ಕೊಪ್ಪಳ: ಜಿಲ್ಲೆಯ ವಸತಿ ನಿಲಯಗಳಲ್ಲಿ ಇರುವ ಮಕ್ಕಳಿಗೆ ಸರ್ಕಾರಿಂದ ಸಿಗುವ ಎಲ್ಲ ರೀತಿಯ ಸೌಲಭ್ಯ ನೀಡುವ ಮೂಲಕ ಅವರಿಗೆ ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯ ಸುರೇಶ ವಂಟಿಗೋಡಿ ಹೇಳಿದರು.
ಕೊಪ್ಪಳ ನಗರದ ಎರಡು ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಎಲ್ಲ ಮಕ್ಕಳು ಸರಿಯಾದ ಸೌಲಭ್ಯ ಸಿಗುತ್ತಿದೆ ಎಂದು ಒಳ್ಳೆಯ ಅಭಿಪ್ರಾಯ ಹೇಳಿದ್ದಾರೆ. ಆದಾಗ್ಯೂ ಎಲ್ಲ ವಸತಿ ನಿಲಯಗಳಲ್ಲಿ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಒಳ್ಳೆಯ ಪೌಷ್ಟಿಕಾಂಶ ಆಹಾರ ನೀಡಬೇಕು. ಬೆಳಗ್ಗೆ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಪೋಸ್ಟ್ ಮ್ಯಾಟ್ರಿಕ್ ವಸತಿ ನಿಲಯಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಡ್ರೆಸಚೈಜ್ ಕೊಠಡಿ ವ್ಯವಸ್ಥೆ ಮಾಡಬೇಕು.ತಹಸೀಲ್ದಾರರು ಆಗಾಗ ವಸತಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಬೇಕು ಎಂದರು.
ಹಾಸ್ಟೆಲ್‌ಗಳಲ್ಲಿ ಸೆಕ್ಯುರಿಟಿ ಗಾರ್ಡ್‌ಗಳು ಇರಬೇಕು. ವಸತಿ ನಿಲಯದ ರಸ್ತೆಗಳು ಸರಿಯಾಗಿ ಇರುವುದರ ಜತೆಗೆ ಬೀದಿ ದೀಪಗಳನ್ನು ಎಲ್ಲ ಕಡೆ ಹಾಕಬೇಕು. ಪ್ರತಿ ತಿಂಗಳು ವಸತಿ ನಿಲಯಗಳ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ಒಂದು ವಸತಿ ನಿಲಯಗಳಲ್ಲಿ ಹೆಚ್ಚಿನ ಮಕ್ಕಳಿದ್ದರೆ ಅವರಿಗೆ ಪ್ರತ್ಯೇಕ ಮತ್ತೊಂದು ವಸತಿ ನಿಲದ ವ್ಯವಸ್ಥೆ ಮಾಡಬೇಕು. ಆಗಾಗ ಅಧಿಕಾರಿಗಳು ಸರಪ್ರೈಸ್ ಭೇಟಿ ನೀಡಿ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಸರಿಯಾಗಿ ಊಟ ನೀಡಲಾಗುತ್ತಿದೆಯೆ ಹಾಗೂ ಅವರಿಗೆ ಸರ್ಕಾರದ ಸೌಲಭ್ಯಗಳು ಉತ್ತಮ ರೀತಿಯಲ್ಲಿ ಸಿಗುತ್ತಿವೆಯೆ ಎಂದು ಪರಿಶೀಲನೆ ನಡೆಸಬೇಕು. ಮಕ್ಕಳಿಗೆ ಯಾವುದೇ ಕಾರಣಕ್ಕೆ ಕಡಿಮೆ ನ್ಯೂಟ್ರಿಷನ್ ಆಹಾರ ನೀಡುವ ಹಾಗಿಲ್ಲ. ಅವರಿಗೆ ತಮ್ಮ ಮೆನ್ಯೂ ಪ್ರಕಾರ ಆಹಾರ ನೀಡಬೇಕೆಂದರು.ಪೊಲೀಸ್ ಠಾಣೆಗಳಿಗೆ ದೂರು ಕೊಡಲು ಬರುವ ಸಾರ್ವಜನಿಕರಿಗೆ ಜಿಲ್ಲೆಯ ಠಾಣೆಗಳಲ್ಲಿ ವೇಟಿಂಗ್ ಹಾಲ್‌ಗಳ ವ್ಯವಸ್ಥೆ ಮಾಡಬೇಕೆಂದು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ನಗರಸಭೆಯವರು ಸಾರ್ವಜನಿಕರ ಸ್ಥಳಗಳ ಸ್ವಚ್ಛತೆ ಜತೆಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳು ಜಿಲ್ಲೆಯಲ್ಲಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕೆಂದು ಹೇಳಿದರು.
ಈ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕ ಅಜ್ಜಪ್ಪ ಸೊಗಲದ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ನಾಗಮಣಿ ಹೊಸಮನಿ, ಕೊಪ್ಪಳ ತಹಸೀಲ್ದಾರ ವಿಠಲ ಚೌಗಲಾ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪೊಲೀಸ್, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.