ಕನ್ನಡಪ್ರಭ ವಾರ್ತೆ ಸುರಪುರ
ರೈತರ ಬೆಂಬಲಕ್ಕೆ ನಿಲ್ಲದ, ಕಬ್ಬು ಕಟಾವಿಗೆ ಸಹಕರಿಸದ, ದಲಿತರ ಮೇಲಿನ ದೌರ್ಜನ್ಯ ನಡೆಸುತ್ತಿರುವ ಪ್ರಭಾವಿಗಳ ವಿರುದ್ಧ ಕ್ರಮ ಕೈಗೊಳ್ಳದ ಆರಕ್ಷಕರ ನೀತಿ ವಿರೋಧಿಸಿ, ರೈತ ಕುಟುಂಬ ಮತ್ತು ದಲಿತ ಸಂಘಟನೆ ಸದಸ್ಯರು ಶನಿವಾರದಿಂದ ನಗರದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.ಈ ವೇಳೆ ಮಾತನಾಡಿದ ರಾಜ್ಯ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಂಚಾಲಕ ನಿಂಗಣ್ಣ ಗೋನಾಲ, ಮತಕ್ಷೇತ್ರದ ಬೈಲಕೊಂಟಿ ಗ್ರಾಮದಲ್ಲಿ ದಲಿತ ಕುಟುಂಬವೊಂದು ಕಬ್ಬು ಬೆಳೆದಿದ್ದು, ಕಟಾವಿಗೆ ಅಡ್ಡಿಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ರೈತರಿಗೆ ರಕ್ಷಣೆಗೆ ನೀಡಬೇಕು ಎಂದು ಸುರಪುರ ಡಿವೈಎಸ್‌ಪಿಗೆ ಡಿ.28ರಂದು ಮನವಿ ಸಲ್ಲಿಸಿದರೂ ರೈತರಿಗೆ ರಕ್ಷಣೆ ನೀಡದೆ ಪ್ರಭಾವಿಗಳಿಗೆ ಸಾಥ್ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿಯ ರೈತ ಕುಟುಂಬವೊಂದು 6.25 ಎಕರೆಯಲ್ಲಿ ಸಾಲಶೂಲ ಮಾಡಿ ಕಬ್ಬು ಬೆಳೆದಿದ್ದು, ಕಟಾವಿಗೆ ಗುಂಪೊಂದು ಅಡ್ಡಿಪಡಿಸುತ್ತಿದೆ. ಸಾಲಬಾಧೆಯಿಂದ ಜೀವಕ್ಕೆ ಹಾನಿ ಮಾಡಿಕೊಂಡರೆ ಯಾರು ಹೊಣೆ? ದಲಿತ ರೈತ ಜೀವ ರಕ್ಷಿಸಬೇಕಿದೆ. ದಲಿತರಿಗೆ ರಕ್ಷಣೆ ಇಲ್ಲವೆಂದ ಮೇಲೆ ಸಾಮಾನ್ಯರ ಗತಿಯೇನು? ಎಸ್‌ಸಿ ಕುಂದುಕೊರತೆ ಸಭೆ ಕರೆದು ನಿಮ್ಮ ಸಂಕಷ್ಟವೇನು? ಕೇಳುವ ಪೊಲೀಸರು ಈಗ ಎಲ್ಲಿದ್ದಾರೆ? ಎಂದು ಪ್ರಶ್ನಿಸಿದರು.ದಲಿತ ರೈತ ಕುಟುಂಬಕ್ಕೆ ನ್ಯಾಯ ಒದಗಿಸುವ ಬದಲು ಪುಂಡರ ಗುಂಪಿಗೆ ಪೊಲೀಸ್ ಇಲಾಖೆ ಸಾಥ್ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಗೃಹ ಸಚಿವ ಪರಮೇಶ್ವರರು ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ ಎರಡು ದಿನದಲ್ಲಿ ಕಬ್ಬು ಕಟಾವ್ ಮಾಡಿಸಲು ಆಗದಿದ್ದರೆ ಪೊಲೀಸ್ ಇಲಾಖೆಯೇ ರೈತರ ನಷ್ಟ ಹೊರಬೇಕು. ಇದರ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಹಿಂಜರಿಯುವುದಿಲ್ಲ ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಸಂಚಾಲಕರಾದ ನಾಗರಾಜ ಓಕಳಿ, ಕೆ.ಆರ್. ಬಡಿಗೇರ ಕೆಂಭಾವಿ ಮಾತನಾಡಿ, ಬೈಲಕುಂಟಿ ಗ್ರಾಮದಲ್ಲಿ 11 ಜನರ ಗುಂಪೊಂದು ಹಲವಾರು ವರ್ಷಗಳಿಂದ ಅಕ್ರಮಕೂಟ ರಚಿಸಿಕೊಂಡಿದೆ. ಇದಕ್ಕೆ ಪ್ರಭಾವಿ ರಾಜಕೀಯ ಶ್ರೀರಕ್ಷೆಯಿದೆ. ಈ ಗ್ರಾಮದಲ್ಲಿ ಅನೇಕ ಅಮಾಯಕರ ಮೇಲೆ ದೌರ್ಜನ್ಯ, ಅಮಾಯಕ ಹೆಣ್ಣು ಮಕ್ಕಳ ಮೇಲೆ ಗುಂಡಾವರ್ತನೆ ಮಾಡುತ್ತಿದ್ದಾರೆ. ಇದರ ವಿರುದ್ಧ ದಲಿತ ಸಂಘಟನೆ ಮನವಿಯನ್ನು ನೀಡಿದರು ತಾಲೂಕು ಆಡಳಿತ ಹಾಗೂ ಜಿಲ್ಲಾ ಆಡಳಿತ ಇದಾವುದಕ್ಕೆ ಸೊಪ್ಪು ಹಾಕದೆ ಮೌನಕ್ಕೆ ಶರಣಾಗಿರುವುದು ಯಾದಗಿರಿ ಜಿಲ್ಲೆಯಲ್ಲಿ ದಲಿತರಿಗೆ ನ್ಯಾಯವಿಲ್ಲದಂತಾಗಿದೆ. ದಲಿತ ರೈತ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಸುರಪುರ ಪೊಲೀಸ್ ಉಪವಿಭಾಗದ ಕಚೇರಿ ಎದುರು ವಿವಿಧ ರೀತಿಯ ವಿನೂತನ ಶೈಲಿಯ ಪ್ರತಿಭಟನೆ ನಡೆಯುತ್ತದೆ ಎಂದು ಎಚ್ಚರಿಸಿದರು.ಸದಾಶಿವ ಬೊಮ್ಮನಹಳ್ಳಿ, ಧರ್ಮಣ್ಣ ಚಿಂಚೋಳಿ, ರಮೇಶ ಪೂಜಾರಿ, ನಾಗು ಗೋಗಕೇರಾ, ಚಂದ್ರಕಾಂತ ದೀವಳಗುಡ್ಡ, ಮಾನಪ್ಪ ಶೆಳ್ಳಗಿ, ಭೀಮಣ್ಣ ಅಡ್ಡೊಡಗಿ, ಚಂದ್ರು ನಡಿಗೇರಾ, ಅನಿಲ್ ಜಿ. ಕಟ್ಟಿಮನಿ, ಚಂದಪ್ಪ, ಚಂದಪ್ಪ ಪತ್ತೆಯಾರ, ಸಾಯಬಣ್ಣ ಎಂಟಮನ, ಅನಿಲ್ ಯಾಳಗಿ ಹಾಗೂ ದಲಿತ ರೈತ ಕುಟುಂಬ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.