ಕುಷ್ಟಗಿ: ಕುಷ್ಟಗಿ ಬರಪೀಡಿತ ತಾಲೂಕು ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ವತಿಯಿಂದ ಶಾಸಕ ದೊಡ್ಡನಗೌಡ ಪಾಟೀಲ ನೇತೃತ್ವದಲ್ಲಿ ಬುಧವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡು ಸಾರ್ವಜನಿಕರು ತೊಂದರೆ ಅನುಭವಿಸಿದರು. ಪ್ರತಿಭಟನೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ರೈತರು ಹಾಗೂ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಕುಷ್ಟಗಿ ತಾಲೂಕಿನಲ್ಲಿ ನೀರಾವರಿ ವ್ಯವಸ್ಥೆ ಇಲ್ಲ. ಮಳೆಯನ್ನೇ ನಂಬಿ ಬದುಕುವ ರೈತರೇ ಹೆಚ್ಚಿದ್ದಾರೆ. ಆರಂಭಿಕ ಮಳೆಯಲ್ಲಿ ರೈತರು ಬಿತ್ತನೆ ಮಾಡಿದರು. ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಎರಡು ಬಾರಿ ಬಿತ್ತನೆ ಮಾಡಬೇಕಾಯಿತು. ಇದೀಗ ಮತ್ತೆ ಮಳೆ ಕೈಕೊಟ್ಟಿದೆ ಎಂದರು.ಮುಖ್ಯಮಂತ್ರಿಗೆ ಈಗಾಗಲೇ ಬರ ಘೋಷಣೆ ಕುರಿತು ಮನವಿ ಮಾಡಲಾಗಿದೆ. ಮೊದಲ ಹಾಗೂ ಎರಡನೇ ಹಂತದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲೂ ಕುಷ್ಟಗಿಯನ್ನು ಸೇರಿಸಿಲ್ಲ. ಇತರ ತಾಲೂಕುಗಳನ್ನು ಬರ ಘೋಷಣೆ ಮಾಡಲು ಮಳೆ ವರದಿ ಕೇಳದ ಸರ್ಕಾರಕ್ಕೆ ಕುಷ್ಟಗಿಗೆ ಮಾತ್ರ ಮಳೆ ವರದಿ ಬೇಕಾಗಿದೆ ಎಂದು ಆಕ್ಷೇಪಿಸಿದರು.
ಸೆ. 21ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕುಷ್ಟಗಿಯನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ ಪರಿಹಾರ ನೀಡಬೇಕು. ಇಲ್ಲವಾದರೆ ಹೋರಾಟ ಮುಂದುವರಿಯಲಿದೆ. ಇದು ಕೊನೆಯ ಎಚ್ಚರಿಕೆ ಎಂದು ಹೇಳಿದರು.
ಬಿಜೆಪಿ ಮುಖಂಡ ಡಾ. ಬಸವರಾಜ್ ಕ್ಯಾವಟರ್ ಮಾತನಾಡಿ, ಕಳೆದ ನಾಲ್ಕು ತಿಂಗಳಿಂದ ಮಳೆಯ ಕೊರತೆ ಇದೆ. ಕೊಪ್ಪಳ ಜಿಲ್ಲೆಯ ಮೂರು ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಹೊರಗಿಡಲಾಗಿದೆ. ಬೆಳೆ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಬರ ಘೋಷಿಸಬೇಕು. ಕುಷ್ಟಗಿಯಲ್ಲಿ ವಿರೋಧ ಪಕ್ಷದ ಶಾಸಕರಿದ್ದಾರೆ ಎಂಬ ಕಾರಣಕ್ಕೆ ತಾರತಮ್ಯ ಮಾಡಲಾಗುತ್ತಿದೆ ಎಂಬ ಅನುಮಾನ ರೈತರಲ್ಲಿ ಮೂಡಿದೆ ಎಂದು ಆರೋಪಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಬಾದಾಮಿ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಉಮೇಶ ಯಾದವ್, ದೇವೆಂದ್ರಪ್ಪ ಬಳೂಟಗಿ, ಕೆ. ಮಹೇಶ, ಶೈಲಜಾ ಬಾಗಲಿ, ಕಲ್ಲೇಶ ತಾಳದ, ಲಾಡಸಾಬ ಕೊಳ್ಳಿ, ದೊಡ್ಡಬಸವ ಸುಂಕದ, ವಿಜಯ ದೇಸಾಯಿ, ಶುಖಮುನಿ ಕೊರಡಕೇರಾ ಪಾಲ್ಗೊಂಡಿದ್ದರು.