ಅಕ್ರಮ ಕಲ್ಲು ಸಾಗಾಟ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

KannadaprabhaNewsNetwork |  
Published : Jun 22, 2025, 11:48 PM IST
ಫೋಟೋ: 20ಎಸ್‌ಕೆಪಿ01 ಶಿಕಾರಿಪುರ ತಾಲೂಕಿನಲ್ಲಿ ಅಕ್ರಮವಾಗಿ ಕಲ್ಲು ಹಾಗೂ ಮರಳು ಸಾಗಾಟ ನಡೆಯುತ್ತಿದ್ದು ತಹಸಿಲ್ದಾರ್ ರವರು ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ನಾಗರಿಕರ ಶಕ್ತಿ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ತಾಲೂಕಿನ ಕಣಿವೆ ಮನೆ, ಜಕ್ಕನಹಳ್ಳಿ ಸೇರಿದಂತೆ ವಿವಿಧ ಗ್ರಾಮದ ಗುಡ್ಡಗಳಲ್ಲಿ ಕಳೆದ ಆರು ತಿಂಗಳಿಂದ ಅಕ್ರಮ ಕಲ್ಲು ಸಾಗಾಟ ಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ನಾಗರಿಕರ ಶಕ್ತಿ ವೇದಿಕೆಯಿಂದ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ತಾಲೂಕಿನ ಕಣಿವೆ ಮನೆ, ಜಕ್ಕನಹಳ್ಳಿ ಸೇರಿದಂತೆ ವಿವಿಧ ಗ್ರಾಮದ ಗುಡ್ಡಗಳಲ್ಲಿ ಕಳೆದ ಆರು ತಿಂಗಳಿಂದ ಅಕ್ರಮ ಕಲ್ಲು ಸಾಗಾಟ ಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ನಾಗರಿಕರ ಶಕ್ತಿ ವೇದಿಕೆಯಿಂದ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಎಸ್.ಯುವರಾಜ ಮಾತನಾಡಿ, ಹುಲ್ಲಿನಕಟ್ಟೆ, ಬಾಳೆಕೊಪ್ಪ ಹಾಗೂ ಈಸೂರು ಗ್ರಾಮದ ಅನೇಕ ಕೆರೆಗಳಲ್ಲಿ ಅಕ್ರಮವಾಗಿ ಮಣ್ಣು ಕಲ್ಲುಗಳನ್ನು ನಿರಂತರವಾಗಿ ಅಕ್ರಮ ಸಾಗಾಣಿಕೆ ಮಾಡಿ ಗುತ್ತಿಗೆದಾರರಿಗೆ, ಖಾಸಗಿ ಲೇಔಟ್‌ಗಳ ಕಾಮಗಾರಿಗಳಿಗೆ ಮಾರಾಟ ಮಾಡುತ್ತಿದ್ದರೂ ಇದುವರೆಗೆ ಯಾವುದೇ ಅಧಿಕಾರಿಗಳು ಕೂಡ ಕಡಿವಾಣ ಹಾಕುವ ಕೆಲಸ ಮಾಡಿಲ್ಲ ಎಂದು ದೂರಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿಗಳು, ಅರಣ್ಯ ಇಲಾಖೆ, ಪೊಲೀಸ್ ಇಲಾಖೆಗಳ ಕೆಲ ಭ್ರಷ್ಟ ಅಧಿಕಾರಿಗಳ ಸಹಕಾರದಿಂದ ಮಣ್ಣುಕಲ್ಲು ಮತ್ತು ಮರಳು ಅಕ್ರಮ ಸಾಗಾಟವಾಗುತ್ತಿದ್ದು, ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಸಾಗರ ಹಾಗೂ ಹೊಸನಗರ ತಾಲೂಕುಗಳಿಂದ ಅಕ್ರಮವಾಗಿ ಮರಳು ಸಾಗಾಟವಾಗುತ್ತಿದ್ದು, ಇಲ್ಲಿಯೂ ಯಾರು ಹೇಳುವರು ಇಲ್ಲ, ಕೇಳುವರು ಇಲ್ಲ ಅನ್ನುವಂತಾಗಿದೆ. ಇದುವರೆಗೆ ಅನಧಿಕೃತವಾಗಿ ಮಣ್ಣು ಕಲ್ಲು ಸಾಗಾಣಿಕೆ ಮಾಡಿ ಗುಡ್ಡದಲ್ಲಿ ಲಕ್ಷಾಂತರ ಮೆಟ್ರಿಕ್ ಟನ್ ಮಣ್ಣು ಕಾಣೆಯಾಗಿದೆ. ಇದಕ್ಕೆ ಕೆಲವು ಇಲಾಖೆಯ ಭ್ರಷ್ಟ ಅಧಿಕಾರಿಗಳೇ ನೇರವಾಗಿ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.

ಕೂಡಲೇ ತಹಸೀಲ್ದಾರ್‌ ಅವರು ಸ್ಥಳ ಪರಿಶೀಲನೆ ಮಾಡಿ ಅಕ್ರಮ ಸಾಗಾಟ ಮಾಡುತ್ತಿರುವವರ ವಿರುದ್ಧ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಶಿಸ್ತುಕ್ರಮ ಕೈಗೊಳ್ಳಬೇಕು. ಜೊತೆಗೆ ಸರ್ಕಾರಕ್ಕೆ ಆಗಿರುವ ನಷ್ಟವನ್ನು ಅಕ್ರಮ ಸಾಗಾಟದಾರರಿಂದ ಹಾಗೂ ಅದಕ್ಕೆ ಕುಮ್ಮಕ್ಕು ನೀಡುತ್ತಿದ್ದ ಅಧಿಕಾರಿಗಳಿಂದ ತುಂಬಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಂ.ವಿಜಯಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ರಾಜಕುಮಾರ್, ರಾಜ್ಯ ಕಾರ್ಯಧ್ಯಕ್ಷ ವಿ.ಜೆ.ಅಮೀರ್, ತಾಲೂಕು ಅಧ್ಯಕ್ಷ ಡಿ.ಡಿ.ಶಿವಕುಮಾರ್, ಮುಖಂಡರಾದ ಇಮಾಮ್ ಸಾಬ್, ಅಹಮದ್ ಅಲಿ, ತೀರ್ಥಪ್ಪ, ಮಲ್ಲೇಶಪ್ಪ, ಗದಿಗೆಪ್ಪ, ಸುರೇಶ್ ಮತ್ತಿತರರಿದ್ದರು.

PREV

Recommended Stories

ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ
12.69 ಲಕ್ಷ ಶಂಕಾಸ್ಪದ ಬಿಪಿಎಲ್‌ ಚೀಟಿ ರಾಜ್ಯದಲ್ಲಿ ಪತ್ತೆ: ಮುನಿಯಪ್ಪ