ಚಿತ್ರದುರ್ಗ: ಎಚ್.ಕಾಂತರಾಜ್ ಆಯೋಗದ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ತಕ್ಷಣವೇ ಸ್ವೀಕರಿಸಿ ಜಾರಿಗೊಳಿಸುವಂತೆ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದೆ.
ಶೋಷಣೆಗೆ ಒಳಪಟ್ಟ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಬೇಕೆಂದು ಹಿಂದುಳಿದ ಆಯೋಗ ರಚಿಸಿ ಹಿಂದುಳಿದ ಜಾತಿಗಳ ಗುರುತಿಸಿ ಸೂಕ್ತ ಮೀಸಲಾತಿ ಜಾರಿ ಮಾಡಬೇಕೆಂದು ಡಾ.ಅಂಬೇಡ್ಕರ್ ಸಂವಿಧಾನದ ಪರಿಚ್ಛೇದದ 15(4) 16(4)ರ ಹಾಗೂ ಪರಿಚ್ಛೇದದ 340ರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿಸಿದ್ದಾರೆ. ಹಾಗಾಗಿ ಹಿಂದುಳಿದ ಜಾತಿ, ವರ್ಗದವರಿಗೆ ನೀಡುತ್ತಿರುವ ಮೀಸಲಾತಿ ಭಿಕ್ಷೆಯಲ್ಲ ಅದು ಅವರ ಸಂವಿಧಾನ ಹಕ್ಕು ಎನ್ನುವುದ ನಿಯೋಗ ಸಿಎಂಗೆ ಮನವರಿಕೆ ಮಾಡಿಕೊಟ್ಟಿತು.
ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ 2014 ಜ.20ರಂದು ಎಚ್.ಕಾಂತರಾಜ ಅವರ ನೇತೃತ್ವದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನೇಮಕಗೊಂಡು 55 ಮಾನದಂಡಗಳನ್ನು ಅಳವಡಿಸಿ ಹಿಂದುಳಿದ ವರ್ಗಗಳ ಜಾತಿ, ರಾಜಕೀಯ ಅಧಿಕಾರ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಇತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ವರದಿ ಕೋರಲಾಗಿತ್ತು. ಅದರಂತೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ 2018ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರಕ್ಕೆಸಲ್ಲಿಸುವ ಸಂದರ್ಭದಲ್ಲಿ ರಾಜಕೀಯ ಪ್ರಕ್ಷುಬ್ಧತೆ ಮತ್ತು ವಿಧಾನಸಭೆ ಚುನಾವಣೆಯಿಂದಾಗಿ ಹಾಗೇ ಉಳಿಯಿತು.ನಂತರ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಕಾಂತರಾಜ ಆಯೋಗದ ವರದಿಯ ಬಗ್ಗೆ ಯಾವುದೇ ಚಕಾರವೆತ್ತದೆ ಜಾಣ ಮೌನ ಪ್ರದರ್ಶಿಸಿ ಹಾಗೆಯೇ ಶೈತ್ಯಾಗಾರದಲ್ಲಿ ಉಳಿಯುವಂತೆ ಮಾಡಿದರು. ಇದು ಹಿಂದುಳಿದ ಹಾಗೂ ಅತಿ ಹಿಂದುಳಿದ ಜಾತಿಗಳಿಗೆ ಮಾಡಿದ ಅಪಮಾನ. ಹಿಂದುಳಿದ ಜಾತಿಗಳ ಒಟ್ಟು ಮತ ಪಡೆದು ಹಿಂದುಳಿದ ಜಾತಿಗಳ ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಇಂತಹ ಕೃತ್ಯಗಳು ಜಾತಿ ವರ್ಗಗಳಿಗೆ ಮಾಡಿದ ಮಹಾ ದ್ರೋಹ ಮತ್ತು ಅನ್ಯಾಯ.
ಇತ್ತೀಚೆಗೆ ಬಿಹಾರ ರಾಜ್ಯ ಸರ್ಕಾರ ಕೇವಲ ಒಂದೇ ಒಂದು ವರ್ಷದಲ್ಲಿ ಜಾತಿ ಗಣತಿ ಸಮೀಕ್ಷೆ ಮಾಡಿ ವರದಿ ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಕಾಂತರಾಜ ಆಯೋಗದ ವರದಿ ಸಲ್ಲಿಕೆಗೆ ಒತ್ತಡ ಹಚ್ಚಾಗುತ್ತಿದ್ದಂತೆ ಒಂದೆರೆಡು ಬಲಾಢ್ಯ ಜಾತಿಗಳ ಮುಖಂಡರು ವರದಿ ಜಾರಿಯಾಗದಂತೆ ಅನೇಕ ಷಡ್ಯಂತ್ರಗಳನ್ನು ಹೆಣೆಯುತ್ತಿದ್ದಾರೆ. ಮುಖ್ಯಮಂತ್ರಿಗಳು ಜಯಪ್ರಕಾಶ ಹೆಗಡೆಯವರ ಮೇಲೆ ಒತ್ತಡ ಹೇರಿ ವರದಿಯನ್ನು ಶೀಘ್ರವೇ ಸ್ವೀಕರಿಸಿ ಜಾರಿಗೊಳಿಸಬೇಕೆಂದು ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.
ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಹಡಪದ ಗುರುಪೀಠದ ಜಗದ್ಗುರು ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ, ಕುಂಬಾರ ಗುರುಪೀಠದ ಬಸವ ಗುಂಡಯ್ಯ ಸ್ವಾಮೀಜಿ ಮುಖ್ಯಮಂತ್ರಿಗಳ ಭೇಟಿ ಮಾಡಿದ ನಿಯೋಗದಲ್ಲಿದ್ದರು.