ಕನ್ನಡಿಗರ ನೌಕರಿಗಾಗಿ ಮಹಿಷಿ ವರದಿ ಮಂಡಿಸುವಂತೆ ಒತ್ತಾಯ

KannadaprabhaNewsNetwork |  
Published : Oct 28, 2026, 03:45 AM ISTUpdated : Oct 28, 2026, 05:10 AM IST
jobs

ಸಾರಾಂಶ

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಸೂಕ್ತ ಕಾನೂನು ರೂಪಿಸಬೇಕು. ನ.1ರ ಕನ್ನಡ ರಾಜ್ಯೋತ್ಸವದಂದು ಈ ಕುರಿತು ಅಧಿಕೃತ ಘೋಷಣೆ ಮಾಡಬೇಕೆಂದು ಕರ್ನಾಟಕ ವಿಕಾಸ ರಂಗ ಸರ್ಕಾರವನ್ನು ಒತ್ತಾಯಿಸಿದೆ.

ಬೆಂಗಳೂರು : ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಸೂಕ್ತ ಕಾನೂನು ರೂಪಿಸಬೇಕು. ನ.1ರ ಕನ್ನಡ ರಾಜ್ಯೋತ್ಸವದಂದು ಈ ಕುರಿತು ಅಧಿಕೃತ ಘೋಷಣೆ ಮಾಡಬೇಕೆಂದು ಕರ್ನಾಟಕ ವಿಕಾಸ ರಂಗ ಸರ್ಕಾರವನ್ನು ಒತ್ತಾಯಿಸಿದೆ.

ಮಂಗಳವಾರ ಈ ಕುರಿತು ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಯವರ ಅಧಿಕೃತ ಕಚೇರಿ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಕರ್ನಾಟಕ ವಿಕಾಸ ರಂಗದ ರಾಜ್ಯಾಧ್ಯಕ್ಷ ವ.ಚ. ಚನ್ನೇಗೌಡ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ.

ಐಟಿ, ಬಿಟಿ ಸೇರಿ ಖಾಸಗಿ ರಂಗದ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ 14 ಅಂಶಗಳನ್ನು ಒಳಗೊಂಡ ಪರಿಷ್ಕೃತ ವರದಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ 2017ರ ಫೆಬ್ರವರಿ 1ರಂದೇ ಸರ್ಕಾರಕ್ಕೆ ಸಲ್ಲಿಸಿತ್ತು. ಅಂದಿನಿಂದಲೂ ಈ ವರದಿ ಜಾರಿಗಾಗಿ ಕನ್ನಡಪರ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸುತ್ತಿವೆ. ಆದರೆ ಈವರೆಗೂ ಸಾಧ್ಯವಾಗದಿರುವುದು ಕನ್ನಡಿಗರ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಾನೂನು ಜಾರಿಗೆ ಹಿಂದೇಟು ಹಾಕುತ್ತಿರುವುದು ಕನ್ನಡಿಗರ ದುರ್ದೈವ

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಈ ಪರಿಷ್ಕೃತ ವರದಿಯನ್ನು ಸದನದಲ್ಲಿ ಮಂಡಿಸಿ ಕಾನೂನು ರೂಪಿಸುವುದಾಗಿ ಹೇಳಿ, ತಕ್ಷಣವೇ ಅದನ್ನು ಹಿಂಪಡೆದಿದ್ದರು. ಬಹುರಾಷ್ಟ್ರೀಯ ಕಂಪನಿಗಳಿಗೆ ನೆಲ, ಜಲ, ವಿದ್ಯುತ್ ಹಾಗೂ ತೆರಿಗೆ ವಿನಾಯಿತಿಗಳನ್ನು ನೀಡಿ ಪ್ರೋತ್ಸಾಹಿಸುವ ಸರ್ಕಾರಗಳು, ಕನ್ನಡ ನೆಲದ ಮಕ್ಕಳಿಗೆ ಉದ್ಯೋಗ ಕಡ್ಡಾಯಗೊಳಿಸುವ ಕಾನೂನು ಜಾರಿಗೆ ಹಿಂದೇಟು ಹಾಕುತ್ತಿರುವುದು ಕನ್ನಡಿಗರ ದುರ್ದೈವ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವರದಿ ಮಂಡಿಸಿ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡುವ ನಿಟ್ಟಿನಲ್ಲಿ ಬಲವಾದ ಕಾನೂನು ರೂಪಿಸಬೇಕು ಮತ್ತು ನ.1 ರೊಳಗೆ ಈ ಕುರಿತು ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಜಿಬಿಎ ಹೆಸರು ಬದಲಾಗಲಿ:

ನಾಡಪ್ರಭು ಕೆಂಪೇಗೌಡ ಅವರು ನಿರ್ಮಿಸಿದ ಕಲ್ಯಾಣ ನಗರಿ ಬೆಂಗಳೂರಿಗೆ ಗ್ರೇಟರ್‌ ಬೆಂಗಳೂರು ಅಥಾರಿಟಿ ಎಂಬ ಆಂಗ್ಲ ಹೆಸರನ್ನು ಇಟ್ಟಿರುವುದು ಕನ್ನಡತನಕ್ಕೆ ಅಪಚಾರವೆಸಗಿದಂತೆ. ಮುಂಬೈ ಮತ್ತು ಚೆನ್ನೈನಂಥ ನಗರಗಳು ಆ ರಾಜ್ಯದ ಅಧಿಕೃತ ಮತ್ತು ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡಿವೆ. ಬೃಹನ್ಮುಂಬೈ ಮಹಾನಗರ ಪಾಲಿಕೆ, ಚೆನ್ನೈ ಪ್ರಾಧಿಕಾರವನ್ನು ‘ಪೆರುನಗರ ಚೆನ್ನೈಮಾನಗರ್ರಾಟ್ಟಿ’ ಎಂದು ಹೆಸರಿಸಲಾಗಿದೆ. ಆದ್ದರಿಂದ ಕನ್ನಡಾಭಿಮಾನದ ಸಂಕೇತವಾಗಿ ಜಿಬಿಎಗೆ ‘ಬೃಹತ್‌ ಬೆಂಗಳೂರು ಪ್ರಾಧಿಕಾರ’ ಎಂದು ನಾಮಕರಣ ಮಾಡಬೇಕು. ಈ ಕುರಿತು ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನಕೈಗೊಂಡು ಆದೇಶಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮಹಿಳೆ, ಮಕ್ಕಳ ಸುರಕ್ಷತೇಲಿ ಬೆಂಗ್ಳೂರು 1ನೇ ಸ್ಥಾನ : ಸೀಮಂತ್‌
ಬೆಂಗಳೂರು ಅಭಿವೃದ್ಧಿಗೆ 1 ಲಕ್ಷ ಕೋಟಿ ಬೇಕು : ಡಿಕೆಶಿ