ ನೀರೊದಗಿಸಲು ಸರ್ಕಾರ ಮುಂದಾಗಲಿ ಎಂದರು.

ನಾಡಿನ ಸಮಸ್ತ ರೈತರು ಯಾವುದೇ ರಾಜಕೀಯ ಪಕ್ಷಗಳು, ರಾಜಕೀಯ ಮುಖಂಡರ ಮರ್ಜಿಗೆ ಒಳಗಾಗದೇ, ಸಂಘಟಿತ ಹೋರಾಟ ನಡೆಸಬೇಕಾಗಿದೆ. ಹೋರಾಟದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕು. ತೀವ್ರ ಬರ ಆವರಿಸಿರುವ ಪರಿಸ್ಥಿತಿಯಲ್ಲಿ ಸರ್ಕಾರವು ರೈತರು, ಗ್ರಾಮೀಣರ ನೆರವಿಗೆ ಧಾವಿಸಲಿ ಎಂದು ಅವರು ಆಗ್ರಹಿಸಿದರು.

ದಿನದಿನಕ್ಕೂ ನಗರ, ಗ್ರಾಮೀಣ, ಪಟ್ಟಣ ಪ್ರದೇಶದ ಜನರು ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಬಂದೊದಗುತ್ತಿದೆ. ಇಡೀ ರಾಜ್ಯ, ದೇಶದಲ್ಲಿ ಮಳೆಯ ಅಭಾವದಿಂದಾಗಿ ಕೆರೆ ಕಟ್ಟೆಗಳು ಖಾಲಿಯಾಗುತ್ತಿವೆ. ದನ, ಕರು ಸೇರಿದಂತೆ ಜಾನುವಾರುಗಳು ನೀರು, ಮೇವು ಸಿಗದ ಸ್ಥಿತಿ ಇದೆ. ಭೂ ತಾಯಿಯನ್ನೇ ನಂಬಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಹೇಳಿದರು.

ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಮೂಲಕ ಅನ್ನದಾತರ ನೆರವಿಗೆ ಧಾವಿಸಬೇಕು ಎಂದು ಅವರು ಒತ್ತಾಯಿಸಿದರು.

ಯಾವುದೇ ಪಕ್ಷ, ಸರ್ಕಾರವಾದರೂ ರೈತರು, ಕೂಲಿ ಕಾರ್ಮಿಕರು, ಬಡವರು, ಶ್ರಮಿಕ ವರ್ಗದ ಪರ ಇರಬೇಕು. ಮುಂಬರುವ ಚುನಾವಣೆಯಲ್ಲಿ ಸಹ ಮತದಾರರು ಎಲ್ಲರಿಗೂ ಸ್ಪಂದಿಸುವಗುಣ, ಮನೋಭಾವ ಹೊಂದಿರುವ ಜನ ಪ್ರತಿನಿಧಿಗಳನ್ನೇ ಆಯ್ಕೆ ಮಾಡಬೇಕು. ಆದರೆ, ಈಗಿನ ಜನ ಪ್ರತಿನಿಧಿಗಳಲ್ಲಿ ಅಂತಹ ಕಾಳಜಿಯಾಗಲೀ, ಬದ್ಧತೆಯಾಗಲಿ ಇಲ್ಲ. ಈ ಹಿನ್ನೆಲೆಯಲ್ಲಿ ರೈತರು ಸಂಘಟಿತ ಹೋರಾಟ ನಡೆಸಬೇಕಾಗಿದೆ ಎಂದು ಅವರು ತಿಳಿಸಿದರು.

ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಲ್ಲೂರು ರವಿಕುಮಾರ ಮಾತನಾಡಿ, ರೈತರ ಸಂಕಷ್ಟ ಹೇಳಿತೀರದಂತಾಗಿದೆ. ಭದ್ರಾ ಜಲಾಶಯದ ಶೇ.70ರಷ್ಟು ಅಚ್ಚುಕಟ್ಟು ಹೊಂದಿರುವ ದಾವಣಗೆರೆ ಜಿಲ್ಲೆಯ ಕೊನೆಯ ಭಾಗಕ್ಕೆ ನೀರು ಮರೀಚಿಯಾಗಿದೆ. ಹೊಲ, ಗದ್ದೆ, ತೋಟಕ್ಕೆ ನೀರು ಬಿಡುವುದಿರಲಿ, ನಗರ, ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರು ಒದಗಿಸಲು ಸಹ ಆಗದ ಸ್ಥಿತಿ ಇದೆ. ಇನ್ನಾದರೂ ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ತಲುಪಿಸುವ ಕೆಲಸ ಆಗಲಿ ಎಂದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಬಾಡ ಹನುಮಂತಪ್ಪ, ಹೋಬಳಿ ಘಟಕದ ಅಧ್ಯಕ್ಷ ಚಂದ್ರಶೇಖರಪ್ಪ, ಗೋವಿಂದಪ್ಪ, ಚಂದ್ರಪ್ಪ, ನಾಗರಾಜ, ಗಂಗಾಧರ, ದಾಸರ ಕರಿಯಪ್ಪ ಇತರರು ಇದ್ದರು.

Share this article