ಉಳೆನೂರು ಗ್ರಾಮದ ಯುವಕ ಸುರೇಶ ಮಡಿವಾಳರಿಂದ ಅನಿರ್ದಿಷ್ಟಾವಧಿ ಧರಣಿ
ಕನ್ನಡಪ್ರಭ ವಾರ್ತೆ ಕಾರಟಗಿಖಾಯಂ ಶಿಕ್ಷಕರ ಕೊರತೆಯಿಂದ ಕಲ್ಯಾಣ ಕರ್ನಾಟಕ ಭಾಗದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕಾ ಮಟ್ಟ ಕುಸಿಯುತ್ತಿದೆ. ಹೀಗಾಗಿ, ಸರಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗಾಗಿ ಆಗ್ರಹಿಸಿ ತಾಲೂಕಿನ ಉಳೆನೂರು ಗ್ರಾಮದ ಯುವಕ ಸುರೇಶ ಮಡಿವಾಳರ ಸೋಮವಾರ ಗ್ರಾಮದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಈ ವೇಳೆ ಸುರೇಶ ಮಡಿವಾಳರ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕಲ್ಯಾಣ ಕರ್ನಾಟಕ ಭಾಗದ ಹಲವು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕಾ ಮಟ್ಟವನ್ನು ನೋಡಿದಾಗ ಎಸ್ಎಸ್ಎಲ್ ಸಿ ತರಗತಿ ಮಕ್ಕಳಿಗೆ 2ನೇ ತರಗತಿ ಮಕ್ಕಳ ಪಠ್ಯ ಪುಸ್ತಕ ಓದಲು ಬರುತ್ತಿಲ್ಲ. ಜತೆಗೆ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳು ಓದಲು ಮತ್ತು ಬರೆಯಲು ಬರುತ್ತಿಲ್ಲ. ಈ ಬಗ್ಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಕ್ಕಳ ಕಲಿಕಾ ಗುಣಮಟ್ಟ ಕಳಪೆ ಕುರಿತು ಮಾಜಿ ಶಿಕ್ಷಣ ಸಚಿವ ನಾಗೇಶ ಅವರಿಗೆ ವರದಿ ನೀಡಿದ್ದೇವೆ. ಈ ಎಲ್ಲ ಸಮಸ್ಯೆಗಳಿಗೆ ಪ್ರಮುಖ ಕಾರಣ ಖಾಯಂ ಶಿಕ್ಷಕರ ಕೊರತೆ. ಈ ಬಗ್ಗೆ ಸರಕಾರ ಗಮನಹರಿಸಬೇಕು. ಇನ್ನು ಹಲವು ತಿಂಗಳ ಹಿಂದೆ ಸರಕಾರ ಶಿಕ್ಷಕರನ್ನು ವರ್ಗಾವಣೆ ಮಾಡಿದೆ. ಇದರಿಂದ ಅನೇಕ ಶಾಲೆಗಳು ಶಿಕ್ಷಕರಿಲ್ಲದೇ ಏಕೋಪಾಧ್ಯಾಯ ಶಾಲೆಗಳಾಗಿ ಉಳಿದುಕೊಂಡಿದ್ದು, ಅತಿಥಿ ಶಿಕ್ಷಕರೇ ಆಧಾರವಾಗಿದ್ದಾರೆ. ಇದೀಗ ಸರಕಾರ ಮತ್ತೊಮ್ಮೆ ಜು. 26ರಿಂದ ಶಿಕ್ಷಕರ ವರ್ಗಾವಣೆ ಮಾಡಲು ಮುಂದಾಗಿದೆ. ಆದರೆ, ಇಲ್ಲಿನ ಕಾಯಂ ಶಿಕ್ಷಕರು ವರ್ಗಾವಣೆಯಾದಲ್ಲಿ ಅತಿಥಿ ಶಿಕ್ಷಕರೇ ಶಾಲೆಗಳನ್ನು ನಡೆಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇದರಿಂದ ಮತ್ತಷ್ಟು ಮಕ್ಕಳ ಕಲಿಕಾ ಮಟ್ಟ ಕುಸಿಯುತ್ತದೆ. ಆದ್ದರಿಂದ ಶಿಕ್ಷಕರ ನೇಮಕಾತಿ ನಡೆಸುವ ವರೆಗೂ ಯಾವುದೇ ವರ್ಗಾವಣೆ ಮಾಡಬಾರದು. ಜತೆಗೆ ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ಪರಿಹಾರ ನೀಡಬೇಕು. ಬಡ ಮಕ್ಕಳು ಓದುತ್ತಿರುವ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.ಅಧಿಕಾರಿಗಳು ಭೇಟಿ:ಸುರೇಶ ಮಡಿವಾಳರ ಮಾಡುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಆನಂದ ನಾಗಮ್ಮ ಶಿಕ್ಷಣ ಸಂಯೋಜಕ, ಮಂಜುನಾಥ ಬಿಆರ್‌ಪಿ, ರಾಜೀವ್ ಕುಮಾರ ಉಳೆನೂರು ಕ್ಲಸ್ಟರ್ ಸಿಆರ್‌ಪಿ ಸೇರಿ ಇತರ ಅಧಿಕಾರಿಗಳು ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.