ರಾಜ್ಯಪಾಲರು, ಮುಖ್ಯಮಂತ್ರಿಗಳಿಗೆ ಮತ್ತು ಶಿಕ್ಷಣ ಸಚಿವರಿಗೆ ಮನವಿ
ಈ ಬಾರಿಯ ಸಿ.ಇ.ಟಿ. ಪರೀಕ್ಷೆ ಬರೆಯಲು ಹೋಗುವಾಗ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅವರ ಪವಿತ್ರತೆ ಸಾರುವ ಜನಿವಾರ ತೆಗೆಸಿದ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ ದಂಡ ವಿಧಿಸಿ ಅದನ್ನು ವಿದ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ನೀಡಬೇಕೆಂದು ಆಗ್ರಹಿಸಿ ಕೊಪ್ಪ ತಾಲೂಕು ಬ್ರಾಹ್ಮಣ ಮಹಾಸಭಾ ಮತ್ತು ತಾಲೂಕು ವಿಪ್ರ ಮಹಿಳಾ ವೇದಿಕೆಯಿಂದ ತಹಸೀಲ್ದಾರರ ಮುಖಾಂತರ ರಾಜ್ಯಪಾಲರು, ಮುಖ್ಯಮಂತ್ರಿಗಳಿಗೆ ಮತ್ತು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಜಿ.ಎಸ್. ಮಹಾಬಲ ರಾವ್ ಮಾತನಾಡಿ ಹಿಂದಿನ ವರ್ಷ ಇದೇ ರೀತಿ ಜನಿವಾರ ತೆಗೆಸಿ ನಂತರ ಕೋರ್ಟ್ ಮುಂದೆ ಸರ್ಕಾರದಿಂದ ಮುಚ್ಚಳಿಕೆ ಬರೆದು ಕೊಟ್ಟರೂ ಸಹ ಮತ್ತೆ ಇದೇ ರೀತಿ ನಮ್ಮ ಸಮಾಜಕ್ಕೆ ಅವಮಾನಿಸಲು ಉದ್ದೇಶಪೂರ್ವಕವಾಗಿ ರಾಜ್ಯದ ಮೂರುಕಡೆ ಜನಿವಾರ ತೆಗೆಸಿ ಬ್ರಾಹ್ಮಣ ವಿದ್ಯಾರ್ಥಿಗಳ ಮನೋಸ್ಥೈರ್ಯ ಕುಸಿಯುವಂತೆ ಮಾಡಿ ಅವರ ವಿದ್ಯಾಭ್ಯಾಸಕ್ಕೆ ತೊಂದರೆ ನೀಡಲಾಗಿದೆ. ಇದನ್ನು ನಮ್ಮ ಮಹಾಸಭಾದಿಂದ ಉಗ್ರವಾಗಿ ಖಂಡಿಸಲಾಗುವುದು. ಮುಂದೆ ಈ ರೀತಿ ಪ್ರಕರಣ ಕಂಡುಬಂದಲ್ಲಿ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಸಿದರು. ಕೊಪ್ಪ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆಸಕುಡಿಗೆ ಕೃಷ್ಣ ಮೂರ್ತಿ ಮನವಿ ಪತ್ರ ಓದಿ ತಹಸೀಲ್ದಾರ್ ಗೆ ನೀಡಿದರು. ಈ ಸಂಧರ್ಭದಲ್ಲಿ ಬ್ರಾಹ್ಮಣ ಮಹಾಸಭಾದ ಪ್ರಮುಖರಾದ, ದಿವಾಕರ್ ಭಟ್, ಪ್ರಕಾಶ್ ಸಿ.ಎಚ್. ಬಿಷೇಜ್ ಭಟ್, ವಿಪ್ರ ಮಹಿಳಾ ಬಳಗದ ರೇಖಾ ಉದಯಶಂಕರ್, ಅನಿತಾ, ದೀಪ್ತಿ ಪ್ರಸನ್ನ ಹಾಗೂ ವಿಪ್ರ ನೌಕರರ ಸಂಘದ ಉದಯಕುಮಾರ್, ಗಣಪತಿ ಭಟ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.