ಧಾರವಾಡ: ಇಲ್ಲಿಯ ಸಂಪಿಗೆ ನಗರ ಮೋರ್ ಬಳಿ ಭಾನುವಾರ ನಸುಕಿನ ವೇಳೆ ನಡೆದ ಲಾರಿ-ಆಟೋ ಅಪಘಾತಕ್ಕೆ ಸಂಬಂಧಿಸಿದಂತೆ ಸಂಪಿಗೆ ನಗರ, ಕೆಲಗೇರಿ, ಸಾಧನಕೇರಿ ಹಾಗೂ ಸುತ್ತಲಿನ ಬಡಾವಣೆ ನಿವಾಸಿಗಳು ಸುಮಾರು ಐದು ಗಂಟೆ ಕಾಲ ಕೆಲಗೇರಿ ಕೆರೆಯ ಸೇತುವೆ ಬಳಿ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಜೊತೆಗೆ ಇದೇ ರಸ್ತೆ ಮೂಲಕ ಕೆಎಸ್‌ಆರ್‌ಟಿಸಿ ಬಸ್ಸುಗಳು ವೇಗವಾಗಿ ಸಂಚರಿಸುತ್ತಿವೆ. ಹೊಸ ಬಸ್ ನಿಲ್ದಾಣದಿಂದ ಜರ್ಮನ್ ವೃತ್ತದ ಮೂಲಕ ಸಾಧನಕೇರಿ, ಸಂಪಿಗೆ ನಗರ ಹಾಗೂ ಕೆಲಗೇರಿ ಬೈಪಾಸ್‌ಗೆ ಹೋಗುವ ಬಸ್ಸುಗಳ ವೇಗ 80ಕ್ಕಿಂತ ಹೆಚ್ಚಿರುತ್ತದೆ. ಕಾರು, ಬೈಕು ಸವಾರರು ಬಸ್ಸಿನ ವೇಗ ನೋಡಿ ಭಯ ಪಡುವಂತಾಗಿದೆ. ಆದ್ದರಿಂದ ಈ ರಸ್ತೆಯಲ್ಲಿ ರಸ್ತೆ ತಡೆಗಳನ್ನು ಹಾಕುವುದರ ಜೊತೆಗೆ ವಾಹನಗಳ ವೇಗಕ್ಕೆ ಮಿತಿ ಹೇರಬೇಕು. ಪ್ರಮುಖವಾಗಿ ಹೊಸ ಬಸ್ ನಿಲ್ದಾಣದಿಂದ ಕೃಷಿ ವಿವಿ ಮಾರ್ಗ ಮೂಲಕ ನರೇಂದ್ರ ಬೈಪಾಸ್‌ಗೆ ಮಾರ್ಗ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಮಹಾನಗರ ಪಾಲಿಕೆ ಸೇರಿದಂತೆ ಆಡಳಿತ ವ್ಯವಸ್ಥೆ ಪ್ರತಿಭಟನೆಗೆ ಸ್ಪಂದನೆ ನೀಡದ್ದರಿಂದ ಪ್ರತಿಭಟನಾಕಾರರು ಈ ಸಾವು ನ್ಯಾಯವೇ ಎಂಬ ಹಾಡು ಹೇಳಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸ್ಥಳಕ್ಕೆ ಬಂದು ತಮ್ಮ ಮನವಿ ಬೆಂಗಳೂರಿಗೆ ಕಳುಹಿಸುವುದಾಗಿ ಪ್ರತಿಕ್ರಯಿಸಿದರು. ಪಟ್ಟು ಬಿಡದ ಪ್ರತಿಭಟನಾಕಾರರು ಸ್ಥಳಕ್ಕೆ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿ ಬರುವಂತೆ ಆಗ್ರಹಿಸಿದರು. ಮಧ್ಯಾಹ್ನ 12ರ ನಂತರ ಶಾಸಕ ಅರವಿಂದ ಬೆಲ್ಲದ ಆಗಮಿಸಿ, ಬಿಡಾಡಿ ದನಗಳ ತೆರವು, ಬಸ್ಸುಗಳ ರಸ್ತೆ ಮಾರ್ಗ ಬದಲಿಸುವ ಕುರಿತು ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು. ಸುಮಾರು ಐದು ಗಂಟೆ ಕಾಲ ರಸ್ತೆ ಬಂದ್ ಆಗಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು.