ಎಂಎಲ್ಸಿ ಎಲೆಕ್ಷನ್‌: ರಂಗನಾಥ್‌ಗೆ ಜಯ, 6ನೇ ಬಾರಿ ಸ್ಪರ್ಧಿಸಿದ್ದ ಪುಟ್ಟಣ್ಣಗೆ ಸೋಲು

KannadaprabhaNewsNetwork |  
Published : Oct 28, 2026, 03:45 AM ISTUpdated : Oct 28, 2026, 05:32 AM IST
Karnataka MLC election

ಸಾರಾಂಶ

ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ 5 ಬಾರಿ ಆಯ್ಕೆಯಾಗಿ 6ನೇ ಬಾರಿ ಗೆಲ್ಲುವ ಕನಸು ಕಂಡಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ ಅವರಿಗೆ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಎ.ಪಿ.ರಂಗನಾಥ್‌ ಭರ್ಜರಿ ಗೆಲುವು ಸಾಧಿಸಿ ಸೋಲಿನ ರುಚಿ ತೋರಿಸಿದ್ದಾರೆ.

ಬೆಂಗಳೂರು : ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ 5 ಬಾರಿ ಆಯ್ಕೆಯಾಗಿ 6ನೇ ಬಾರಿ ಗೆಲ್ಲುವ ಕನಸು ಕಂಡಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ ಅವರಿಗೆ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಎ.ಪಿ.ರಂಗನಾಥ್‌ ಭರ್ಜರಿ ಗೆಲುವು ಸಾಧಿಸಿ ಸೋಲಿನ ರುಚಿ ತೋರಿಸಿದ್ದಾರೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಪುಟ್ಟಣ್ಣ 3 ಬಾರಿ ಜೆಡಿಎಸ್‌, ಒಮ್ಮೆ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಸೇರಿ ಒಟ್ಟು 5 ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 6ನೇ ಬಾರಿ ಗೆದ್ದು ಮೇಲ್ಮನೆ ಪ್ರವೇಶಿಸುವ ಅತ್ಯುತ್ಸಾಹದಲ್ಲಿದ್ದ ಪುಟ್ಟಣ್ಣ ಅವರಿಗೆ ತೀವ್ರ ಮುಖಭಂಗವಾಗಿದೆ. ರಂಗನಾಥ್‌ ಅವರು ಈ ಹಿಂದೆ 2 ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಇದೇ ಪುಟ್ಟಣ್ಣ ವಿರುದ್ಧ ಸೋಲುಂಡಿದ್ದರು. ಈಗ 3ನೇ ಬಾರಿಗೆ ಗೆಲುವಿನ ನಗೆ ಬೀರಿದ್ದಾರೆ.

ಮಂಗಳವಾರ ಡಾ.ಬಿ.ಆರ್‌.ಅಂಬೇಡ್ಕರ್‌ ವೀದಿಯ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ರಂಗನಾಥ್‌ ಅವರು ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ವಿರುದ್ಧ 908 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

1,857 ಮತ ತಿರಸ್ಕೃತ:

ಅ.23ರಂದು ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು 27,405 ಶಿಕ್ಷಕ ಮತದಾರರ ಪೈಕಿ 22,468 (ಶೇ.81.98) ಮಂದಿ ಮತ ಚಲಾಯಿಸಿದ್ದರು. ಮತ ಎಣಿಕೆ ವೇಳೆ 21,056 ಮತಗಳು ಮಾನ್ಯವಾಗಿದ್ದು, 1,857 ಮತಗಳು ತಿರಸ್ಕೃತಗೊಂಡಿವೆ. ಈ ಮಾನ್ಯಗೊಂಡ ಮತಗಳ ಪೈಕಿ ರಂಗನಾಥ್‌ 10,810 ಮತಗಳು ಪಡೆದರೆ, ಪುಟ್ಟಣ್ಣ 9,902 ಮತ ಪಡೆದರು. ವಿವಿಧ ಸುತ್ತಗಳ ಮತ ಎಣಿಕೆಯಲ್ಲಿ ಮೊದಲ ಪ್ರಾಶಸ್ತ್ಯದ ಮತ ಎಣಿಕೆ ಅಂತ್ಯದಲ್ಲಿ ಎ.ಪಿ.ರಂಗನಾಥ್‌ 908 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣಾ ಕಣದಲ್ಲಿ ರಂಗನಾಥ್‌, ಪುಟ್ಟಣ್ಣ ಸೇರಿದಂತೆ ಒಟ್ಟು 6 ಅಭ್ಯರ್ಥಿಗಳಿದ್ದರು. ಈ ಪೈಕಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಡಾ.ಜಿ.ಆರ್‌.ಹೆಬ್ಬೂರು 94, ಪಕ್ಷೇತರ ಅಭ್ಯರ್ಥಿಗಳಾದ ಉಮೇಶ್‌ಬಾಬು ಪಿಳ್ಳೇಗೌಡ 215, ಬಿ.ಎಸ್‌.ನಾಗರಾಜು 11 ಹಾಗೂ ಡಾ.ಎನ್‌.ಲಕ್ಷ್ಮಣಸ್ವಾಮಿ 24 ಮತಗಳನ್ನು ಪಡೆದಿದ್ದಾರೆ.ಮತ ಎಣಿಕೆ ಮುಗಿದು ಫಲಿತಾಂಶ ಪ್ರಕಟಗೊಂಡ ಬಳಿಕ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿಗಳೂ ಆಗಿರುವ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ವಿಜೇತ ಅಭ್ಯರ್ಥಿ ರಂಗನಾಥ್‌ ಅವರಿಗೆ ಪ್ರಮಾಣ ಪತ್ರ ವಿತರಿಸಿದರು.

ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರ ಸಂಭ್ರಮ:

ಎನ್‌ಡಿಎ ಮೈತ್ರಿ ಅಭ್ಯರ್ಥಿ ರಂಗನಾಥ್‌ ಪ್ರತಿ ಸುತ್ತಿನಲ್ಲಿ ಮುನ್ನಡೆ ಸಾಧಿಸುವಾಗ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಹೊರಗೆ ಸಂಭ್ರಮಿಸುತ್ತಿದ್ದರು. ಕೊನೆಯ ಸುತ್ತಿನಲ್ಲಿ ಗೆಲುವು ಖಚಿತವಾದ ತಕ್ಷಣ ಎ.ಪಿ.ರಂಗನಾಥ್‌ಗೆ ಜೈಕಾರ ಕೂಗುತ್ತಾ ಕುಣಿದು ಸಂಭ್ರಮಿಸಿದರು. ರಂಗನಾಥ್‌ ಅವರನ್ನು ಹೆಗಲ ಮೇಲೆ ಕೂರಿಸಿಕೊಂಡು ಕುಣಿದು ಕುಪ್ಪಳಿಸಿದರು. ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರು ಸೋಲು ಖಚಿತವಾದ ಕೂಡಲೇ ಫಲಿತಾಂಶ ಪ್ರಕಟವಾಗುವ ಮುನ್ನವೇ ಸಪ್ಪೆ ಮೋರೆಯಲ್ಲಿ ಮತ ಎಣಿಕೆ ಕೇಂದ್ರದಿಂದ ಹೊರ ನಡೆದರು.

ಎನ್‌ಡಿಎ ಕಾರ್ಯಕರ್ತರ ಗೆಲುವು: ರಂಗನಾಥ್‌

ಈ ಗೆಲುವು ಎನ್‌ಡಿಎ ಕಾರ್ಯಕರ್ತರ ಗೆಲುವು. ಮುಂಬರುವ 2028ರ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಜೇತ ಅಭ್ಯರ್ಥಿ ಎ.ಪಿ.ರಂಗನಾಥ್‌ ಹೇಳಿದರು. ಗೆಲುವು ಸಾಧಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಈ ಗೆಲುವು ನನ್ನ ಬಗ್ಗೆ ಅಪಪ್ರಚಾರ ಮಾಡಿದವರಿಗೆ ಉತ್ತರವಾಗಿದೆ. ಈ ಹಿಂದೆ ನನ್ನ ಸೋಲನ್ನು ಸಂಭ್ರಮಿಸಿದ್ದರು. ನಾನು ಇವತ್ತು ಆ ಕೆಲಸ ಮಾಡಲ್ಲ. ಎಲ್ಲದಕ್ಕೂ ಮತದಾರರು ಉತ್ತರ ನೀಡಿದ್ದಾರೆ. ಇವಿಎಂ ಹ್ಯಾಕ್‌ ಎಂದಿದ್ದರು. ಇವತ್ತು ಬ್ಯಾಲೆಟ್‌ನಲ್ಲಿ ನಮಗೆ ಜಯ ಸಿಕ್ಕಿದೆ. ಕಾಂಗ್ರಸ್‌ಗೆ ಈಗ ಮಾತನಾಡಲು ಉತ್ತರ ಇಲ್ಲ ಎಂದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕರೆ ಮಾಡಿದ್ದರು. ನನ್ನ ಆಸೆ ಈಡೇರಿಸಿದೆ ಎಂದು ಸಂತಸಪಟ್ಟರು. ನನ್ನ ಈ ಗೆಲುವನ್ನು ಎಚ್‌.ಡಿ.ದೇವೇಗೌಡರಿಗೆ ಸಮರ್ಪಿಸುತ್ತೇನೆ ಎಂದು ಭಾವುಕರಾದ ರಂಗನಾಥ್‌, ಬೆಂಗಳೂರು ಶಿಕ್ಷಕರು ನನಗೆ ಆಶೀರ್ವಾದ ಮಾಡಿದ್ದಾರೆ. ಇವಿಎಂ, ಎಸ್ಐಆರ್‌ ಬಗ್ಗೆ ಮಾತನಾಡುವ ಕಾಂಗ್ರೆಸ್‌ನವರಿಗೆ ಈಗ ಉತ್ತರವಿಲ್ಲ. ಬೋಗಸ್‌ ವೋಟ್ ಮಾಡುತ್ತಿದ್ದ ಕಾಂಗ್ರೆಸ್‌ ಅಭ್ಯರ್ಥಿಗೆ ಸೋಲಾಗಿದೆ. ಶಿಕ್ಷಕರ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆಯಿಂದ ವಾಪಾಸ್ ಪಡೆದಿದ್ದೇವೆ. ಕಾಂಗ್ರೆಸ್‌ ಸೋಲನ್ನು ನಾನು ಸಂಭ್ರಮಿಸಲ್ಲ ಎಂದು ಹೇಳಿದರು.

 ವಿಜಯೋತ್ಸವಕ್ಕೆ ಸಜ್ಜಾಗಿದ್ದ ಪುಟ್ಟಣ್ಣ ಬೆಂಬಲಿಗರಿಗೆ ನಿರಾಸೆ:

ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ ಅವರು ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿ ಅವರ ಬೆಂಬಲಿಗರು ಗೆಲುವಿನ ವಿಜಯೋತ್ಸವ ಆಚರಿಸಲು ಸಿದ್ಧತೆ ನಡೆಸಿದ್ದರು. ಇದಕ್ಕಾಗಿ ಹೂವಿನಿಂದ ಅಲಂಕೃತಗೊಂಡಿದ್ದ ತೆರೆದ ವಾಹನ ಸಿದ್ಧಪಡಿಸಿ ಮತ ಎಣಿಕೆ ಕೇಂದ್ರದ ಬಳಿ ತಂದು ನಿಲ್ಲಿಸಿದ್ದರು. ಆದರೆ, ಮೊದಲ ಸುತ್ತು ಹೊರತುಪಡಿಸಿ ಉಳಿದೆಲ್ಲ ಸುತ್ತುಗಳಲ್ಲಿ ರಂಗನಾಥ್‌ ಮುನ್ನಡೆ ಕಾಯ್ದುಕೊಂಡು ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಗೆಲುವು ಸಾಧಿಸಿದರು. ಹೀಗಾಗಿ ಪುಟ್ಟಣ್ಣ ಬೆಂಬಲಿಗರಿಗೆ ಭಾರೀ ನಿರಾಸೆಯಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕನ್ನಡಿಗರ ನೌಕರಿಗಾಗಿ ಮಹಿಷಿ ವರದಿ ಮಂಡಿಸುವಂತೆ ಒತ್ತಾಯ
ಮಹಿಳೆ, ಮಕ್ಕಳ ಸುರಕ್ಷತೇಲಿ ಬೆಂಗ್ಳೂರು 1ನೇ ಸ್ಥಾನ : ಸೀಮಂತ್‌