ಜಿಲ್ಲಾ ನೋಂದಣಿ ಅಧಿಕಾರಿಗಳಿಂದ ಅಧಿಕೃತ ಲೈಸನ್ಸ್ ಪಡೆದು ಪ್ರತಿ ವರ್ಷ ಸರ್ಕಾರಕ್ಕೆ ಲೈಸನ್ಸ್ ನವೀಕರಣ ಶುಲ್ಕ ಪಾವತಿಸಿ ನಿಯಮಾನುಸಾರ ಲೈಸನ್ಸ್ ನವೀಕರಿಸಿಕೊಳ್ಳುತ್ತಲಿದ್ದೇವೆ
ರಾಣಿಬೆನ್ನೂರು: ಕರ್ನಾಟಕ ನೋಂದಣಿ ನಿಯಮಗಳನ್ವಯ ಅಧಿಕೃತ ಲೈಸನ್ಸ್ ಇಲ್ಲದೇ ಅನಧಿಕೃತವಾಗಿ ನೋಂದಣಿಗೆ ಸಂಬಂಧಿಸಿದ ಪತ್ರಗಳನ್ನು ತಯಾರಿಸಿ ಉಪ ನೋಂದಣಾಧಿಕಾರಿಗಳ ಆಫೀಸಿನಲ್ಲಿ ಖುದ್ದಾಗಿ ಹಾಜರಾಗಿ ನೋಂದಾಯಿಸುತ್ತಿರುವ ಏಜೆಂಟರುಗಳನ್ನು ನಿರ್ಬಂಧಿಸುವಂತೆ ಆಗ್ರಹಿಸಿ ಜಿಲ್ಲೆಯ ಅಧಿಕೃತ ಲೈಸೆನ್ಸ್ ಹೊಂದಿರುವ ಪತ್ರ ಬರಹಗಾರರು ಶನಿವಾರ ಸ್ಥಳೀಯ ಉಪ ನೋಂದಣಿ ಅಧಿಕಾರಿ ವಿಶ್ವನಾಥ ಸುಭೇದಾರಗೆ ಮನವಿ ಸಲ್ಲಿಸಿದರು.
ಜಿಲ್ಲಾ ನೋಂದಣಿ ಅಧಿಕಾರಿಗಳಿಂದ ಅಧಿಕೃತ ಲೈಸನ್ಸ್ ಪಡೆದು ಪ್ರತಿ ವರ್ಷ ಸರ್ಕಾರಕ್ಕೆ ಲೈಸನ್ಸ್ ನವೀಕರಣ ಶುಲ್ಕ ಪಾವತಿಸಿ ನಿಯಮಾನುಸಾರ ಲೈಸನ್ಸ್ ನವೀಕರಿಸಿಕೊಳ್ಳುತ್ತಲಿದ್ದೇವೆ. ಇದಲ್ಲದೆ ಸರ್ಕಾರ ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳು ಕಾಲಕಾಲಕ್ಕೆ ನೀಡುತ್ತಿರುವ ನಿರ್ದೇಶನ ಪಾಲಿಸುತ್ತ ಕಾನೂನು ಬದ್ಧವಾಗಿ ಸಾರ್ವಜನಿಕರ ದಸ್ತಾವೇಜು ಬರೆಯುತ್ತ ಬಂದಿರುತ್ತೇವೆ. ನಮ್ಮೆಲ್ಲರ ಕುಟುಂಬ ನಿರ್ವಹಣೆಯು ಈ ಪತ್ರ ಬರೆಯುವ ವೃತ್ತಿಯನ್ನೇ ಅವಲಂಭಿಸಿರುತ್ತದೆ. 2003ನೇ ಸಾಲಿನಲ್ಲಿ ಛಾಪಾ ಕಾಗದಗಳು ರದ್ದಾಗಿದ್ದರಿಂದ ಸ್ಟಾಂಪ್‌ವೆಂಡರ್ ವೃತ್ತಿಯನ್ನೇ ಅವಲಂಭಿಸಿದ ನಮ್ಮಲ್ಲಿಯ ಬಹುತೇಕ ಸ್ಟಾಂಪ್‌ವೆಂಡರಗಳಿಗೂ ಕೂಡ ಉದ್ಯೋಗ ಒದಗಿಸುವ ಉದ್ದೇಶದಿಂದ ನಿಯಮಕ್ಕೆ ಸರ್ಕಾರದಿಂದ ತಿದ್ದುಪಡಿ ತಂದು ಪತ್ರ ಬರಹಗಾರರ ಲೈಸನ್ಸ್‌ಗಳನ್ನು ನೀಡಿದ್ದು. ವಸ್ತು ಸ್ಥಿತಿ ಹೀಗಿದ್ದರೂ ಸರ್ಕಾರವು ನೂತನವಾಗಿ ಜಾರಿಗೆ ತಂದಿರುವ ಕಾವೇರಿ-2 ಯೋಜನೆಯಡಿ ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿನ ಸೈಬರ್ ಸೆಂಟರ್, ಡಿಟಿಪಿ ಸೆಂಟರ್‌ಗಳಲ್ಲಿ ಪತ್ರ ಬರಹಗಾರರ ಲೈಸನ್ಸ್ ಹೊಂದಿರದ ಅನಧಿಕೃತ ವ್ಯಕ್ತಿಗಳು ದಸ್ತಾವೇಜುಗಳನ್ನು ಆನ್‌ಲೈನ್ ಮೂಲಕ ಸಲ್ಲಿಸುತ್ತಿದ್ದಾರೆ. ತಾವೇ ದಸ್ತಾವೇಜುಗಳನ್ನು ಡ್ರಾಫ್ಟ್ ಮಾಡುತ್ತಲಿದ್ದಾರೆ. ಇದರಿಂದ ನಮ್ಮ ವೃತ್ತಿ ಜೀವನಕ್ಕೆ ಪೆಟ್ಟು ಬೀಳುವುದಲ್ಲದೇ ಮುಗ್ಧ ಸಾರ್ವಜನಿಕರಿಗೆ ಕೌಶಲ್ಯವಿಲ್ಲದ ಅನಧಿಕೃತ ವ್ಯಕ್ತಿಗಳಿಂದ ದಸ್ತಾವೇಜುಗಳನ್ನು ತಯಾರಿಸಿ ಕೊಟ್ಟಂತಾಗುತ್ತದೆ. ದಸ್ತಾವೇಜುಗಳು ಕಾನೂನಾತ್ಮಕವಾಗಿ ಜಾರಿಗೊಳ್ಳುವಿಕೆ, ನಿಖರತೆ ಮತ್ತು ದಸ್ತಾವೇಜಿನಲ್ಲಿ ಒಳಗೊಂಡ ಪಕ್ಷಗಾರರ ಹಕ್ಕುಗಳು ರಕ್ಷಿಸುವಿಕೆ ಖಚಿತ ಪಡಿಸಿಕೊಳ್ಳಬೇಕಾದ್ದರಿಂದ ದಸ್ತಾವೇಜು ಬರೆಯುವುದು/ರಚಿಸುವದು ಬಹು ಮುಖ್ಯ ಪಾತ್ರ ವಹಿಸುತ್ತದೆ. ಕಾರಣ ದಸ್ತಾವೇಜುಗಳನ್ನು ಬರೆಯುವ ಕೆಲಸವು ಬಹಳ ಜವಾಬ್ದಾರಿಯುತ ಕೆಲಸವಾಗಿರುತ್ತದೆ. ಆದಾಗ್ಯೂ ಕಾನೂನು ಪದವಿ ಪಡೆಯದವರು, ಅಧಿಕೃತ ಲೈಸನ್ಸ್ ಪಡೆಯದವರು ಡಿಟಿಪಿ ಕೇಂದ್ರಗಳಲ್ಲಿ ಅನಧಿಕೃತವಾಗಿ ದಸ್ತಾವೇಜು ತಯಾರಿಸುತ್ತಿರುವದು ನೋಂದಣಿ ಕಾಯ್ದೆ, 1908ರ ಕಲಂ 80ಬಿಯ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಇದರ ಬಗ್ಗೆ ಮೌಖಿಕವಾಗಿ ನಿಮ್ಮ ಗಮನಕ್ಕೆ ತಂದರೂ ಕೂಡ ಇದುವರೆಗೂ ಅಂತಹ (ಅನಧಿಕೃತ) ವ್ಯಕ್ತಿಗಳ ಮೇಲೆ ನೀವು ಯಾವುದೇ ಕ್ರಮ ಜರುಗಿಸಿಲ್ಲ. ಈ ಅನಧಿಕೃತ ವ್ಯಕ್ತಿಗಳು ಸಾರ್ವಜನಿಕರಿಂದ ಬೇಕಾಬಿಟ್ಟಿಯಾಗಿ ಲಂಗುಲಗಾಮಿಲ್ಲದೇ ಹಣ ಪಡೆಯುತ್ತಿರುವ ವಿಷಯ ಸಹ ನಿಮ್ಮ ಗಮನಕ್ಕೆ ತಂದಿದ್ದೆವೆ. ಆದ್ದರಿಂದ ಇಂತಹ ಅನಧಿಕೃತ ವ್ಯಕ್ತಿಗಳು ಕಚೇರಿಗೆ ಬರದಂತೆ ನಿರ್ಬಂಧಿಸಬೇಕು ಮತ್ತು ಅನಧಿಕೃತ ಪತ್ರ ಬರೆಯುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಜಿಲ್ಲಾ ಪತ್ರ ಬರಹಗಾರ ಸಂಘ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ, ಕಾರ್ಯದರ್ಶಿ ರಮೇಶ ಕುಲಕರ್ಣಿ, ಶಿವಪುತ್ರಪ್ಪ ಸಪಗಾವಿ, ಶಿವಣ್ಣ ಮೊಟೆಬೆನ್ನೂರ, ಮೋಹನ ಗಾಜಿಪುರ, ವೆಂಕಣ್ಣ ಪಾಟೀಲ, ಶಿವಾನಂದ ಕುಲಕರ್ಣಿ, ಬಸವರಾಜ ಹಡಗಲಿ, ಪ್ರದೀಪ ಕುಲಕರ್ಣಿ, ವಿನಾಯಕ ಲಕ್ಷ್ಮೇಶ್ವರ, ಶ್ರೀನಿವಾಸ ಖಂಡೆ, ವಾದಿರಾಜ ಉಡುಪಿ, ಗದಿಗೆಪ್ಪ ಕಮ್ಮಾರ, ರಾಮಣ್ಣ ಮುದ್ರಿ, ಗುಲಮ್ ಹಾಲಿಶ, ನಾಗರಾಜ ಚಂದಾಪುರ, ಅಬ್ದುಲ್ ರಷೀದ್ ಅತ್ತಾರ, ವಿ.ಎಸ್.ಕಲ್ಯಾಣಮಠ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.