ಖಾಲಿಯಿರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹ

KannadaprabhaNewsNetwork |  
Published : Dec 11, 2025, 03:15 AM IST
ವಿಜಯಪುರ | Kannada Prabha

ಸಾರಾಂಶ

ರಾಜ್ಯದ ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಖಾಲಿಯಿರುವ ಬಗ್ಗೆ ಮತ್ತು ನೇಮಕಾತಿ ಮಾಡಿಕೊಳ್ಳುವ ಕುರಿತಂತೆ ಗಮನಸೆಳೆದು ಖಾಲಿಯಿರುವ ಸರ್ಕಾರಿ ಹುದ್ದೆಗಳನ್ನು ಸಮರೋಪಾದಿಯಲ್ಲಿ ಭರ್ತಿ ಮಾಡಬೇಕೆಂದು ಶಾಸಕ ಯತ್ನಾಳ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಅರ್ಹ ಯುವಕ ಯುವತಿಯರಿಗೆ ಉದ್ಯೋಗ ನೀಡಬೇಕಾಗಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಹಣವನ್ನೆಲ್ಲ ಬಳಸಿ, ಉದ್ಯೋಗಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ 400ರ ಮೂಲಕ ರಾಜ್ಯದ ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಖಾಲಿಯಿರುವ ಬಗ್ಗೆ ಮತ್ತು ನೇಮಕಾತಿ ಮಾಡಿಕೊಳ್ಳುವ ಕುರಿತಂತೆ ಗಮನಸೆಳೆದು ಖಾಲಿಯಿರುವ ಸರ್ಕಾರಿ ಹುದ್ದೆಗಳನ್ನು ಸಮರೋಪಾದಿಯಲ್ಲಿ ಭರ್ತಿ ಮಾಡಬೇಕೆಂದು ಒತ್ತಾಯಿಸಿದರು.

ಸದರಿ ಪ್ರಶ್ನೆಗೆ ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ 2,84,861 ಹುದ್ದೆಗಳು ಖಾಲಿಯಿದ್ದು, ಆರ್ಥಿಕ ಇಲಾಖೆ 24,300 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅನುಮೋದನೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲಿಖಿತ ಉತ್ತರ ನೀಡುವ ಮೂಲಕ ಖಾಲಿ ಹುದ್ದೆಗಳ ಪೈಕಿ ಶೇ.9ರಷ್ಟು ಮಾತ್ರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕೆ ಸರ್ಕಾರ ಆರ್ಥಿಕವಾಗಿ ಶಕ್ತವಾಗಿದೆ ಎಂದು ಒಪ್ಪಿಕೊಂಡಿದೆ ಎಂದಿದ್ದಾರೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದರಲ್ಲೇ 79,694 ಹುದ್ದೆಗಳು ಖಾಲಿ ಇರುವುದು ಉಲ್ಲೇಖಾರ್ಹ. ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಸಾವಿರಾರು ಉದ್ಯೋಗಾಂಕ್ಷಿಗಳ ವಯೋಮಿತಿ ಮೀರುತ್ತಿದ್ದರೆ, ಇನ್ನೊಂದು ಕಡೆ ಸರ್ಕಾರದ ವಿಳಂಬ ಧೋರಣೆಯಿಂದ, ಕರ್ನಾಟಕ ಲೋ(ಪ)ಕ ಸೇವಾ ಆಯೋಗ ಎಂಬ ಭ್ರಷ್ಟ ನೇಮಕಾತಿ ಸಂಸ್ಥೆಯಿಂದ ಅರ್ಹ ಅಭ್ಯರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಅದೇ ರೀತಿ ಅನೇಕ ವರ್ಷಗಳಿಂದ ನೇಮಕಾತಿಯಾಗದೇ ನಿರುದ್ಯೋಗಿ ಆಗಿರುವ ಬಿ.ಪಿ.ಎಡ್ ಪಧವಿದರರಿಗೂ ಬಿ.ಎಡ್ ಪದವಿದರರಂತೆ ವಾರ್ಡನ್ ಅಥವಾ ಪರ್ಯಾಯ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವ ಕುರಿತ ಶಾಸಕರ ಪ್ರಶ್ನೆಗೆ ಸದರಿ ಪ್ರಸ್ತಾವನೆ ಸರ್ಕಾರದ ಮುಂದಿರುವುದಿಲ್ಲವೆಂದು ಉತ್ತರಿಸಿದೆ. ಸರ್ಕಾರ ಅವೈಜ್ಞಾನಿಕ ಯೋಜನೆಗಳನ್ನು ನಿಲ್ಲಿಸಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಂಡು, ಆಡಳಿತಕ್ಕೆ ಚುರುಕು ನೀಡಬೇಕು ಹಾಗೂ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ನೀಡಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಯತ್ನಾಳ ಜಿಲ್ಲೆ ಜನತೆ ಕ್ಷಮೆಯಾಚಿಸಲಿ
ಅಧಿವೇಶನದಲ್ಲೇ ಒಳಮೀಸಲಾತಿ ಮಸೂದೆ ಮಂಡನೆ