ಹಿರಿಯ ನ್ಯಾಯವಾದಿ ಸದಾಶಿವರೆಡ್ಡಿ ಮೇಲೆ ಹಲ್ಲೆಗೆ ವಕೀಲರ ಖಂಡನೆ

KannadaprabhaNewsNetwork |  
Published : Apr 22, 2025, 01:52 AM IST
ಬ್ಯಾಡಗಿಯಲ್ಲಿ ಸ್ಥಳೀಯ ನ್ಯಾಯವಾದಿಗಳ ಸಂಘದ ಸದಸ್ಯರು ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಎದುರಾಳಿ ಕಕ್ಷಿದಾರರು ತಮ್ಮ ಎದುರುಗಾರರನ್ನು ಬಿಟ್ಟು ವಕೀಲರನ್ನೇ ಗುರಿಯಾಗಿಸಿಕೊಂಡು ಮಾರಣಾಂತಿಕ ಹಲ್ಲೆಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ಕಾನೂನು ರಕ್ಷಣೆ ಮಾಡುವವರ ಜೀವಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ವಕೀಲರು ಆರೋಪಿಸಿದರು.

ಬ್ಯಾಡಗಿ: ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷ, ಹಿರಿಯ ನ್ಯಾಯವಾದಿ ಸದಾಶಿವರೆಡ್ಡಿ ಮೇಲೆ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಹಲ್ಲೆ ಘಟನೆಯನ್ನು ಖಂಡಿಸಿ ಸೋಮವಾರ ಸ್ಥಳೀಯ ನ್ಯಾಯವಾದಿಗಳ ಸಂಘದ ಸದಸ್ಯರು ಕಲಾಪಗಳಿಂದ ದೂರ ಉಳಿದು ಪಟ್ಟಣದಲ್ಲಿ ಮೌನ ಪ್ರತಿಭಟನೆ ನಡೆಸಿ ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನ್ಯಾಯವಾದಿಗಳ ಸಂಘದ ಕಚೇರಿಯಿಂದ ಮೆರವಣಿಗೆ ನಡೆಸುವ ಮೂಲಕ ಮೌನ ಪ್ರತಿಭಟನೆ ನಡೆಸಿದ ಸದಸ್ಯರು ತಪ್ಪಿತಸ್ಥರನ್ನು ಪತ್ತೆಹಚ್ಚಿ ದುಷ್ಕರ್ಮಿಗಳನ್ನು ಬಂಧಿಸಿ ಕಾನೂನು ಪ್ರಕಾರ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಅಧ್ಯಕ್ಷ ರಾಜು ಶಿಡೇನೂರ, ರಾಜ್ಯದಲ್ಲಿ ನಡೆಯುತ್ತಿರುವ ಅಮಾನವೀಯ ಘಟನೆಗಳನ್ನು ನೋಡಿದರೇ ರಾಜ್ಯದಲ್ಲಿರುವುದು ಪ್ರಜಾಪ್ರಭುತ್ವ ಸಿದ್ಧಾಂತವೇ? ಅಥವಾ ಶಕ್ತಿ ಸಿದ್ಧಾಂತವೇ? ಎಂಬ ಅನುಮಾನ ಮೂಡುತ್ತಿದೆ. ಸಾರ್ವಜನಿಕರು ನಿರ್ಭಯವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ವಕೀಲರನ್ನು ಬೆದರಿಸುವಂಥ ಕುತಂತ್ರ ಇದರಲ್ಲಡಗಿದ್ದು, ಕೂಡಲೇ ಇಂತಹ ದುಷ್ಟಶಕ್ತಿಗಳನ್ನು ಮಟ್ಟ ಹಾಕದಿದ್ದರೆ ಬರುವ ದಿನಗಳಲ್ಲಿ ಸಾರ್ವಜನಿಕರ ಜನಜೀವನ ಕಷ್ಟಕರವಾಗಲಿದೆ ಎಂದರು.

ರಕ್ಷಣೆ ಕೊಡದಿದ್ದರೆ ಹೇಗೆ: ಹಿರಿಯ ವಕೀಲ ಪಿ.ಎಂ. ಮಠದ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎದುರಾಳಿ ಕಕ್ಷಿದಾರರು ತಮ್ಮ ಎದುರುಗಾರರನ್ನು ಬಿಟ್ಟು ವಕೀಲರನ್ನೇ ಗುರಿಯಾಗಿಸಿಕೊಂಡು ಮಾರಣಾಂತಿಕ ಹಲ್ಲೆಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ಕಾನೂನು ರಕ್ಷಣೆ ಮಾಡುವವರ ಜೀವಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಇದೊಂದು ಹೇಯ ಕೃತ್ಯವಾಗಿದೆ. ಸ್ವತಃ ವಕೀಲರಾಗಿರುವ ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕ್ರಮಗಳನ್ನು ಜರುಗಿಸುವುದಷ್ಟೇ ಅಲ್ಲ, ನಮ್ಮ ರಕ್ಷಣೆಗೆ ಬಿಗಿಯಾದ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಜಿ.ಬಿ. ಯಲಗಚ್ಚ ಕಾರ್ಯದರ್ಶಿ ಎಚ್.ಜಿ. ಮುಳಗುಂದ, ಸಹ ಕಾರ್ಯದರ್ಶಿ ಮಂಜುನಾಥ ಕುಮ್ಮೂರ, ನ್ಯಾಯವಾದಿಗಳಾದ ಪಿ.ಸಿ. ಶೀಗಿಹಳ್ಳಿ, ಎಂ.ಜೆ. ಮುಲ್ಲಾ ಎಫ್.ಎಂ. ಮುಳಗುಂದ ಎನ್.ಎಂ. ಹುಬ್ಬಳ್ಳಿ ಎನ್.ಎಸ್. ಬಟ್ಟಲಕಟ್ಟಿ, ಎಚ್.ಎಸ್. ಜಾಧವ, ಕೆ.ಡಿ. ಪಾಟೀಲ, ಎಸ್.ಎನ್. ಬಾರ್ಕಿ, ಮಾಲತೇಶ ಹಾವೇರಿ, ಶಿವನಗೌಡ ಬಸನಗೌಡ್ರ, ಡಿ.ಎಚ್. ಬುಡ್ಡನಗೌಡ್ರ, ದಯಾನಂದ ಉಳ್ಳಾಗಡ್ಡಿ, ಪಿ.ಸಿ. ಶಿಂಗಿ, ಎಂ.ಎಚ್. ಕಾಯ್ಕದ, ಲಿಂಗರಾಜ ಬನ್ನಿಹಟ್ಟಿ, ಪ್ರದೀಪ್ ಸದ್ಸಲಗಿ ಸೇರಿದಂತೆ ನೂರಾರು ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಆರೋಪಿಗಳ ಬಂಧನಕ್ಕೆ ವಕೀಲರ ಆಗ್ರಹ

ರಟ್ಟೀಹಳ್ಳಿ: ಹಿರಿಯ ವಕೀಲ ಸದಾಶಿವರೆಡ್ಡಿ ಅವರ ಮೇಲಾದ ಹಲ್ಲೆಯನ್ನು ಖಂಡಿಸಿ ತಾಲೂಕು ವಕೀಲರ ಸಂಘದಿಂದ ಮೌನ ಪ್ರತಿಭಟನೆ ನಡೆಸಿ ಸೋಮವಾರ ತಹಸೀಲ್ದಾರ್ ಶ್ವೇತಾ ಅಮರಾವತಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಹಿರಿಯ ವಕೀಲ, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ಭಾರತೀಯ ವಕೀಲರ ಪರಿಷತ್ ಸಹ ಅಧ್ಯಕ್ಷರಾದ ಸದಾಶಿವ ರೆಡ್ಡಿ ಅವರ ಮೇಲೆ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಇತ್ತೀಚೆಗೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಪಿ.ಡಿ. ಬಸನಗೌಡ್ರ, ವಸಂತ ದ್ಯಾವಕ್ಕಳವರ, ಎಸ್.ಎಸ್. ಪಾಟೀಲ್, ಪಕ್ಕಿರೇಶ ತುಮ್ಮಿನಕಟ್ಟಿ, ಎಂ.ಬಿ. ಜೋಕನಾಳ, ಪಿ.ಬಿ. ಗುಬ್ಬಿ, ಬಿ.ಸಿ. ಪಾಟೀಲ್, ಜಯಣ್ಣ ಹೋಳಿಆನ್ವೇರಿ, ಎಲ್.ಆರ್. ಪಾಟೀಲ್, ಪಿ.ಎಫ್. ಜಾಡರ, ಎಚ್.ಎನ್. ಕಣಜೇರ, ಕೆ.ಬಿ. ಬಾಳಿಕಾಯಿ, ಎಸ್.ಎನ್. ಮುಲ್ಲಾ, ಜಿ.ವಿ. ಕುಲಕರ್ಣಿ, ನಾಗರಾಜ, ಎನ್.ಎಸ್. ಹುಲ್ಲತ್ತಿ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!