ಹೊಸಪೇಟೆ: ನಗರದಲ್ಲಿ ಸರ್ಕಾರಿ ಮಾಲೀಕತ್ವದಲ್ಲಿರುವ ಸ್ಲಂ ಗಳಲ್ಲಿ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ಒದಗಿಸಬೇಕು ಎಂದು ಕೊಳಗೇರಿ ಮಂಡಳಿ ಕಚೇರಿ ಅಧಿಕಾರಿ ಶಿವಕುಮಾರ್ ಅವರನ್ನು ಸ್ಲಂ ಜನರ ಸಂಘಟನೆ- ಕರ್ನಾಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಶುಕ್ರವಾರ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಶಿವಕುಮಾರ, ಈಗಾಗಲೇ 7 ಸಾವಿರಕ್ಕೂ ಹೆಚ್ಚು ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಇನ್ನು 2015 ಹಕ್ಕು ಪತ್ರಗಳು ವಿತರಿಸಲು ಬಾಕಿ ಇದ್ದು ಇವುಗಳಲ್ಲಿ ಸರ್ಕಾರಿ ಮಾಲೀಕತ್ವದಲ್ಲಿರುವ 35 ಸ್ಲಂಗಳ ಪೈಕಿ 24 ಸ್ಲಂಗಳು ಬೋರ್ಡ್ ಗೆ ಹಸ್ತಾಂತರಗೊಂಡಿವೆ. 5 ಸ್ಲಂಗಳು ನಗರಸಭೆಯ ಮಾಲೀಕತ್ವದಲ್ಲಿದ್ದು ಹತ್ತಾಂತರದ ಆದೇಶ ಸಿಕ್ಕಿದೆ. ಇನ್ನು 6 ಸ್ಲಂಗಳು ಸರ್ಕಾರದ ವಿವಿಧ ಇಲಾಖೆಗಳ ಮಾಲೀಕತ್ವದಲ್ಲಿದ್ದು ಅವುಗಳನ್ನು ಸ್ಲಂ ಬೋರ್ಡ್ ಗೆ ಹಸ್ತಾಂತರಿಸಿ ಪಹಣಿಯಲ್ಲಿ ಸ್ಲಂ ಬೋರ್ಡ್ ಹೆಸರನ್ನು ನಮೂದಿಸಲು ಮಾನ್ಯ ಜಿಲ್ಲಾಧಿಕಾರಿ ಅವರಿಗೆ ಮನವಿಯನ್ನು ಸಲ್ಲಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಚ್.ಶೇಷು, ಪ್ರಧಾನ ಕಾರ್ಯದರ್ಶಿ ಎನ್. ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಗುತ್ತಿ ಕೈಲಾಸ್, ಮಹಿಳಾ ಘಟಕದ ಉಪಾಧ್ಯಕ್ಷೆ ನೂರ್ ಜಹಾನ್, ಪ್ರಧಾನ ಕಾರ್ಯದರ್ಶಿ, ಬೀನಾರೂಪಲತಾ, ಮುಖಂಡರಾದ ಕರಿಯಪ್ಪ, ಹೊನ್ನಪ್ಪ ಹಾಗೂ ಪೀರ್ ಸಾಬ್ ಮತ್ತಿತರರಿದ್ದರು.
ಹೊಸಪೇಟೆಯ ಕೊಳಗೇರಿ ಮಂಡಳಿ ಕಚೇರಿ ಅಧಿಕಾರಿ ಶಿವಕುಮಾರ್ ಅವರನ್ನು ಸ್ಲಂ ಜನರ ಸಂಘಟನೆ- ಕರ್ನಾಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಸ್ಲಂ ನಿವಾಸಿಗಳಿಗೆ ಹಕ್ಕುಪತ್ರಗಳ ವಿತರಣೆಗೆ ಶುಕ್ರವಾರ ಒತ್ತಾಯಿಸಿದರು.