ಬ್ಯಾಡಗಿ: ಬರಗಾಲ ಪರಿಹಾರ ಘೋಷಣೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಪುಟ್ಟಣ್ಣಯ್ಯ ಬಣ) ಕಾರ‍್ಯಕರ್ತರು ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದರಲ್ಲದೇ ಬಳಿಕ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಜಿಲ್ಲಾ ಘಟಕದ ಪ್ರಧಾನ ಕಾರ‍್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ದೇಶದ ಪ್ರಮುಖ ಭಾಗದ ಆದಾಯ ಮತ್ತು ಉದ್ಯೋಗದ ಮೂಲವೇ ಕೃಷಿಯಾಗಿದೆ. ಜಿಡಿಪಿಯ ಸುಮಾರು ಮೂರನೇ ಒಂದು ಭಾಗ ಕೃಷಿಯಿಂದ ಬಂದಂತಹ ಆದಾಯವಾಗಿದೆ. ಹೀಗಿರುವಾಗ ಪ್ರಸಕ್ತ ಬರಗಾಲದಿಂದ ರೈತರು ತತ್ತರಿಸಿದ್ದು, ಇದಕ್ಕಾಗಿ ಸರ್ಕಾರದ ಬಳಿ ಅಂಗಲಾಚುವ ಸ್ಥಿತಿ ಬಂದೊದಗಿದೆ ಎಂದರು.ವರ್ಷಪೂರ್ತಿ ದುಡಿದು ಸಮಸ್ಯೆ ತಪ್ಪುತ್ತಿಲ್ಲ: ತಾಲೂಕಾಧ್ಯಕ್ಷ ರುದ್ರಗೌಡ ಕಾಡನಗೌಡ್ರ ಮಾತನಾಡಿ, ರೈತರು ವರ್ಷಪೂರ್ತಿ ದುಡಿದರೂ ನೂರಾರು ಸವಾಲುಗಳನ್ನು ಎದುರಿಸಬೇಕಾಗಿದೆ. ಮಳೆಯಿಲ್ಲದೇ ಬೆಳೆಗಳು ಹಾನಿಗೊಳಗಾಗಿವೆ. ಅದರಿಂದ ಸಾಲದ ಶೂಲಕ್ಕೆ ಸಿಲುಕುತ್ತಿದ್ದಾರೆ. ಮಾಡಿದ ಸಾಲವನ್ನು ಹಿಂತಿರುಗಿಸಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ತಮ್ಮ ಅಮೂಲ್ಯ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದರು.ರೈತರಾಗಿದ್ದೇ ತಪ್ಪು: ಗಂಗಣ್ಣ ಎಲಿ ಮಾತನಾಡಿ, ಬಹುತೇಕ ಪ್ರಾಕೃತಿಕ ಸಮಸ್ಯೆಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ರೈತರ ಜೀವನದ ಮೇಲೆ ಪರಿಣಾಮ ಬೀರುತ್ತಿವೆ. ಇದು ಗೊತ್ತಿದ್ದರೂ ಸರ್ಕಾರ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ನಾವೆಲ್ಲ ರೈತರಾಗಿ ನಮ್ಮ ಬದುಕು ಆಯ್ಕೆ ಮಾಡಿಕೊಂಡಿದ್ದೇ ತಪ್ಪೇ ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ. ನಮ್ಮ ತಾಳ್ಮೆಯನ್ನು ಪರೀಕ್ಷಿಸದಂತೆ ಎಚ್ಚರಿಕೆ ನೀಡಿದ ಅವರು, ಬರಗಾಲ ಪರಿಹಾರ ನೀಡದೇ ನಿರ್ಲಕ್ಷ್ಯ ಧೋರಣೆ ರೈತ ಸಂಘವು ಒಕ್ಕೊರಲನಿಂದ ಖಂಡಿಸುತ್ತದೆ ಎಂದರು.
ಅಭಿವೃದ್ಧಿಶೀಲ ಭಾರತಕ್ಕೆ ಮಾರಕ: ಮಂಜು ತೋಟದ ಮಾತನಾಡಿ, ದೇಶದ ರೈತರು ಸಾಲ ಪಡೆದುಕೊಳ್ಳುವುದೂ ಸೇರಿದಂತೆ ನೀರು, ಬೀಜ, ಗೊಬ್ಬರ, ವಿದ್ಯುತ್ ಸಾಲಮನ್ನಾಕ್ಕಾಗಿ ಬೀದಿಗಿಳಿಯುತ್ತಿರುವುದು ಅಭಿವೃದ್ಧಿಶೀಲ ರಾಷ್ಟ್ರ ಭಾರತಕ್ಕೆ ಅತ್ಯಂತ ಮಾರಕವೆನಿಸುತ್ತಿದೆ. ನಿರಂತರ 7 ತಾಸು ತ್ರೀಫೇಸ್ ವಿದ್ಯುತ್ ನೀಡುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ ವ್ಯತಿರಿಕ್ತವಾಗಿ ಹೆಸ್ಕಾಂ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದು, ಇಂದಿಗೂ 7 ತಾಸು ವಿದ್ಯುತ್ ಪೂರೈಸುತ್ತಿಲ್ಲ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಡಾ. ಕೆ.ವಿ. ದೊಡ್ಡಗೌಡ್ರ, ಕಿರಣಕುಮಾರ ಗಡಿಗೋಳ, ಮಲ್ಲೇಶಪ್ಪ ಡಂಬಳ, ಪ್ರಕಾಶ ಸಿದ್ದಪ್ಪನವರ, ಶಿವರುದ್ರಪ್ಪ ಮೂಡೇರ, ಫಕ್ಕೀರೇಶ ಅಜಗೊಂಡರ, ವೀರೇಶ ಘಾಳಪೂಜಿ, ಶೇಖಪ್ಪ ಕಾಶಿ, ಚಿಕ್ಕಪ್ಪ ಛತ್ರದ, ಮೌನೇಶ ಕಮ್ಮಾರ, ಜಾನ್ ಪುನೀತ್ ಇದ್ದರು. ನ. 28ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ: ಜಿಲ್ಲೆಯ ಮಟ್ಟಿಗೆ ಬರಗಾಲ ಕೇವಲ ಘೋಷಣೆಗಷ್ಟೇ ಸೀಮಿತವಾಗಿದ್ದು ಪರಿಹಾರದ ಕುರಿತು ಸರ್ಕಾರ ಈ ವರೆಗೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ನ. 28ರೊಳಗೆ ಸರ್ಕಾರ ತನ್ನ ನಿರ್ಧಾರ ಪ್ರಕಟಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭನಾಕಾರರು ಹೇಳಿದ್ದಾರೆ.