ಗೋಕರ್ಣ ಪ್ರವಾಸಿತಾಣ ಅಭಿವೃದ್ಧಿ, ಸ್ವಚ್ಛತೆಗೆ ಆಗ್ರಹ

KannadaprabhaNewsNetwork |  
Published : Apr 22, 2025, 01:52 AM IST
ಗ್ರಾಮ ಪಂಚಾಯತ ಸಭಾಭವನದಲ್ಲಿ ವಿಶೇಷ ಸಭೆ ನಡೆದಿರುವುದು | Kannada Prabha

ಸಾರಾಂಶ

ಮಾದನಗೇರಿಯಿಂದ ಗೋಕರ್ಣದವರೆಗಿನ ರಸ್ತೆಯ ಅಗಲೀಕರಣಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಗೋಕರ್ಣ: ಪ್ರವಾಸಿ ತಾಣದ ಅಭಿವೃದ್ಧಿ, ಸ್ವಚ್ಛತೆಯ ಕುರಿತು ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಇಲ್ಲಿನ ಗ್ರಾಪಂ ಸಭಾಭವನದಲ್ಲಿ ಸೋಮವಾರ ವಿವಿಧ ಇಲಾಖೆ ಅಧಿಕಾರಿಗಳ ವಿಶೇಷ ಸಭೆ ನಡೆಯಿತು.

ಮಾದನಗೇರಿಯಿಂದ ಗೋಕರ್ಣದವರೆಗಿನ ರಸ್ತೆಯ ಅಗಲೀಕರಣಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಅನುಮೋದನೆ ದೊರೆತು ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಶಾಸಕರು ತಿಳಿಸಿದರು.

ಗ್ರಾಪಂ ಸದಸ್ಯರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟು, ಬಗೆಹರಿಸುವಂತೆ ಶಾಸಕರಲ್ಲಿ ಕೇಳಿಕೊಂಡರು.

ಬಹುಮುಖ್ಯವಾಗಿ ರಥಬೀದಿ, ಬಸ್ ನಿಲ್ದಾಣದ ರಸ್ತೆ ಮತ್ತಿತರ ಪ್ರಮುಖ ಮಾರ್ಗದಲ್ಲಿ ವಾಹನ ನಿಲುಗಡೆಗೊಳಿಸುತ್ತಿರುವುದರಿಂದ ವಾಹನ ದಟ್ಟಣೆ ಉಂಟಾಗಿ ಸಮಸ್ಯೆಯಾಗುತ್ತಿರುವ ಬಗ್ಗೆ ಚರ್ಚೆ ನಡೆಯಿತು. ಅಂಗಡಿ-ಮುಂಗಟ್ಟುಗಳು ಚರಂಡಿ ಆಕ್ರಮಿಸಿ ರಸ್ತೆಗೆ ಬಂದಿರುವದನ್ನು ಸಹ ಪ್ರಸ್ತಾಪಿಸಲಾಯಿತು.

ಈ ಕುರಿತು ಶಾಸಕರು ಮಾತನಾಡಿ, ಜಾಗ ರಸ್ತೆ ಆಕ್ರಮಿಸಿರುವದನ್ನು ತೆರವುಗೊಳಿಸಲು ಸೀಮಿತ ಕಾಲಾವಕಾಶ ನೀಡಿ, ಒಂದು ವೇಳೆ ತೆಗೆಯದಿದ್ದರೆ, ನಿಮ್ಮ ಬಂದೋಬಸ್ತ್‌ನೊಂದಿಗೆ ಗ್ರಾಪಂನಿಂದ ತೆರವು ಕಾರ್ಯ ನಡೆಯಲಿ ಎಂದು ಸಭೆಯಲ್ಲಿ ಪಿಐ ಶ್ರೀಧರ ಅವರಿಗೆ ಸೂಚಿಸಿದರು.

ಪಿಐ ಶ್ರೀಧರ ಮಾತನಾಡಿ, ಏಕಮುಖ ಸಂಚಾರ ವ್ಯವಸ್ಥೆಯ ಕುರಿತು ಮಾಹಿತಿ ನೀಡುವ ನಾಮಫಲಕ , ಮಾರ್ಗ ಸೂಚಿಫಲಕಗಳು ಇಲ್ಲದೆ ಪ್ರವಾಸಿಗರು ಎಲ್ಲೆಂದರಲ್ಲಿ ವಾಹನ ಚಲಾಯಿಸುತ್ತಿದ್ದು, ಇದನ್ನ ನಿಭಾಯಿಸುವುದು ಸವಾಲಾಗಿದೆ. ಮಾಹಿತಿ ಫಲಕ ಅಳವಡಿಸಿಕೊಡುವಂತೆ ಕೋರಿದರು. ಒಂದು ವಾರದೊಳಗೆ ಮಾಹಿತಿ ಫಲಕ ಅಳವಡಿಸಲು ಗ್ರಾಪಂ ಸೂಚಿಸಲಾಯಿತು.

ಅಶೋಕೆಯಲ್ಲಿ ನಿರ್ಮಾಣವಾದ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಮಲತ್ಯಾಜ್ಯ ಸಂಸ್ಕರಣ ಘಟಕವನ್ನು ಆ ಭಾಗದ ಸುತ್ತಲಿನ ಜನರಿಗೆ ಯಾವುದೇ ತೊಂದರೆಯಾಗದಂತೆ ಈ ಬಗ್ಗೆ ಸರಿಯಾದ ಮಾಹಿತಿ ನೀಡಿ ಕಾರ್ಯರೂಪಕ್ಕೆ ತರಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಂಜುನಾಥ ಜನ್ನು ಒತ್ತಾಯಿಸಿದರು. ಕೋಟ್ಯಂತರ ರುಪಾಯಿ ವ್ಯಯಿಸಿ ಮಾಡಿದ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಕೇಳಿಕೊಂಡರು.

ಮುಖ್ಯ ಕಡಲತೀರದಲ್ಲಿ ಸರ್ವೆ ನಂ. ೧೯ರಲ್ಲಿ ಗ್ರಾಪಂ ಜಾಗ ಸಂರಕ್ಷಣೆ ಮಾಡದೇ ಬಿಡಲಾಗಿದೆ. ಖಾಸಗಿಯವರ ಬಳಿ ಇದ್ದಾಗ ಬಿಡಿಸಿಕೊಳ್ಳುವ ವೇಗ ಈಗ ರಕ್ಷಣೆ ಮಾಡುವ ಹೊಣೆ ಏಕೆ ಇಲ್ಲ ಎಂದು ಗ್ರಾಪಂ ಸದಸ್ಯ ಪ್ರಭಾಕರ ಪ್ರಸಾದ ಪ್ರಶ್ನಿಸಿದರು.

ಇದರಂತೆ ಇನ್ನು ಅನೇಕ ಗಂಭೀರ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು. ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ಉಪಾಧ್ಯಕ್ಷೆ ನಾಥಲಾ ರೆಬೆಲೂ ದಿನ್ನಿ ತಾಪಂ ಇಒ ಆರ್.ಎಲ್. ಭಟ್ ಸೇರಿದಂತೆ ಹೆಸ್ಕಾಂ, ಚಿಕ್ಕನೀರಾವರಿ, ಪೊಲೀಸ್, ಸಾರಿಗೆ ಸಂಸ್ಥೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಗ್ರಾಪಂ ಕಾರ್ಯದರ್ಶಿ ಮಂಜುನಾಥ ಸಭೆ ನಿರ್ವಹಿಸಿದರು.

ಕಡಲತೀರದ ಅಂಗಡಿಗಳಿಗೆ ಬಾಡಿಗೆ ನೀಡಲು ಸೂಚನೆ:

ಮುಖ್ಯ ಕಡಲತೀರದಲ್ಲಿರುವ ಅಂಗಡಿಗಳು ಗ್ರಾಪಂಗೆ ಎರಡು ವರ್ಷದಿಂದ ಬಾಡಿಗೆ ನೀಡಿಲ್ಲ ಎಂಬ ಪ್ರಸ್ತಾಪ ಸಭೆಯಲ್ಲಿ ಕೇಳಿ ಬಂತು. ತಕ್ಷಣ ಬಾಡಿಗೆ ವಸೂಲಿ ಮಾಡಬೇಕು. ಕೊಡದಿದ್ದರೆ ಅಂಗಡಿ ಖಾಲಿ ಮಾಡಲು ಸೂಚಿಸಿ ಮಂಗಳವಾರದಿಂದಲೇ ಕಾರ್ಯ ಆರಂಭಿಸಲು ಸೂಚಿಸಲಾಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ