ಬಸ್‌ ಪಾಸ್‌ ಅವಧಿ ವಿಸ್ತರಣೆಗೆ ಆಗ್ರಹ

KannadaprabhaNewsNetwork |  
Published : Jun 16, 2024, 01:51 AM IST
ಶಿರಸಿಯಲ್ಲಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಬಡ ವಿದ್ಯಾರ್ಥಿಗಳು ಬಸ್ ಪಾಸ್ ಇಲ್ಲದೆ ಹಳ್ಳಿಗಳಿಂದ ನಿತ್ಯ ಕಾಲೇಜಿಗೆ ಬರಲಾಗುತ್ತಿಲ್ಲ ಎಂಬುದಾಗಿ ಅಳಲು ತೋಡಿಕೊಂಡಿದ್ದಾರೆ.

ಶಿರಸಿ: ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ಆಗಸ್ಟ್ ತಿಂಗಳಿನವರೆಗೂ ವಿಸ್ತರಿಸಿ, ದೂರದ ಊರುಗಳಿಂದ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕದ ವತಿಯಿಂದ ಶುಕ್ರವಾರ ಸಹಾಯಕ ಆಯುಕ್ತರ ಮೂಲಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಬಸ್ ಪಾಸ್ ಸಮಸ್ಯೆಯಿಂದ ವಿದ್ಯಾರ್ಥಿಗಳ ಪರಿಸ್ಥಿತಿ ಅತಂತ್ರವಾಗಿದೆ. ಅದೆಷ್ಟೋ ವಿದ್ಯಾರ್ಥಿಗಳು ಸರ್ಕಾರ ಕಲ್ಪಿಸಿರುವ ವಿದ್ಯಾರ್ಥಿ ಬಸ್ ಪಾಸ್‌ ಅನುಕೂಲ ಪಡೆದುಕೊಂಡು ದೂರದ ಹಳ್ಳಿಗಳಿಂದ ಶಾಲಾ- ಕಾಲೇಜಿಗೆ ಬಂದು ಶಿಕ್ಷಣ ಪಡೆಯುತ್ತಿದ್ದರು. ಆದರೆ ಈ ವರದಾನ ಇದೀಗ ಬಹಳಷ್ಟು ವಿದ್ಯಾರ್ಥಿಗಳ ಪಾಲಿಗೆ ಇಲ್ಲವಾಗಿದೆ. ಈಗಾಗಲೇ ಪದವಿ ಅಂತಿಮ ವರ್ಷದಲ್ಲಿರುವ ವಿದ್ಯಾರ್ಥಿಗಳ ಬಸ್ ಪಾಸ್ ಮಾರ್ಚ್ ತಿಂಗಳ ಅಂತ್ಯಕ್ಕೆ ಮುಗಿದಿತ್ತು.

ಸಾರಿಗೆ ಸಂಸ್ಥೆ ₹290 ಪಡೆದುಕೊಂಡು ಮೇ 31ರ ವರೆಗೂ ಪಾಸ್‌ನ ಅವಧಿಯನ್ನು ವಿಸ್ತರಿಸಿತ್ತು. ಆದರೆ ಪದವಿ ಕಾಲೇಜಿನ ತರಗತಿಗಳು ಚಾಲ್ತಿಯಲ್ಲಿದ್ದು, ಆಗಸ್ಟ್ ತಿಂಗಳ ಅಂತ್ಯದವರೆಗೂ ಸೆಮಿಸ್ಟರ್ ಪರೀಕ್ಷೆಗಳು ನಡೆಯಲಿವೆ. ಆದರೆ ಸಾರಿಗೆ ಸಂಸ್ಥೆ ಪಾಸ್ ವಿಸ್ತರಿಸದೆ ಇರುವುದರಿಂದ ದೂರದ ಊರುಗಳಿಂದ ಬರುವ ಸಾವಿರಾರು ವಿದ್ಯಾರ್ಥಿಗಳು ನಿತ್ಯ ನೂರಾರು ರುಪಾಯಿ ತೆತ್ತು ಕಾಲೇಜಿಗೆ ಬರಲು ಹೆಣಗಾಡುತ್ತಿದ್ದಾರೆ. ಸರ್ಕಾರಿ ಕಾಲೇಜಿನ ವಾರ್ಷಿಕ ಕಾಲೇಜು ಶುಲ್ಕಕ್ಕಿಂತಲೂ ಬಸ್ ಟಿಕೆಟ್‌ನ ಹೊರೆಯೇ ವಿದ್ಯಾರ್ಥಿಗಳಿಗೆ ಹೆಚ್ಚಾಗಿದೆ. ಈ ಕುರಿತು ಸಂಬಂಧಪಟ್ಟವರನ್ನು ವಿಚಾರಿಸಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಬಡ ವಿದ್ಯಾರ್ಥಿಗಳು ಬಸ್ ಪಾಸ್ ಇಲ್ಲದೆ ಹಳ್ಳಿಗಳಿಂದ ನಿತ್ಯ ಕಾಲೇಜಿಗೆ ಬರಲಾಗುತ್ತಿಲ್ಲ ಎಂಬುದಾಗಿ ಅಳಲು ತೋಡಿಕೊಂಡಿದ್ದಾರೆ. ನೂರಾರು ವಿದ್ಯಾರ್ಥಿಗಳು ಈ ಕಾರಣದಿಂದಲೇ ಕಾಲೇಜಿಗೆ ಗೈರಾಗುತ್ತಿದ್ದಾರೆ. ಈಗಾಗಲೇ ಸರ್ಕಾರದ ಶಕ್ತಿ ಯೋಜನೆಯಿಂದ ಮಹಿಳೆಯರು ಉಚಿತ ಬಸ್ ಪ್ರಯಾಣ ಕೈಗೊಳ್ಳುತ್ತಿದ್ದಾರೆ.

ಆದರೆ ನಿಗದಿತ ಶುಲ್ಕ ಭರಿಸಿದರೂ ನಮಗೆ ಬಸ್ ಪಾಸ್ ವಿಸ್ತರಣೆ ಸಾಧ್ಯವಾಗುತ್ತಿಲ್ಲ ಎಂದು ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಎಂಇಎಸ್ ವಾಣಿಜ್ಯ ಕಾಲೇಜಿನ ಅಂತಿಮ ವರ್ಷದ ನೂರಾರು ವಿದ್ಯಾರ್ಥಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ದರ್ಶನ್ ಹೆಗಡೆ, ಪ್ರಮುಖರಾದ ಸಂಜಯ್ ಗಾಂವಕರ್, ಶಿರಸಿ ನಗರ ಕಾರ್ಯದರ್ಶಿ ಪ್ರಸನ್ನ ಮರಾಠಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಅಜಿತ್ ದೊಡ್ಮನಿ, ವಿದ್ಯಾರ್ಥಿಗಳಾದ ಗಣೇಶ್, ಮಾರುತಿ, ಅಜಯ್, ಬಸವೇಶ್ವರ, ಅಭಿಷೇಕ್, ಪವನ್, ಚಂದ್ರಶೇಖರ್, ಚರಣ್, ಜಗನ್ನಾಥ ಸೇರಿದಂತೆ ಇನ್ನೂ ಹತ್ತಾರು ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ