ಹಾವೇರಿ: ಪರಿಶಿಷ್ಟ ಜಾತಿಯ ಮಾದಾರ, ಸಮಗಾರ, ಡೊಹರ, ಮಚಗಾರ ಸಮುದಾಯದವರಿಗೆ ಒಳ ಮೀಸಲಾತಿ ನೀಡುವಂತೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಉದ್ದೇಶದಿಂದ ಆ. 1ರಂದು ಜಿಲ್ಲಾಡಳಿತ ಭವನದ ಎದುರು ಶಾಂತಿಯುತ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ಲಿಡ್ಕರ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬದಲಾದ ಕಾಲಘಟ್ಟದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಕಳೆದ 2024 ಆ. 1ರಂದು ಸುಪ್ರೀಂಕೋರ್ಟಿನ ಸಂವಿಧಾನ ಪೀಠ ಒಳಮೀಸಲಾತಿ ಜಾರಿ ಮಾಡುವ ಅಧಿಕಾರ ರಾಜ್ಯಗಳಿಗೆ ಕೊಡುವ ಐತಿಹಾಸಿಕ ತೀರ್ಪು ಪ್ರಕಟಿಸಿತು. ಈ ತೀರ್ಪು ಬಂದು ವರ್ಷವಾಗಿದ್ದು, ಒಳಮೀಸಲಾತಿ ಮಾಡುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಅಸ್ಪೃಶ್ಯರಲ್ಲಿ ಅಸ್ಪೃಶ್ಯರಾದ ಎಡಗೈ ಸಮಾಜದವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆ. 15ರೊಳಗಾಗಿ ಅಂತಃಕರಣ ಮನಸ್ಸಿನಿಂದ ಒಳಮೀಸಲಾತಿ ಜಾರಿಗೊಳಿಸಬೇಕು. ಇಲ್ಲದಿದ್ದರೇ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ. ಇದಕ್ಕೂ ಪೂರ್ವದಲ್ಲಿ ಆ. 1ರಂದು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದವರು ಭಾಗವಹಿಸಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡಚಪ್ಪ ಮಾಳಗಿ, ಹೊನ್ನೇಶ್ವರ ತಗಡಿನಮನಿ, ಅಶೋಕ ಮರೆಣ್ಣನವರ, ಮಾಲತೇಶ ಯಲ್ಲಾಪುರ, ಸುಭಾಸ ಬೆಂಗಳೂರ, ಮಲ್ಲೇಶ ಕಡಕೋಳ, ತಿರಕಪ್ಪ ಚಿಕ್ಕೇರಿ, ಮಾರುತಿ ಬಣಕಾರ ಸೇರಿದಂತೆ ಇತರರು ಇದ್ದರು.