ಬಿತ್ತನೆ ಬೀಜಗಳಿಗೆ ಏಕರೂಪ ದರ ನಿಗದಿಗೊಳಿಸುವಂತೆ ಆಗ್ರಹ

KannadaprabhaNewsNetwork |  
Published : May 20, 2026, 12:45 AM IST
ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೆಕ್ಕೆಜೋಳ ಬಿತ್ತನೆ ಬೀಜಕ್ಕೆ ಎಂಎಸ್‌ಪಿ ದರ ನಿಗದಿಪಡಿಸುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ರೈತ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಮೆಕ್ಕೆಜೋಳ ಬಿತ್ತನೆ ಬೀಜಕ್ಕೆ ಗರಿಷ್ಠ ಮಾರಾಟ ದರ ನಿಗದಿಪಡಿಸುವುದು ಹಾಗೂ ಎಲ್ಲ ಕೃಷಿ ಬೆಳೆಗಳ ಬಿತ್ತನೆ ಬೀಜಗಳಿಗೆ ಏಕರೂಪ ದರ ನಿಗದಿಗೊಳಿಸುವಂತೆ ಆಗ್ರಹಿಸಿ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ರೈತ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಹಾವೇರಿ: ಮೆಕ್ಕೆಜೋಳ ಬಿತ್ತನೆ ಬೀಜಕ್ಕೆ ಗರಿಷ್ಠ ಮಾರಾಟ ದರ ನಿಗದಿಪಡಿಸುವುದು ಹಾಗೂ ಎಲ್ಲ ಕೃಷಿ ಬೆಳೆಗಳ ಬಿತ್ತನೆ ಬೀಜಗಳಿಗೆ ಏಕರೂಪ ದರ ನಿಗದಿಗೊಳಿಸುವಂತೆ ಆಗ್ರಹಿಸಿ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ರೈತ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಪ್ರತಿವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮು ಆರಂಭವಾಗುತ್ತಿದ್ದಂತೆ ಖಾಸಗಿ ಕಂಪನಿಗಳು ಮೆಕ್ಕೆಜೋಳ ಬಿತ್ತನೆ ಬೀಜಕ್ಕೆ ದುಬಾರಿ ದರ ನಿಗದಿಪಡಿಸಿ ಆರ್ಥಿಕವಾಗಿ ರೈತರನ್ನು ಶೋಷಣೆ ಮಾಡುತ್ತಿವೆ. ಖಾಸಗಿ ಕಂಪನಿ ತಮಗಿಷ್ಟ ಬಂದಂತೆ ಬೆಲೆ ಏರಿಸುತ್ತಿರುವುದು ಖಂಡನೀಯ. ಕೃಷಿ ವೆಚ್ಚ ಕಡಿಮೆ ಮಾಡಲು ಬಿತ್ತನೆ ಬೀಜದ ದರ ನಿಗದಿಪಡಿಸುವುದು ಅನಿವಾರ್ಯವಾಗಿದೆ. ಸರ್ಕಾರ ಮಧ್ಯ ಪ್ರವೇಶಿಸಿ ಗರಿಷ್ಠ ಮಾರಾಟ ದರ (ಎಂಎಸ್‌ಪಿ) ನಿಗದಿಪಡಿಸಬೇಕೆಂದು ಒತ್ತಾಯಿಸಿದರು.ಗೋವಿನಜೋಳದ ಒಂದೇ ತಳಿಯ ಬೀಜಗಳನ್ನು ಬೇರೆ ಬೇರೆ ಪ್ಯಾಕೇಟ್ ರಚಿಸಿ, ಅದಕ್ಕೆ ಬೇರೆ ಹೆಸರಿಟ್ಟು ಮೂರ‍್ನಾಲ್ಕು ದರದಲ್ಲಿ ಮಾರಾಟ ಮಾಡುತ್ತಾರೆ. ರಾಜ್ಯ ಅಥವಾ ದೇಶಾದ್ಯಂತ ಒಂದೇ ತಳಿಯ ಬೀಜಗಳಿಗೆ ಒಂದೇ ದರ ಇರುವಂತೆ ಸರ್ಕಾರ ನಿಯಮ ರೂಪಿಸಬೇಕು. ಜತೆಗೆ ಎಲ್ಲ ಬೀಜದ ತಳಿಗಳು ಕಡ್ಡಾಯವಾಗಿ ನೋಂದಣಿ ಮಾಡಿರಬೇಕು. ಇಲ್ಲದಿದ್ದರೆ ಇಳುವರಿ ಸರಿಯಾಗಿ ಬಾರದೆ ಇದ್ದಾಗ ಕಂಪನಿ ವಿರುದ್ಧ ರೈತರು ಕೇಸ್ ದಾಖಲಿಸಿದರೆ ಕೇಸ್ ದಾಖಲಿಸಿದ ಕಂಪನಿ ನೋಂದಣಿ ಆಗಿರುವುದಿಲ್ಲ. ಹಾಗಾಗಿ ಎಲ್ಲಾ ಕಂಪನಿಯ ಬೀಜಗಳು ಮಾರುಕಟ್ಟೆಗೆ ಬರುವ ಮುನ್ನ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕೆಂದು ಆಗ್ರಹಿಸಿದರು.ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಬಿತ್ತನೆ ಬೀಜಗಳ ಗುಣಮಟ್ಟದ ಗ್ಯಾರಂಟಿ ಪರಿಶೀಲಿಸಲು ಎಲ್ಲಾ ತಳಿಯ ಬೀಜಗಳ ಪ್ಯಾಕೆಟ್ ಮೇಲೆ ಮೊಳಕೆ ಪ್ರಮಾಣದ ಜತೆಗೆ ಆನುವಂಶಿಕ ಶುದ್ಧತೆ ಮತ್ತು ಇಳುವರಿ ಪ್ರಮಾಣದ ಲೇಬಲ್ ಅಳವಡಿಸಬೇಕು. ಬೆಳೆ ಹಾನಿಯಾದರೆ, ಇಳುವರಿ ಸರಿಯಾಗಿ ಬಾರದಿದ್ದರೆ, ಕಂಪನಿಗಳೇ ನೇರ ಹೊಣೆ ಹೊತ್ತು ಪರಿಹಾರ ಕೊಡಬೇಕು. ಕೃಷಿ ಅಧಿಕಾರಿಗಳು ಪರಿಶೀಲನೆ ನಡೆಸಿದ 20 ದಿನಗಳ ಒಳಗಾಗಿ ತ್ವರಿತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಚ್.ಎಚ್.ಮುಲ್ಲಾ, ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ, ಮರಿಗೌಡ ಪಾಟೀಲ, ಚನ್ನಪ್ಪ ಮರಡೂರ, ಶಂಕ್ರಣ್ಣ ಶಿರಗಂಬಿ, ಶಿವಯೋಗಿ ಹೊಸಗೌಡ್ರ, ಶಾಂತನಗೌಡ ಪಾಟೀಲ, ಸುಭಾಸ ಬೆಣ್ಣಿಹಟ್ಟಿ ಸೇರಿದಂತೆ ಇತರರು ಇದ್ದರು. ಕೃಷಿ ಗ್ರಾಹಕ ನ್ಯಾಯಾಲಯ ಸ್ಥಾಪಿಸಿ: ಪ್ರಮುಖವಾಗಿ ನಕಲಿ ಅಥವಾ ನಿಷೇಧಿತ ಬೀಜಗಳನ್ನು ಮಾರಾಟ ಮಾಡುವ ಜಾಲಕ್ಕೆ ಕೇವಲ ಸಣ್ಣ ದಂಡ ವಿಧಿಸದೆ, ಕಂಪನಿ ಮಾಲೀಕರು ಮತ್ತು ವಿತರಕರಿಗೆ ಕಠಿಣ ಜೈಲು ಶಿಕ್ಷೆ ಹಾಗೂ ಸಗಟು ಲೈಸೆನ್ಸ್ ರದ್ದುಪಡಿಸುವ ಕಠಿಣ ನಿಯಮ ಇರಬೇಕು. ಬೀಜ ವಂಚನೆಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ಜಿಲ್ಲಾ ಮಟ್ಟದಲ್ಲಿ ವಿಶೇಷ ಕೃಷಿ ಗ್ರಾಹಕ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಬಿತ್ತನೆ ಬೀಜದ ಅಸಲಿತನ, ದರ ನಿಗದಿ ಬಗ್ಗೆ ಡಿಜಿಟಲ್ ಪತ್ತೆ ಹಚ್ಚುವ ನಿಟ್ಟಿನಲ್ಲಿ ಕ್ಯೂ ಆರ್ ಕೋಡ್ ನಮೂದಿಸಬೇಕೆಂದು ಮಲ್ಲಿಕಾರ್ಜುನ ಬಳ್ಳಾರಿ ಒತ್ತಾಯಿಸಿದರು.ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಕಾಯಿದೆ-1955ರಂತೆ ಬಿ.ಟಿ.ಹತ್ತಿ ಬಿತ್ತನೆ ಬೀಜಕ್ಕೆ ಗರಿಷ್ಠ ಮಾರಾಟ ದರ ನಿಗದಿಪಡಿಸಿದ್ದು, ವಿನಾಕಾರಣ ಹೆಚ್ಚಿನ ದರ ನಿಗದಿಪಡಿಸಿ ರೈತರನ್ನು ಶೋಷಿಸುವುದು ತಪ್ಪಿಸಿದೆ. ಅದೇರೀತಿ ಮೆಕ್ಕೆಜೋಳ ಬಿತ್ತನೆ ಬೀಜದಲ್ಲೂ ಸಹ (ಪ್ರತಿ 4 ಕೆ.ಜಿ ಪ್ಯಾಕೆಟ್) 600-3500 ರು.ಗೆ ಮಾರಾಟವಾಗುತ್ತಿದ್ದು, ಗರಿಷ್ಠ ಮಾರಾಟ ದರ ನಿಗದಿಪಡಿಸುವ ಮೂಲಕ ರೈತರಿಗಾಗುವ ಆರ್ಥಿಕ ಶೋಷಣೆ ತಡೆಯಬೇಕು ಎಂದು ರೈತಸಂಘ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲೂರು ಬಳ್ಳಾರಿಯಲ್ಲಿ ಮಳೆ-ಗುಡುಗಿನ ಆರ್ಭಟ
ಮಾಜಿ ಪ್ರಧಾನಿ ದೇವೇಗೌಡ ರೈತರ ಧ್ವನಿ: ಎಂ.ವೈ. ಮುಧೋಳ