ಗದಗ: ಶಿರಹಟ್ಟಿ ಪಟ್ಟಣದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ನಡೆದಿರುವ ಸಿಸಿ ಕಾಮಗಾರಿ ಕಳಪೆ ಮಟ್ಟದ ಅಗಿದ್ದು, ತನಿಖೆ ನಡೆಸಿ ಸೂಕ್ತ ಕ್ರಮ ವಹಿಸಬೇಕೆಂದು ಒತ್ತಾಯಿಸಿ ಕರವೇ(ಪ್ರವೀಣಶೆಟ್ಟಿ ಬಣ) ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಶಿರಹಟ್ಟಿ ವ್ಯಾಪ್ತಿಯ ವಾರ್ಡ್ ನಂ. 11ರಲ್ಲಿ ಕಚೇರಿ ಪ್ಲಾಟ್‌ನಲ್ಲಿ ನಡೆದಿ ಸಿಸಿ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದು, ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದು, ಈ ಕಾಮಗಾರಿಗೆ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ.
ಕಾಮಗಾರಿ ನಡೆಯುವ ವೇಳೆ ಸಂಬಂಧಪಟ್ಟ ಇಲಾಖೆಯ ಅಭಿಯಂತರರು ಕಾಮಗಾರಿ ವೀಕ್ಷಣೆ ಮಾಡಿಲ್ಲ. ಕಾಮಗಾರಿಯ ಅಂದಾಜು ವೆಚ್ಚ, ಕಾಮಗಾರಿಯ ವಿವರ ನಾಮಫಲಕ ಹಾಕಿಲ್ಲ. ಕಾಮಗಾರಿಯ ಅಂದಾಜು ಪತ್ರಿಕೆ ಕೇಳಿದಾಗ ಯಾವುದೇ ಮಾಹಿತಿ ನೀಡದೆ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದ್ದಾರೆ. ಈ ಕಾಮಗಾರಿಯನ್ನು ನಿಯಮಾನುಸಾರವಾಗಿ ಮಾಡದೆ ಮೆಟ್ಲಿಂಗ್ ಸರಿಯಾಗಿ ಮಾಡದೆ, ಮೋರಂ ಹಾಕದೇ ರಸ್ತೆಗೆ ಕೊಳಚೆ ರಾಡಿಯಲ್ಲಿಯೇ ಕಾಂಕ್ರಿಟ್ ಮಾಡಿದ್ದು, ಅದು ಕೇವಲ 2.5 ಇಂಚಿನಿಂದ 3 ಇಂಚಿನಷ್ಟು ಕಾಂಕ್ರಿಟ್ ಹಾಕಿದ್ದಾರೆ.ಕಾಮಗಾರಿಗೆ ಒಂದು ದಿನವು ಕ್ಯೂರಿಂಗ್ ಮಾಡಿಲ್ಲ. ಸಾರ್ವಜನಿಕರು ಪ್ರಶ್ನೆ ಮಾಡಿದಾಗ ಇಷ್ಟು ಹಾಕುತ್ತಿರುವುದೇ ದೊಡ್ಡ ವಿಷಯ. ನೀವು ಯಾರಿಗೆ ಬೇಕಾದರೂ ದೂರು ನೀಡಬಹುದು ಎಂದು ಹಾರಿಕೆ ಉತ್ತರ ನೀಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಜಿಲ್ಲಾಧ್ಯಕ್ಷ ವೆಂಕಟೇಶ ಬೇಲೂರ, ಗೌಸಸಾಬ ಕಲಾವಂತ, ದಾವಲಸಾಬ ಮುಳಗುಂದ, ತಿಮ್ಮಣ್ಣ ಡೋಣಿ, ಶ್ರೀನಿವಾಸ ಭಂಡಾರಿ, ಸಹದೇವ ಕೋಟಿ, ಪರಶುರಾಮ ಬಂಕದಮನಿ, ಗೌಸಸಾಬ ಕಲಾವಂತ, ರಫೀಕ ಕರೇಮನಿ, ಮನ್ಸೂರ ಅಹ್ಮದ ಮಕಾನದಾರ, ಈರಣ್ಣ ಬಾಗೇವಾಡಿ, ಮಲ್ಲು ಸೂರಣಗಿ ಹಾಗೂ ಕಾರ್ಯಕರ್ತರು ಇದ್ದರು.