ನಾಗರಬೆಟ್ಟ ಯೋಜನೆ ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹ

KannadaprabhaNewsNetwork |  
Published : Dec 11, 2025, 03:15 AM IST
ಮುದ್ದೇಬಿಹಾಳ | Kannada Prabha

ಸಾರಾಂಶ

ನಾಗರಬೆಟ್ಟ ಏತ ನೀರಾವರಿ ಯೋಜನೆ ಕಾಮಗಾರಿ ಆರಂಭಗೊಂಡು ಏಳು ವರ್ಷವಾಗುತ್ತ ಬಂದರೂ ಪೂರ್ಣಗೊಂಡಿಲ್ಲ. ಇದರಿಂದ ಈಗಾಗಲೇ ಮಾಡಿದ ಕಾಲುವೆಗಳು ಹಾಳಾಗಿ ಹೋಗುತ್ತಿವೆ. ಈ ಬಗ್ಗೆ ಗಮನ ಹರಿಸಿ ಯೋಜನೆ ಶೀಘ್ರ ಪೂರ್ಣಗೊಳ್ಳಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಪಾಟೀಲ ಅಪ್ಪಾಜಿ ಸದನದಲ್ಲಿ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ನಾಗರಬೆಟ್ಟ ಏತ ನೀರಾವರಿ ಯೋಜನೆ ಕಾಮಗಾರಿ ಆರಂಭಗೊಂಡು ಏಳು ವರ್ಷವಾಗುತ್ತ ಬಂದರೂ ಪೂರ್ಣಗೊಂಡಿಲ್ಲ. ಇದರಿಂದ ಈಗಾಗಲೇ ಮಾಡಿದ ಕಾಲುವೆಗಳು ಹಾಳಾಗಿ ಹೋಗುತ್ತಿವೆ. ಈ ಬಗ್ಗೆ ಗಮನ ಹರಿಸಿ ಯೋಜನೆ ಶೀಘ್ರ ಪೂರ್ಣಗೊಳ್ಳಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಪಾಟೀಲ ಅಪ್ಪಾಜಿ ಸದನದಲ್ಲಿ ಒತ್ತಾಯಿಸಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಚುಕ್ಕೆಗುರುತಿನಲ್ಲಿ ಮುದ್ದೇಬಿಹಾಳ ಮತಕ್ಷೇತ್ರ ವ್ಯಾಪ್ತಿಯಲ್ಲಿನ ನಾಗರಬೆಟ್ಟ ಏತ ನೀರಾವರಿ ಯೋಜನೆಯ ಬಾಕಿ ಉಳಿದಿರುವ ಕಾಮಗಾರಿಗೆ ಅನುದಾನ ಯಾವಾಗ ಬಿಡುಗಡೆ ಮಾಡಲಾಗುವುದು ಎಂದು ಅವರು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಜಲಸಂಪನ್ಮೂಲ ಸಚಿವ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ, ಮುದ್ದೇಬಿಹಾಳ ತಾಲೂಕಿನ 3200 ಹೆಕ್ಟೇರ್ ಜಲಾಶಯದ ಹಿನ್ನೀರಿನಿಂದ ಕೃಷ್ಣಾನದಿ ನೀರು ಎತ್ತಿ ನೀರಾವರಿ ಗೊಳಪಡಿಸುವ ನಾಗರಬೆಟ್ಟ ಏತನೀರಾವರಿ ಯೋಜನೆಯ ₹170.70 ಕೋಟಿ ಅಂದಾಜು ಮೊತ್ತಕ್ಕೆ 12.9.2017 ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 3 ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಯೋಜನೆ ನಿರ್ವಹಣೆ ಸಮಿತಿ ರಚಿಸಲಾಗುವುದು. ಸಮಸ್ಯೆಗಳನ್ನು ಶೀಘ್ರ ಪೂರ್ಣಗೊಳಿಸಿ 2026 ಮಾರ್ಚ ಒಳಗೆ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಉತ್ತರಿಸಿದರು.

ಈ ವೇಳೆ ನಾಡಗೌಡರು, ಈ ಯೋಜನೆಯ ಕಾಮಗಾರಿಯಲ್ಲಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲವಾಗಿದೆ. ಇದು ಕಾಮಗಾರಿ ವಿಳಂಬಕ್ಕೆ ತೊಡಕಾಗಿದೆ. ಇನ್ನೂ ಭೂ ಸ್ವಾಧೀನ ಸಮಸ್ಯೆಯೂ ಇದೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಜಿಲ್ಲೆಯಲ್ಲಿ ವಿಜಯಪುರ ಜಲಸಂಪನ್ಮೂಲ ಇಲಾಖೆಯಡಿ ಬರುವ ಎಷ್ಟುನೀರಾವರಿ ಯೋಜನೆ ಇವೆ? ಯಾವ್ಯಾವು ಎಂದು ಶಾಸಕ ನಾಡಗೌಡರು ಪ್ರಶ್ನಿಸಿದಾಗ, ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ವತಿಯಿಂದ 10 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 3 ಯೋಜನೆಗಳು ಪೂರ್ಣಗೊಂಡಿವೆ ಹಾಗೂ 7 ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಕ್ರೀಡಾಂಣಕ್ಕೆ 10 ಎಕರೆ ನಿವೇಶನ:

ಮುದ್ದೇಬಿಹಾಳ ತಾಲೂಕು ಕ್ರೀಡಾಂಗಣ ನಿರ್ಮಿಸಲು ಗುರುತಿಸಲಾಗಿದೆಯೇ? ಹಾಗಿದ್ದಲ್ಲಿ, ಎಲ್ಲಿ ಮತ್ತು ಎಷ್ಟು ಎಕರೆ ಜಾಗ ಗುರುತಿಸಲಾಗಿದೆ ಎಂದು ಶಾಸಕಸಿ.ಎಸ್. ನಾಡಗೌಡ ಅವರು ಚುಕ್ಕೆ ಗುರುತಿನಡಿ ಕೇಳಿದ ಪ್ರಶ್ನೆಗೆ ಡಿಸಿಎಂ ಡಿ.ಕೆ.ಶಿವಕುಮಾರ ಅವರು, ಮುದ್ದೇಬಿಹಾಳದ ತಾಲೂಕಿನ ಕ್ರೀಡಾಂಗಣ ನಿರ್ಮಾಣಕ್ಕಾಗಿ ಬಿದರಕುಂದಿ ಗ್ರಾಮದ ಸರ್ವೇ ನಂ.129/1 ರಲ್ಲಿ 10 ಎಕರೆ ನಿವೇಶನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಮಂಜೂರಾಗಿರುತ್ತದೆ ಎಂದು ಉತ್ತರಿಸಿದರು.

ಇನ್ನೂ ಈ ಕ್ರೀಡಾಂಗಣ ಅಭಿವೃದ್ಧಿ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ? ಹಾಗಿದ್ದಲ್ಲಿ ಅದಕ್ಕಾಗಿ ಮೀಸಲಿಟ್ಟ ಅನುದಾನವೆಷ್ಟು? ಎಂದು ಕೇಳಿದಾಗ, ಕ್ರೀಡಾಂಗಣದ ಸುತ್ತಲೂ ಚೈನ್‌ಲಿಂಕ್ ಅಳವಡಿಸುವುದು, ಮಳೆನೀರು ಚರಂಡಿ ಸೇರಲು ಸೂಕ್ತ ವ್ಯವಸ್ಥೆ ಮಾಡವುದು, ಮಣ್ಣು ಕೊಚ್ಚಿ ಹೋಗದಂತೆ ಪಿಚ್ಚಿಂಗ್‌ ಮಾಡುವುದು, ವಾಲಿಬಾಲ್, ಖೋ-ಖೋ, ಉದ್ದ-ಜಿಗಿತ ಅಂಕಣ ನಿರ್ಮಿಸಲು ₹1.64 ಕೋಟಿ ಅನುಮೋದನೆ ನೀಡಿ, ₹1 ಕೋಟಿ ಕೆಆರ್‌ಐಡಿಎಲ್ ಸಂಸ್ಥೆಗೆ ಬಿಡುಗಡೆ ಮಾಡಲಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ